Latest

ಈ ಪ್ರೌಢ ಶಾಲೆಯಲ್ಲಿ ಈ ವರ್ಷ ಸಂಪೂರ್ಣ ಉಚಿತ ಶಿಕ್ಷಣ

 ಪ್ರಗತಿವಾಹಿನಿ ಸುದ್ದಿ, ಶಿರಸಿ: ಕಳೆದ ಆರುವರೆ ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ನೀಡುತ್ತಿರುವ ಯಡಹಳ್ಳಿಯ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಕೊವಿಡ್ ೧೯ರ ಕಷ್ಟಕ್ಕೆ ವಿನೂತನವಾಗಿ ಸ್ಪಂದಿಸಲು ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆಯಲಿರುವ ಪ್ರೌಢ ಶಾಲೆಯ ಮಕ್ಕಳಿಗೆ ಸಂಪೂರ್ಣ ಉಚಿತ ಪ್ರವೇಶ ಘೋಷಿಸಿದೆ.
ಈ ವಿಷಯ ತಿಳಿಸಿರುವ ಸಮಿತಿಯ ಅಧ್ಯಕ್ಷ ಶ್ರೀಧರ ಹೆಗಡೆ ಮಶೀಗದ್ದೆ,  ಎಂಟು, ಒಂಬತ್ತು ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಅನುದಾನಿತ ಪ್ರೌಢ ಶಾಲೆಯಾದ್ದರಿಂದ ಸರಕಾರದ ಸೌಲಭ್ಯಗಳೂ ಸಿಗಲಿವೆ. ಅಗತ್ಯ ಇದ್ದರೆ ವಿದ್ಯಾರ್ಥಿನೀಯರಿಗೆ ಉಚಿತ ಹಾಸ್ಟೇಲ್ ಸೌಲಭ್ಯ ಕೂಡ ಸಿಗಲಿದೆ ಎಂದು ತಿಳಿಸಿದ್ದಾರೆ.
ಇ ಕಲಿಕಾ ಸೌಲಭ್ಯ, ಗ್ರಂಥಾಲಯ, ವಿಶಾಲ ಕ್ರೀಡಾಂಗಣ ಸಹಿತ ನಗರಕ್ಕೆ ಸಮೀಪದಲ್ಲಿರುವ ಅಪ್ಪಟ ಪರಿಸರದ ವಿದ್ಯಾ ಶಾಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ತರಗತಿಗಳನ್ನೂ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿದ ಸಂಸ್ಥೆಯಲ್ಲಿ ನೆರೆಯ ಬಾಗಲಕೋಟೆಯಿಂದಲೂ ವಿದ್ಯಾರ್ಥಿಗಳು ಆಗಮಿಸಿ ಶಿಕ್ಷಣ ಪಡೆದಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಲು ಇಲ್ಲಿನ ನುರಿತ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಉಚಿತ ಪಠ್ಯ ಪುಸ್ತಕ ಸಹಿತ ಉಳಿಕೆ ಸೌಲಭ್ಯಗಳಿವೆ. ಹೊರ ಪ್ರದೇಶದಿಂದ ಬರುವ ಮಕ್ಕಳಿಗೆ ಉಚಿತ ಬಸ್ ಪಾಸ್ ಸೌಲಭ್ಯಕ್ಕೂ ಸಮಿತಿ ಸಿದ್ದವಿದೆ ಎಂದು ತಿಳಿಸಿದ್ದಾರೆ.
ಪ್ರವೇಶ ಆಸಕ್ತ ಪಾಲಕರು, ವಿದ್ಯಾರ್ಥಿಗಳು ಮುಖ್ಯಾಧ್ಯಾಪಕರು, ವಿದ್ಯೋದಯ ಪ್ರೌಢ ಶಾಲೆ, ಯಡಹಳ್ಳಿ ಶಿರಸಿ ಅಥವಾ ೮೭೬೨೬೦೭೮೫೭ಗೆ ಸಂಪರ್ಕ ಮಾಡಬಹುದು ಎಂದು ಮುಖ್ಯಾಧ್ಯಾಪಕ ಕೆ.ಜಿ.ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button