ವಸತಿ ನಿಲಯಗಳ ಸ್ಥಾಪನೆಗೆ ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹಿಂದುಳಿದ ವರ್ಗಗಗಳ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳ ವಸತಿ ನಿಲಯಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ, ಪ್ರಾದೇಶಿಕ ಕೇಂದ್ರಗಳಲ್ಲಿ ಹೆಚ್ಚುವರಿ ಸೌಲಭ್ಯ ಕಲ್ಪಿಸಲು ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಎಲ್.ನಾಗೇಂದ್ರ ಅವರ ಪ್ರಶ್ನೆಗೆ ಪೂರಕವಾಗಿ ಉತ್ತರಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ವಸತಿ ನಿಲಯಗಳ ಕೊರತೆಯಿಂದ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಕೇಂದ್ರಗಳಲ್ಲಿರುವ ವಸತಿ ನಿಲಯಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಂಬಂಧಪಟ್ಟ ಇಲಾಖೆಗಳ ವಿಶೇಷ ಸಭೆಯನ್ನು ಕರೆದು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
ಆದಾಯ ಹೆಚ್ಚಿಸಲು ಕ್ರಮ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲು ಸರ್ಕಾರ ಈಗಾಗಲೇ ಶ್ರೀನಿವಾಸ ಮೂರ್ತಿ ಅವರ ಏಕಸದಸ್ಯ ಸಮಿತಿಯನ್ನು ರಚಿಸಿದೆ. ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ, ಸಾರ್ವಜನಿಕರಿಗೆ ಹೊರೆಯಾಗದಂತೆ ಸಂಸ್ಥೆಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಅವರು ಶಾಸಕ ಶರತ್ ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದರು.
ಸಂಚಾರ ಮಿತಿ ಹೆಚ್ಚಳ ಪರಿಶೀಲನೆ:
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಬಸ್‌ಪಾಸ್ ಸಂಚಾರ ಮಿತಿಯನ್ನು ೧೦೦ಕಿಮೀಗೆ ಏರಿಸುವ ಬಗ್ಗೆ ಪರಿಶೀಲಿಸುವುದಾಗಿ ಸಚಿವ ಶ್ರೀರಾಮುಲು ಅವರು ತಿಳಿಸಿದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲಿ ಇರುವ ೬೦ಕಿಮೀ ಮಿತಿಯಿಂದ ೧೦೦ಕಿಮೀಗೆ ಹೆಚ್ಚಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ಶೈಕ್ಷಣ ಕ ದಾಖಲೆಗಳನ್ನು ಒದಗಿಸಿ ಸೇವಾಸಿಂಧು ಮೂಲಕ ಕೂಡಾ ಬಸ್ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಹಳೆ ಬಸ್‌ಗಳ ಅನುಪಯುಕ್ತಗೊಳಿಸಲು ಕ್ರಮ: ಕೇಂದ್ರ ಸರ್ಕಾರದ ನೀತಿಯ ಪ್ರಕಾರ ೧೫ ವರ್ಷ ಪೂರೈಸಿದ ಅಥವಾ ೯ಲಕ್ಷ ಕಿಮೀ ಕ್ರಮಿಸಿದ ಸಂಸ್ಥೆಯ ಎಲ್ಲಾ ಬಸ್‌ಗಳನ್ನು ಅನುಪಯುಕ್ತಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಶಾಸಕ ಡಿ.ಕೆ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಸಚಿವರು ಈ ಸ್ಪಷ್ಟನೆ ನೀಡಿದರು. ಅಲ್ಲದೆ ಆರ್ಥಿಕ ಮಿತಿಯನ್ನು ಗಮನದಲ್ಲಿರಿಸಿಕೊಂಡು ಕುಶಾಲನಗರದಲ್ಲಿ ವಿಭಾಗೀಯ ಕಾರ್ಯಾಗಾರ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಶ್ನೆಗೆ ಉತ್ತರಿಸಿದರು.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ: ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ಕಟ್ಟುನಿಟ್ಟಿನಿಂದ ತಡೆಯಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ವಿಧಾನಸಭೆಯಲ್ಲಿ ಶಾಸಕ ಬಸವನಗೌಡ ದದ್ದಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮದ್ಯ ಮಾರಾಟಕ್ಕೆ ನಿಯಮಾವಳಿ ಪ್ರಕಾರ ಮಾತ್ರ ಅನುಮತಿಯನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ೨೦೧೮-೧೯ರಲ್ಲಿ ೧೫೯, ೧೯-೨೦ರಲ್ಲಿ ೨೦೬ ಮತ್ತು ೨೦-೨೧ರಲ್ಲಿ ೨೦೩ ಸಿಎಲ್-೯ ಪರವಾನಿಗೆ ನೀಡಲಾಗಿದೆ. ಅನಧಿಕೃತ ಮದ್ಯ ಮಾರಾಟ ತಡೆಗೆ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಲಬೆರಕೆ ಮದ್ಯ ಮಾರಾಟ ಕುರಿತು ನಿರ್ದಿಷ್ಟ ಮಾಹಿತಿ ದೊರೆತರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇ-ಸ್ವತ್ತು ತಂತ್ರಾಂಶ ಉನ್ನತೀಕರಣ: ಇ-ಸ್ವತ್ತು ತಂತ್ರಾಂಶದಲ್ಲಿ ಎದುರಾಗಿದ್ದ ಸರ್ವರ್ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸರ್ವರ್ ಸಮಸ್ಯೆಯನ್ನು ಬಗೆಹರಿಸಲು ಅದರ ಸ್ಟೋರೇಜ್ ಸಾಮರ್ಥ್ಯವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಸಾಫ್ಟ್‌ವೇರ್‌ನಲ್ಲಿ ಸಮಸ್ಯೆ ಎದುರಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಶಾಸಕ ರಾಜೇಶ ನಾಯಕ್ ಅವರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ತಿಂಗಳು ಸರ್ವರ್ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದಲ್ಲಿ ಇ-ಖಾತೆ ನೀಡುವಲ್ಲಿ ವಿಳಂಬವಾಗಿತ್ತು. ಅದನ್ನು ಸರಿಪಡಿಸಲಾಗಿದೆ ಎಂದರು.
***
ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಗೌರವಯುತ ಕಾಯಕ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ರಾಜ್ಯದ ಪ್ರತಿಯೊಬ್ಬರು ಗೌರವಯುತ ಕಾಯಕದ ಜೊತೆಗೆ ಜೀವನ ನಡೆಸಲು ಅಗತ್ಯದ ಅವಕಾಶಗಳನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು ಇದಕ್ಕಾಗಿ ಇಚ್ಛಾಶಕ್ತಿ ಹೊಂದುವದು ಅತೀ ಮುಖ್ಯವಾಗಿದೆ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನುಡಿದರು.
ನಗರದ ಸರ್ದಾರ ಹೈಸ್ಕೂಲ ಮೈದಾನದಲ್ಲಿಂದು (ಡಿ.೧೫) ಜರುಗಿದ ರಾಷ್ಟ್ರೀಯ ಗ್ರಾಮೀಣ, ಹಾಗೂ ನಗರ ಜೀವನೋಪಯ ಅಭಿಯಾನ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವ ಸಹಾಯ ಗುಂಪಿನ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂಬ ಗಾದೆಯಂತೆ ಇಂದು ಪ್ರತಿಯೊಬ್ಬರು ಹೊಟ್ಟೆ ತುಂಬಿಸಿಕೊಳ್ಳಲು ಒಂದಿಲ್ಲೊಂದು ಕಾಯಕ ಮಾಡುತ್ತಿದ್ದಾರೆ. ತಲಾ ಆದಾಯದಲ್ಲಿ ಮೂರನೇ ಸ್ಥಾನದಲ್ಲಿರುವ ರಾಜ್ಯವನ್ನು ಮೊದಲನೇ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಹೆಚ್ಚಿನ ಅವಕಾಶ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸ್ವಾವಲಂಬಿಗಳನ್ನಾಗಿಸಲು ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುವದು ಎಂದರು.
ಗ್ರಾಮೀಣ ಭಾಗದ ಮಹಿಳೆಯರು ಸಾಮೂಹಿಕ ಹಾಗೂ ವೈಯಕ್ತಿಕ ಚಟುವಟಿಕೆಗಳನ್ನು ಕೌಶಲ್ಯಭರಿತವಾಗಿ ಮಾಡಬೇಕಾಗಿದೆ. ಇದಕ್ಕಾಗಿಯೇ ಅಗತ್ಯದ ತರಬೇತಿ ನೀಡುವದರ ಜೊತೆಗೆ ಉತ್ತಮ ಮಾರುಕಟ್ಟೆ ಒದಗಿಸಿ ಕೊಡಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುವದು. ಸ್ವ ಸಹಾಯ ಗುಂಪುಗಳಿಂದ ಉತ್ಪಾದಿಸುವ ಉತ್ಪನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕ್ಲಸ್ಟರಗಳನ್ನು ರೂಪಿಸಲಾಗುವದು ಎಂದು ಹೇಳಿದರು.
ಮಹಿಳೆಯರು ಪ್ರಾಮಾಣ ಕ ಹಾಗೂ ತುಂಬ ಶ್ರಮ ಜೀವಿಗಳಾಗಿದ್ದು ಸ್ವ ಸಹಾಯ ಗುಂಪಿನಿಂದ ಉತ್ಪಾದಿಸುವ ಎಲ್ಲ ಉತ್ಪನ್ನಗಳನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಲು ಸರ್ವ ಪ್ರಯತ್ನ ನಡೆಸಲಾಗುವದು. ಸ್ವಾತಂತ್ರೋತ್ಸವದ ದಿನದಂದು ೭೫೦೦ ಸ್ತ್ರೀ ಶಕ್ತಿ ಸಂಘಗಳಿಗೆ ಮೈಕ್ರೋ ಸಾಲವನ್ನು ನೀಡಲಾಗಿದ್ದು ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಎಲ್ಲ ಸ್ತ್ರೀ ಶಕ್ತಿ ಸಂಘಗಳಿಗೂ ಇದನ್ನೂ ವಿಸ್ತರಿಸಲಾಗುವದು ಎಂದು ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ರಾಜ್ಯ ಉನ್ನತ ಶಿಕ್ಷಣ, ಐಟಿ, ಬಿಟಿ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆ ಸಚಿವರಾದ ಡಾ. ಅಶ್ವತ್ಥನಾರಾಯಣ ಸಿ.ಎನ್ ಅವರು ಮಾತನಾಡಿ ಸ್ವ ಸಹಾಯ ಸಂಘಗಳು ರಾಜ್ಯದ ಉದ್ದಗಲಕ್ಕೂ ಬೆಳೆದಿದ್ದು ಇವುಗಳ ಮೂಲಕ ಹಲವಾರು ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇಲ್ಲಿಯ ಉತ್ಪನ್ನಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಸ್ವ ಸಹಾಯ ಸಂಘಗಳಿಂದ ತಯಾರಿಸಲಾಗುವ ಉತ್ಪನ್ನಗಳ ಮಾರಾಟಕ್ಕೆ ಅಗತ್ಯದ ಕಟ್ಟಡ ನಿರ್ಮಾಣಕ್ಕೆ ಶೀಘ್ರವೆ ಕ್ರಮ ಕೈಗೊಳ್ಳಲಾಗುವದು. ಅಲ್ಲದೇ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯಿಂದ ಉತ್ಪಾದಿಸುವ ಉತ್ಪನ್ನಗಳನ್ನು ಇತರೆ ಇಲಾಖೆಗಳಿಗೆ ಮಾರಾಟ ಮಾಡಲು ಸುಲಭವಾಗುವಂತಹ ಎಲ್ಲ ಕ್ರಮಗಳನ್ನು ಜರುಗಿಸಲಾಗುವದು ಎಂದರು.
ಪ್ರಧಾನ ಮಂತ್ರಿ ದೀನ ದಯಾಳ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಗ್ರಾಮೀಣ ಮಹಿಳೆಯು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತರಬೇತಿ ನೀಡಲಾಗುತ್ತಿದ್ದು ಇದರಿಂದಾಗಿ ಗ್ರಾಮ ಸ್ವರಾಜವಾಗುವದನ್ನು ಕಾಣಬಹುದಾಗಿದೆ ಎಂದರು. ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಒಂದು ಕೋಟಿ ಉದ್ಯೋಗ ನಿರ್ಮಾಣ ಮಾಡುವ ಯೋಜನೆ ಜಾರಿಗೆ ತರಲಾಗುವದು ಎಂದು ಸಚಿವ ಅಶ್ವತ್ಥ ನಾರಾಯಣ ನುಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಶಾಸಕರಾದ ಅನೀಲ ಬೆನಕೆ, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ಕಾರ್ಯದರ್ಶಿಗಳಾದ ಡಾ. ಎಸ್. ಸೆಲ್ವಕುಮಾರ, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲಾನ ಬಿಸ್ವಾಸ, ಜಿಲ್ಲಾಧಿಕಾರಿ ಆರ್. ವೆಂಕಟೆಶಕುಮಾಋ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ವಿ.ದರ್ಶನ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ರಾಷ್ಟ್ರೀಯ ಜೀವನೋಪಾಯ್ ಅಭಿಯಾನದ ಅಭಿಯಾನ ನಿರ್ದೇಶಕರಾದ ಮುಂಜುಶ್ರೀ ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕು. ಸ್ವಾತಿ ನಾಡಗೀತೆ ಪ್ರಸ್ತುತಿಸಿದರು.
ರಾಯಚೂರು -ಕಾರವಾರದಲ್ಲೂ ವಿಮಾನ ನಿಲ್ದಾಣ; ೨೦೨೨ರ ವರ್ಷಾಂತ್ಯಕ್ಕೆ ವಿಜಯಪುರ ವಿಮಾನ ನಿಲ್ದಾಣ ಪೂರ್ಣ: ಸಚಿವ ವಿ. ಸೋಮಣ್ಣ
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಡಿಸೆಂಬರ್ ೨೦೨೨ರೊಳಗಾಗಿ ಪೂರ್ಣಗೊಳಿಸಲಾಗುವುದು ವಸತಿ ಮತ್ತು ಮೂಲ ಸೌಕರ್ಯಗಳ ಖಾತೆ ಸಚಿವ ವಿ. ಸೋಮಣ್ಣ ಅವರು ಮೇಲ್ಮನೆಗೆ ತಿಳಿಸಿದರು.
ಸದಸ್ಯ ಪ್ರಕಾಶ ರಾಠೋಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು ವಿಜಯಪುರ ವಿಮಾನ ನಿಲ್ದಾಣಕ್ಕಾಗಿ ೭೨೭ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಂದಾಜು ಒಟ್ಟಾರೆ ೨೨೦ ಕೋಟಿ ರೂ.ಗಳ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗಿದೆ. ೯೫ ಕೋಟಿ ರೂ. ವೆಚ್ಚದ ಮೊದಲ ಪ್ಯಾಕೇಜ್‌ದಡಿ ರನ್‌ವೇ, ಏಪ್ರಾನ್, ಟ್ಯಾಕ್ಸಿವೇ, ಆಂತರಿಕ ಮತ್ತು ಆವರಣ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ. ೪೮ ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಎರಡನೇ ಹಾಗೂ ಮೂರನೇ ಪ್ಯಾಕೇಜ್‌ದಡಿ ೧೨೫ ಕೋಟಿ ರೂ.ಮೊತ್ತದ ಕಟ್ಟಡ ಮತ್ತು ವಿದ್ಯುತ್ ಯಂತ್ರೋಪಕರಣ ಖರೀದಿಗೆ ಟೆಂಡರ್ ಕರೆಯಲಾಗಿದೆ. ತಾಂತ್ರಿಕ ಬಿಡ್ ಮೌಲ್ಯಮಾಪನ ಪೂರ್ಣಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.
ಮೇಲ್ಮನೆಯ ವಿರೋಧ ಪಕ್ಷದ ನಾಯಕರಾದ ಎಸ್.ಆರ್. ಪಾಟೀಲ ಹಾಗೂ ಎಸ್.ನಾರಾಯಣಸ್ವಾಮಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ವಿಜಯಪುರ ಐತಿಹಾಸಿಕ ಸ್ಥಳವಾಗಿದ್ದು, ವಿಶ್ವ ವಿಖ್ಯಾತ ಗೋಲಗುಮ್ಮಟ ವೀಕ್ಷಣೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಜನ ಪ್ರವಾಸಿಗರು ಭೇಟಿ ನೀಡಲಿದ್ದಾರೆ. ಇದರೊಂದಿಗೆ ವಿಶ್ವ ದರ್ಜೆಯ ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆ ಬೆಳೆಯುವ ಪ್ರಮುಖ ಕೇಂದ್ರವಾಗಿದ್ದು, ನಿರ್ಮಾಣಗೊಳ್ಳುತ್ತಿರುವ ಉದ್ದೇಶಿತ ಮಿನಿ ವಿಮಾನ ನಿಲ್ದಾಣ ವಿಸ್ತರಿಸಿ ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಸದಸ್ಯರ ಸಲಹೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಸೋಮಣ್ಣ ಅವರು ಇದೇ ಡಿಸೆಂಬರ್ ೨೫ ರಂದು ವಿಜಯಪುರಕ್ಕೆ ಭೇಟಿ ನೀಡಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಸಲಿದ್ದೇನೆ. ಉದ್ದೇಶಿತ ವಿಮಾನ ನಿಲ್ದಾಣ ಕಾಮಗಾರಿಗಳನ್ನು ವೀಕ್ಷಣೆ ಮಾಡಲಿದ್ದೇನೆ. ಈ ಸಂದರ್ಭದಲ್ಲಿ ತಾಂತ್ರಿಕ ತಂಡವನ್ನು ಸಭೆಗೆ ಆಹ್ವಾನಿಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ವಿಸ್ತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ನಿಟ್ಟಿನಲ್ಲಿ ರಾಯಚೂರು ಹಾಗೂ ಕಾರವಾರ ವಿಮಾನ ನಿಲ್ದಾಣ ಸ್ಥಾಪನೆಗೆ ಪ್ರಸ್ತಾವನೆ ಸ್ವೀಕೃತವಾಗಿದ್ದು, ಶೀಘ್ರವೇ ಈ ಕುರಿತಂತೆ ಮಂಜೂರಾತಿಗೆ ಕ್ರಮವಹಿಸಲಾಗುವುದು. ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಈ ವರ್ಷಾಂತ್ಯದೊಳಗೆ ಸ್ಮಶಾನ ಇಲ್ಲದ ಗ್ರಾಮ,
ನಗರಗಳಲ್ಲಿ ಸ್ಮಶಾನ ಭೂಮಿ: ಸಚಿವ ಆರ್. ಅಶೋಕ
ರಾಜ್ಯದಲ್ಲಿ ಸ್ಮಶಾನಗಳು ಇಲ್ಲದ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಅಗತ್ಯವಿರುವ ಸ್ಮಶಾನ ಭೂಮಿ ಕಾಯ್ದಿರಿಸಲು ಸರ್ಕಾರಿ ಭೂಮಿ ಇಲ್ಲದಿದ್ದರೆ ಖರೀದಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿಂದು ಸದಸ್ಯ ಮುನಿರಾಜುಗೌಡ ಪಿ.ಎಂ. ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಪ್ರಸಕ್ತ ಸಾಲಿನ ಡಿಸೆಂಬರ್ ೩೧ ರೊಳಗಾಗಿ ಸ್ಮಶಾನ ಭೂಮಿ ಇಲ್ಲದ ಎಲ್ಲಾ ನಗರ ಮತ್ತು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಕಾಯ್ದಿರುವ ಕುರಿತಂತೆ ದಿ: ೨೪-೧೧-೨೦೨೧ ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದ ೩೦ ಜಿಲ್ಲೆಗಳ ೩೬೩ ಪಟ್ಟಣ ೨೯,೨೧೧ ಗ್ರಾಮಗಳ ಪೈಕಿ ೩೪೫ ಪಟ್ಟಣ ೨೪,೧೫೩ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಹೊಂದಿದ್ದು, ೧೮ ಪಟ್ಟಣ ೫೦೫೮ ಗ್ರಾಮಗಳಲ್ಲಿ ಸ್ಮಶಾನ ಭೂಮಿಯ ಕೊರತೆಯಿದ್ದು, ಇದೇ ವರ್ಷ ಡಿಸೆಂಬರ್ ೩೧ರೊಳಗೆ ಸ್ಮಶಾನ ಭೂಮಿ ಕಾಯ್ದಿರುವ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಮತ್ತೆ 2 ಸಾವಿರ ಪರವಾನಿಗೆ ಭೂಮಾಪಕರ ನೇಮಕ*ವಿಶೇಷ ಸಭೆ ಕರೆದು ಸಮಸ್ಯೆಗೆ ಪರಿಹಾರ
ಪಹಣಿ ಹಕ್ಕು ದಾಖಲೆ ತಿದ್ದುಪಡಿ ನಿಯಮಗಳ ಸರಳೀಕರಣಕ್ಕೆ ಕ್ರಮ:ಸಚಿವ ಅಶೋಕ
ಕಂದಾಯ ಇಲಾಖೆಯಲ್ಲಿ ಪಹಣಿಯಲ್ಲಿನ ಹಕ್ಕು ದಾಖಲೆ ತಿದ್ದುಪಡಿಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಮತ್ತಷ್ಟು ಸರಳಿಕರಣ ಮಾಡಲಾಗುವುದು. ಹೆಚ್ಚೆಚ್ಚು ಕಂದಾಯ ಅದಾಲತ್‍ಗಳನ್ನು ನಡೆಸುವುದರ ಮೂಲಕ ಹಕ್ಕು ದಾಖಲೆ ತಿದ್ದುಪಡಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಮರಿತಿಬ್ಬೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ದಕ್ಷಿಣ ಕನ್ನಡ,ಉಡುಪಿ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳನ್ನು ಹೊರತುಪಡಿಸಿ ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಸೀಲ್ದಾರರಿಗೆ ಪ್ರತ್ಯಾಯೋಜಿಸಲಾಗಿದೆ ಎಂದರು.2019ರ ಜನೆವರಿ 1ರಿಂದ 2021ರ ನವೆಂಬರ್ 30ರವರೆಗೆ ಕಂದಾಯ ಅದಾಲತ್‍ನಲ್ಲಿ ಆರ್‍ಟಿಸಿ ತಿದ್ದುಪಡಿಯ ಬಗ್ಗೆ 193687 ಅರ್ಜಿಗಳು ಸ್ವೀಕೃತವಾಗಿದ್ದು, ಮೋಜಿಣಿ ವ್ಯವಸ್ಥೆ ಅಡಿ 373234 ಆರ್‍ಟಿಸಿ ತಿದ್ದುಪಡಿಯ ಬಗ್ಗೆ ಸ್ವೀಕೃತವಾಗಿರುತ್ತದೆ. ಈ ಪೈಕಿ ಕಂದಾಯ ಅದಾಲತ್‍ನಲ್ಲಿ 193687 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದ ಅವರು ಮೋಜಿಣಿ ವ್ಯವಸ್ಥೆ ಅಡಿ 207589 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 165645 ಅರ್ಜಿಗಳು ತಿದ್ದುಪಡಿಗೆ ಬಾಕಿ ಇವೆ ಎಂದು ಅವರು ತಿಳಿಸಿದರು.
ಹಕ್ಕು ದಾಖಲೆ ತಿದ್ದುಪಡಿ(ಆರ್‍ಆರ್‍ಟಿ)ಯನ್ನು ಆನ್‍ಲೈನ್ ಅಥವಾ ಸಕಾಲ ವ್ಯಾಪ್ತಿಗೆ ತರಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಅಶೋಕ ಅವರು ಹಕ್ಕು ದಾಖಲೆ ತಿದ್ದುಪಡಿ ಅನಗತ್ಯ ವಿಳಂಬ ಹಾಗೂ ಭ್ರಷ್ಟಾಚಾರ ತಾಂಡವಾಡುತ್ತಿರುವುದರ ಕುರಿತ ದೂರುಗಳು ಬಂದಲ್ಲಿ ಡಿಸಿ/ಎಸಿಗಳಿಂದ ತನಿಖಾ ವರದಿ ಪಡೆದು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
*ವಿಶೇಷ ಸಭೆ ಕರೆದು ಸಮಸ್ಯೆಗೆ ಪರಿಹಾರ:
ಪಹಣಿ, ಭೂ ಮಂಜೂರಾತಿ, ಹಕ್ಕು ತಿದ್ದುಪಡಿಯಂತ ಸಮಸ್ಯೆಗಳು ಕಳೆದ 40 ವರ್ಷಗಳಿಂದಿವೆ. ಮಂಜೂರಾತಿ(ಗ್ರ್ಯಾಂಟ್)ಪತ್ರ ಒಬ್ಬರಿಗಿದ್ದರೇ ಭೂಮಿಯಲ್ಲಿ ಮತ್ತೊಬ್ಬರು ವ್ಯವಸಾಯ ಮಾಡುತ್ತಿದ್ದಾರೆ;ಯಾರಿಗೆ ಅದರ ಒಡೆತನ ನೀಡಬೇಕೆಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಸದನದಲ್ಲಿ ತಿಳಿಸಿದ ಸಚಿವ ಅಶೋಕ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವಿಶೇಷ ಸಭೆ ಕರೆಯಲು ತಿಳಿಸಿದ್ದು,ತಮ್ಮ ಅಭಿಪ್ರಾಯಗಳನ್ನು ಸಹ ಆಲಿಸಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
*ಮತ್ತೆ 2 ಸಾವಿರ ಪರವಾನಿಗೆ ಭೂಮಾಪಕರ ನೇಮಕ:
ಈಗಾಗಲೇ 841 ಪರವಾನಿಗೆ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು,ಹೆಚ್ಚುವರಿಯಾ
ಇಲಾಖೆಯಲ್ಲಿ ಈಗಾಗಲೇ 3500 ಭೂಮಾಪಕರಿದ್ದಾರೆ. ಹೊಸದಾಗಿ ನೇಮಿಸಿಕೊಳ್ಳುವ ಪರವಾನಿಗೆ ಭೂಮಾಪಕರನ್ನು ಸೇರಿದಂತೆ ಎಲ್ಲರನ್ನು ಬಳಸಿಕೊಂಡು ನಾಲ್ಕೈದು ತಿಂಗಳಲ್ಲಿ ಪೆಂಡಿಂಗ್ ಇರುವ ಭೂಸರ್ವೆ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.
ಬೆಂಗಳೂರು ನಗರದಲ್ಲಿಯೇ 38,888 ಎಕರೆ ಸರಕಾರಿ ಜಮೀನು ಅತಿಕ್ರಮಣ!,*ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ
ಬೆಂಗಳೂರು ನಗರ ಜಿಲ್ಲೆ: ಅತಿಕ್ರಮಿಸಿದ 16420 ಎಕರೆ ಜಮೀನು ಸರಕಾರದ ವಶಕ್ಕೆ: ಸಚಿವ ಆರ್.ಅಶೋಕ
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಸರಕಾರ ಜಮೀನನ್ನು ಖಾಸಗಿಯವರು ಅತಿಕ್ರಮಿಸಿಕೊಂಡಿರುವುದನ್ನು ಎಚ್ಚೆತ್ತಿರುವ ರಾಜ್ಯ ಸರಕಾರ, ತನ್ನ ಜಮೀನನ್ನು ವಶಪಡಿಸಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಂಡಿದೆ ಮತ್ತು ಭೂಕಬಳಿ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸಹ ಸ್ಥಾಪನೆ ಮಾಡಿದೆ.
ವಿಧಾನಪರಿಷತ್‍ನಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರು ಡಾ.ವೈ.ಎ.ನಾರಾಯಣಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಸವಿವರವಾಗಿ ಉತ್ತರಿಸಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ 14660 ಪ್ರಕರಣಗಳಲ್ಲಿ 38,888 ಎಕರೆ ಸರಕಾರಿ ಜಮೀನನ್ನು ಖಾಸಗಿಯವರು ಅತಿಕ್ರಮಿಸಿಕೊಂಡಿದ್ದು,ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 38546 ಪ್ರಕರಣಗಳಲ್ಲಿ 36229 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದನ್ನು ವಿವರಿಸಿದ ಸಚಿವ ಅಶೋಕ ಅವರು ಅತಿಕ್ರಮಿಸಲ್ಪಟ್ಟ ಗೋಮಾಳ ಮತ್ತು ಸರಕಾರಿ ಜಮೀನುಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ 4940 ಪ್ರಕರಣಗಳಲ್ಲಿ 16420 ಎಕರೆ,ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ 10892 ಪ್ರಕರಣಗಳಲ್ಲಿ 11779 ಎಕರೆ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
*ಬೆಂಗಳೂರು ಡಿಸಿಗೆ ಪ್ರತಿ ಶನಿವಾರ ಒತ್ತುವರಿ ಪ್ರಕರಣಗಳ ಪರಿಶೀಲನೆ ಜವಾಬ್ದಾರಿ: ಸರಕಾರಿ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಿಸಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿರುವುದನ್ನು ಹಾಗೂ ಸಮಿತಿಗಳು ಕಾರ್ಯಪ್ರವೃತ್ತರಾಗಿರುವುದನ್ನು ಸದನದ ಗಮನಕ್ಕೆ ತಂದ ಸಚಿವ ಅಶೋಕ ಅವರು ಬೆಂಗಳೂರು ನಗರದಲ್ಲಿ ಅಪಾರ ಪ್ರಮಾಣದಲ್ಲಿ ಒತ್ತುವರಿಯಾಗಿರುವ ಸರಕಾರಿ ಜಮೀನನ್ನು ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಪ್ರತಿ ಶನಿವಾರ ಈ ಒತ್ತುವರಿ ಪ್ರಕರಣಗಳ ಪರಿಶೀಲನೆ ಮತ್ತು ವಶಕ್ಕೆ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದರು.
*ರಾಜ್ಯದಲ್ಲಿ 6272811 ಎಕರೆ ಸರಕಾರಿ ಜಮೀನು:
ರಾಜ್ಯದಲ್ಲಿ ಒಟ್ಟು 6272811 ಎಕರೆ ಸರಕಾರಿ ಜಮೀನು ಇದೆ. ಇದರಲ್ಲಿ ಒಟ್ಟು 1427195 ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದೆ. ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಒಟ್ಟು 9732 ಎಕರೆ,ಅಕ್ರಮ-ಸಕ್ರಮ ಯೋಜನೆ ಅಡಿ ಅರ್ಜಿ ಸಲ್ಲಿಸಿದ 997198 ಎಕರೆ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಿರುವ 14048 ಎಕರೆ ಸರಕಾರಿ ಜಮೀನು ಹೊರತುಪಡಿಸಿ 4,06,217 ಎಕರೆ ಒತ್ತುವರಿ ಜಮೀನು ತೆರವುಗೊಳಿಸಬೇಕಾಗಿದೆ ಎಂದು ವಿವರಿಸಿದ ಸಚಿವ ಅಶೋಕ ಅವರು ಇದರಲ್ಲಿ 2021 ನವೆಂಬರ್ 30ರವರೆಗೆ 2,70,108 ಎಕರೆ ಸರಕಾರಿ ಜಮೀನು ತೆರವುಗೊಳಿಸಲಾಗಿದೆ. ಉಳಿದಂತೆ 136109 ಎಕರೆ ಒತ್ತುವರಿ ತೆರವುಗೊಳಿಸಲು ಬಾಕಿ ಇದ್ದು, ಹಂತಹಂತವಾಗಿ ತೆರವುಗೊಳಿಸಲು ಕ್ರಮವಹಿಸಲಾಗುವುದು ಎಂದರು.
*ಒತ್ತುವರಿ ಪ್ರಕರಣಗಳ ತಡೆಗೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ಥಾಪನೆ: ಒತ್ತುವರಿ ಪ್ರಕರಣಗಳನ್ನು ಸಮರ್ಥವಾಗಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವನ್ನು ರಚಿಸಲಾಗಿದೆ ಎಂದು ಸಚಿವ ಅಶೋಕ ಅವರು ವಿವರಿಸಿದರು.
ಒತ್ತುವರಿದಾರರ ವಿರುದ್ಧ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ 20841 ಪ್ರಕರಣಗಳನ್ನು ದಾಖಲಿಸಲಾಗಿದ್ದು 4712 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 16129 ಪ್ರಕರಣಗಳು ಬಾಕಿ ಇವೆ. 61 ಜನರಿಗೆ ಒಂದು ವರ್ಷದಂತೆ ಶಿಕ್ಷೆ ವಿಧಿಸಲಾಗಿದೆ ಎಂದರು.
174 ವಿಧಾನಸಭಾ ಕ್ಷೇತ್ರಗಳಲ್ಲಿ ಪೋಡಿ ಮುಕ್ತ ಗ್ರಾಮಕ್ಕೆ ಪಣ: ಸಚಿವ ಅಶೋಕ
ರಾಜ್ಯದ 224ವಿಧಾನಸಭಾ ಕ್ಷೇತ್ರಗಳ ಪೈಕಿ ನಗರಪ್ರದೇಶದ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 174 ವಿಧಾನಸಭಾ ಕ್ಷೇತ್ರಗಳಲ್ಲಿ ಪೋಡಿ ಮುಕ್ತ ಗ್ರಾಮಯೋಜನೆ ಪ್ರಾರಂಭಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಸುನೀಲ್‍ಗೌಡ ಬಸವನಗೌಡ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಯೋಜನೆ ಅಡಿಯಲ್ಲಿ ಈವರೆಗೆ ಒಟ್ಟು 16454 ಗ್ರಾಮಗಳಲ್ಲಿ 21,44,534 ಬ್ಲಾಕ್‍ಗಳ ಅಳತೆ ಕಾರ್ಯಪೂರೈಸಿ,20,33,857 ಏಕವ್ಯಕ್ತಿ ಪಹಣಿಗಳನ್ನು ಸೃಜಿಸುವ ಮೂಲಕ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲಾಗಿದೆ ಎಂದರು.
ಸಾರ್ವಜನಿಕರು ದೈನಂದಿನ ಕೆಲಸಗಳಿಗಾಗಿ ಅಳತೆ ಕೋರಿ ಸಲ್ಲಿಸುವ 11ಇ,ಅನ್ಯಕ್ರಾಂತ,ತತ್ಕಾಲ್ ಪೋಡಿ,ಹದ್ದುಬಸ್ತು,ಇತ್ಯಾದಿ ಅರ್ಜಿಗಳ ಹಾಗೂ ತಾಲೂಕುಗಳಲ್ಲಿ ಬರುವ ಸ್ಥಳೀಯ ತೊಂದರೆಗಳ ಬಗ್ಗೆ ಅಳತೆ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ,ಅಳತೆ ಕಾರ್ಯಗಳನ್ನು ಪೂರೈಸಲು ಅವಶ್ಯಕವಾದ ಭೂಮಾಪಕರನ್ನು ಹೊರತುಪಡಿಸಿ ಉಳಿದ ಭೂಮಾಪಕರನ್ನು ಬಳಸಿಕೊಂಡು ಪೋಡಿಮುಕ್ತ ಗ್ರಾಮ ಅಭಿಯಾನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಕ್ಯಾತ್ಸಂದ್ರದಿಂದ ತುಮಕೂರವರೆಗಿನ ರಸ್ತೆ ದುರಸ್ತಿ: ಸಚಿವ ಸಿಸಿ ಪಾಟೀಲ್
ಕ್ತಾತ್ಯಂದ್ರದಿಂದ ತುಮಕೂರುವರೆಗೆ ಹದಗೆಟ್ಟಿರುವ ರಸ್ತೆ ದುರಸ್ತಿಪಡಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ತಿಳಿಸಿದರು.
ವಿಧಾನಪರಿಷತ್‍ನಲ್ಲಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಹಾಗೂ ಕಾಂತರಾಜ್ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನೆಲಮಂಗಲ ಟೋಲ್ ಮತ್ತು ಕ್ಯಾತ್ಸಂದ್ರ ಟೋಲ್‍ನ ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ಸಂಸ್ಥೆಯ ಒಡಂಬಡಿಕೆ ಅವಧಿ ಮುಗಿದಿದ್ದರೂ ಹಾರ್ಬಿಟ್ರೇಶನ್ ಕಮಿಟಿ ಆದೇಶದ ಅನುಸಾರ 474 ದಿನಗಳ ಕಾಲ ಮುಂದುವರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಕಮಿಟಿ ಆದೇಶದ ವಿರುದ್ಧ ನ್ಯಾಯಾಲಯದ ದಾವೆ ಹೂಡಿದ್ದು, ಬರುವ ಆದೇಶದ ಅನುಸಾರ ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸದಸ್ಯ ಶ್ರೀಕಂಠೇಗೌಡ ಅವರು ಟೋಲ್ ಅವಧಿ ಮುಗಿದು 6 ತಿಂಗಳಾದ್ರೂ ಇಂದಿಗೂ ಈ ನೆಲಮಂಗಲ ಮತ್ತು ಕ್ಯಾತ್ಸಂದ್ರ ಟೋಲ್‍ಗಳಲ್ಲಿ ಟೋಲ್ ಶುಲ್ಕವನ್ನು ಸಾರ್ವಜನಿಕರಿಗೆ ವಿಧಿಸುವ ಮೂಲಕ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಕ್ಕೆ ಸಚಿವರು ಉತ್ತರಿಸಿದರು.
5 ಲಕ್ಷ ಮನೆಗಳ ನಿರ್ಮಾಣಕ್ಕೆ ಸರಕಾರ ಆದೇಶ: ವಸತಿ ಸಚಿವ ವಿ.ಸೋಮಣ್ಣ
ರಾಜ್ಯದಲ್ಲಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಸರಕಾರ ಕಾರ್ಯಾದೇಶ ಹೊರಡಿಸಿದ್ದು, ಜನೆವರಿ 25ರೊಳಗೆ ಪಟ್ಟಿಗಳನ್ನು ಸಲ್ಲಿಸುವಂತೆ ಜಿಪಂ ಸಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಕೆ.ಹರೀಶಕುಮಾರ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪ್ರತಿ ಮನೆಗೆ 1.20ಲಕ್ಷ ರೂ.ಗಳನ್ನು ಮೂರುಕಂತುಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು. 2022ರೊಳಗೆ ಮನೆಯೊಳಗೆ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ವಿವಿಧ ವಸತಿ ಯೋಜನೆಗಳಡಿ 2015ರಿಂದ 2021ರವರೆಗೆ 8763 ಮನೆಗಳು ಮಂಜೂರು ಮಾಡಲಾಗಿತ್ತು;ಅವುಗಳಲ್ಲಿ 5705 ಮನೆಗಳು ಪೂರ್ಣಗೊಂಡಿದ್ದು,1458 ಮನೆಗಳು ಪ್ರಗತಿಯಲ್ಲಿವೆ.ಫಲಾನುಭವಿಗಳ ಖಾತೆಗೆ 80.03 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
*ಬುಡಕಟ್ಟು ಸಮುದಾಯಗಳಿಗೆ ಮನೆಗಳ ನಿರ್ಮಾಣ ಪ್ಯಾಕೇಜ್:
ರಾಜ್ಯದಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಕೀಂ ಅಡಿ ಹಾಗೂ ದೇವರಾಜು ಅರಸು ವಸತಿ ಯೋಜನೆ ಅಡಿ ಮನೆಗಳು ಒದಗಿಸುವುದಕ್ಕೆ ಅವಕಾಶವಿದ್ದರೂ ಆ ಜನರಿಗೆ ಮನೆಗಳು ಸಿಗುತ್ತಿಲ್ಲ ಸದಸ್ಯ ಶಾಂತರಾಮ ಬುಡ್ನ ಸಿದ್ದಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಸಹಮತ ವ್ಯಕ್ತಪಡಿಸಿದ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬುಡಕಟ್ಟು ಸಮುದಾಯಗಳಿಗಾಗಿಯೇ ಪ್ರತ್ಯೇಕವಾಗಿ 15ರಿಂದ 20 ಸಾವಿರ ಮನೆಗಳನ್ನು ಮಂಜೂರು ಮಾಡಲಾಗುವುದು. ಆ ಫಲಾನುಭವಿಗಳಿಗೆ 1.20ಲಕ್ಷಗಳ ಜೊತೆಗೆ ಹೆಚ್ಚುವರಿಯಾಗಿ 30 ಸಾವಿರ ರೂ.ಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ಸಲ್ಲಿಸಿದ ಮೇಲ್ಮನೆ
ಕರ್ನಾಟಕ ವಿಧಾನಪರಿಷತ್‍ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿ ವಿಧಾನಪರಿಷತ್‍ಗೆ ಆಗಮಿಸಿದ ಸಭಾನಾಯಕರು ಆಗಿರುವ ಸಮಾಜಕಲ್ಯಾಣ ಸಚಿವ ಕೋಟಶ್ರೀನಿವಾಸ ಪೂಜಾರಿ ಅವರಿಗೆ ಮೇಲ್ಮನೆ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಚಿಂತಕರ ಚಾವಡಿಗೆ ಮೆರಗು ತರುವ ಕೆಲಸವನ್ನು ಕೋಟ ಶ್ರೀನಿವಾಸ ಅವರು ಮಾಡಿದ್ದಾರೆ; ಹಣ ಖರ್ಚು ಮಾಡದೇ ಆಯ್ಕೆಯಾಗಿ ಬಂದ ಕೋಟ ಅವರ ಚುನಾವಣಾ ಮಾದರಿ ಎಲ್ಲರೂ ಮುಂದುವರಿಸಬೇಕಿದೆ;ಈ ಮೂಲಕ ಚಿಂತಕರ ಚಾವಡಿ ಪಟ್ಟ ಉಳಿಸಿಕೊಳ್ಳಬೇಕಿದೆ ಎಂದು ವಿರೋಧಪಕ್ಷದ ನಾಯಕರಾದ ಎಸ್.ಆರ್.ಪಾಟೀಲ್ ಸೇರಿದಂತೆ ಅನೇಕ ಸದಸ್ಯರು ಪ್ರತಿಪಾದಿಸಿದರು.
ಸದಸ್ಯ ಶ್ರೀಕಂಠೇಗೌಡ ಅವರು ಕೋಟ ಶ್ರೀನಿವಾಸ ಪೂಜಾರಿ ಅವರು ಮೂಲತಃ ಫೋಟೊಗ್ರಾಫರ್ ಆಗಿ, ಕಿರಾಣಿ ಅಂಗಡಿಯಲ್ಲಿ ಕೆಲಸದಲ್ಲಿದ್ದುಕೊಂಡು, ನಂತರ ಹೋರಾಟದ ಮೂಲಕ ಪರಿಷತ್‍ಗೆ ಬಂದಿದ್ದಾರೆ. ಅವರ ಹೋರಾಟದ ನಿಲುವು ಮತ್ತು ಸೈದ್ಧಾಂತಿಕ ವ್ಯಕ್ತಿತ್ವಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸಭಾನಾಯಕ ಸ್ಥಾನಕ್ಕೆ ಘನತೆ,ಗೌರವ ತಂದುಕೊಟ್ಟಿದ್ದಾರೆ ಎಂದು ಬಹುತೇಕ ಸದಸ್ಯರು ಪ್ರಶಂಸಿಸಿದರು.
ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರ ಬಗ್ಗೆಯೂ ಅನೇಕ ಸದಸ್ಯರು ಮೆಚ್ಚುಗೆ ಮಾತುಗಳನ್ನಾಡಿದರು;ತಾವು ಈ ಪರಿಷತ್‍ನಲ್ಲಿ ಇರಬೇಕಿತ್ತು ಅನಿಸುತ್ತದೆ.ತಾವು ಮತ್ತೊಮ್ಮೆ ಪರಿಷತ್‍ಗೆ ಬನ್ನಿ ಎಂದು ಆಶಿಸಿದರು.
ಮಳೆಯಿಂದ 18292.57 ಕೋಟಿ ರೂ.ಹಾನಿ: ಕಂದಾಯ ಸಚಿವ ಆರ್.ಅಶೋಕ
ಪ್ರಸಕ್ತ ಸಾಲಿನಲ್ಲಿ ಜುಲೈರಿಂದ ನವೆಂಬರ್‍ವರೆಗೆ ರಾಜ್ಯಾದ್ಯಂತ ಸುರಿದ ಮಳೆಯಿಂದಾಗಿ ರೂ.18292.57 ಕೋಟಿ ಅಂದಾಜು ಬೆಳೆಹಾನಿಯಾಗಿದ್ದು, ಕೇಂದ್ರ ಸರಕಾರದ ಎಸ್‍ಡಿಆರ್‍ಎಫ್/ಎನ್‍ಡಿಆರ್‍ಎಪ್ ಮಾರ್ಗಸೂಚಿ ಅನ್ವಯ ರೂ.2123.47 ಕೋಟಿಗಳ ಅರ್ಥಿಕ ನೆರವು ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಅವರು ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಹಾನಿ ಹಾಗೂ ಮೂಲಸೌಕರ್ಯಗಳ ತುರ್ತುದುರಸ್ಥಿಗಾಗಿ ಕ್ರಮಕೈಗೊಳ್ಳಲಾಗುತ್ತಿದೆ. ನಿಯಮಾನುಸಾರ ಬೆಳೆಹಾನಿ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿದ ತಕ್ಷಣ ರೈತರ ಬ್ಯಾಂಕ್ ಖಾತೆಗೆ ಇನ್‍ಪುಟ್ ಸಬ್ಸಿಡಿ ಹಣ ಮಾಡಲಾಗುತ್ತಿದ್ದು,ಇದುವರೆಗೆ 6.60ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ರೂ.443.16 ಕೋಟಿ ಜಮಾ ಮಾಡಲಾಗಿದೆ ಎಂದರು.
ರಾಜ್ಯಾದ್ಯಂತ ಮಳೆಯಿಂದ 39975 ಮನೆಗಳು ಹಾನಿಯಾಗಿದ್ದು,ನಿಯಮಾನುಸಾರ ಪರಿಹಾರ ಒದಗಿಸಲಾಗಿದೆ ಎಂದು ವಿವರಿಸಿದರು.
ಕೆ-ಶಿಫ್‍ನಡಿ ಹರಿಹರ-ಹೊನ್ನಾಳಿ-ಶಿವಮೊಗ್ಗ ರಸ್ತೆ ಅಭಿವೃದ್ಧಿ: ಸಚಿವ ಸಿ.ಸಿ.ಪಾಟೀಲ್
ಹರಿಹರ- ಹೊನ್ನಾಳಿ-ಶಿವಮೊಗ್ಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಲು ನೀತಿ ಆಯೋಗದ ಅನುಮತಿ ಬೇಕು. ಈ ಕಾರ್ಯ ವಿಳಂಬವಾಗುವ ಕಾರಣ ಈ ರಸ್ತೆಯನ್ನು ಕೆ-ಶಿಫ್ ಅನುದಾನದಡಿ ಅಭಿವೃದ್ಧಿಪಡಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಎಸ್.ರುದ್ರೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯವು ಶಿವಮೊಗ್ಗ-ಹೊನ್ನಾಳಿ-ಮಲೆಬೆನ್ನೂರು
ಈ ರಸ್ತೆಯಲ್ಲಿ ವಾಹನದಟ್ಟಣೆಗಳು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದ್ದು,ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಜ.೦೧ ರಿಂದ ಬೆಂಬಲ ಬೆಲೆಯೊಂದಿಗೆ ಭತ್ತ, ರಾಗಿ, ಜೋಳ ಖರೀದಿ
ಮುಂಬರುವ ಜನವರಿ ೦೧ ರಿಂದ ಬೆಂಬಲ ಬೆಲೆಯೊಂದಿಗೆ ಭತ್ತ, ರಾಗಿ ಹಾಗೂ ಮೆಕ್ಕೆಜೋಳ ಖರೀದಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರಾದ ಉಮೇಶ್ ಕತ್ತಿ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ ಶಾಸಕರಾದ ವೆಂಕಟರಾವ್ ನಾಡಗೌಡ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆ ಹಾಗೂ ಅದಕ್ಕೆ ಪೂರಕವಾಗಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಜಿ.ಟಿ.ದೇವೆಗೌಡ, ಕೃಷ್ಣ ಭೈರೇಗೌಡ ಅವರು ಈಗಿನಂದಲೇ ಬೆಂಬಲ ಬೆಲೆಯೊಂದಿಗೆ ಬೆಳೆಗಳ ಖರೀದಿ ಪ್ರಾರಂಭಿಸಬೇಕು. ಯಾವುದೇ ಮಿತಿ ನಿಗದಿ ಪಡಿಸದೇ, ಕಳೆದ ಬಾರಿಯ ಮಾನದಂಡಗಳನ್ನೇ ಅನುಸರಿಸಬೇಕು ಎಂದು ಮಾಡಿದ ಮನವಿಗೆ ಸಚಿವರು ಉತ್ತರಿಸಿದರು.
ಇದೇ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಸಹ ಉತ್ತರಿಸಿ ರೈತರ ನೊಂದಣ ಕಾರ್ಯ ನಡೆಯುತ್ತಿದ್ದು, ಹದಿನೈದು ದಿನಗಳಲ್ಲಿ ಖರೀದಿ ಪ್ರಾರಂಭಿಸಲಾಗುವುದು. ಬೆಳೆಯ ಪೂರೈಕೆ ಪ್ರಮಾಣ ಗಮನದಲ್ಲಿ ಇರಿಸಿಕೊಂಡು ಹೆಚ್ಚಿನ ಖರೀದಿಗೆ ಕ್ರಮವಹಿಸಲಾಗುವುದು. ರೈತರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡದೇ ಸರ್ಕಾರಿ ಖರೀದಿ ಕೇಂದ್ರಗಳಿಗೆ ಪೂರೈಸಬೇಕು ಎಂದರು.
ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ವಿಶೇಷ ಸಭೆ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸವನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುರಿಯುತ್ತಿರುವುದಿಂದ ಉಂಟಾಗುತ್ತಿರುವ ಸಮಸ್ಯೆ ನಿರ್ವಹಣೆ ಕುರಿತು ಚರ್ಚಿಸಲು ಶೀಘ್ರವೇ ಮುಖ್ಯಮಂತ್ರಿಗಳ ಅಧ್ಯಕ್ಷೆಯಲ್ಲಿ ವಿಶೇಷ ಸಭೆ ಆಯೋಜಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ತಿಳಿಸಿದ್ದಾರೆ.
ವಿಧಾನ ಸಭೆ ಕಲಾಪದಲ್ಲಿಂದು ಶಾಸಕರಾದ ವೆಂಕಟರಮಣಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ವಿಲೇವಾರಿ ಜವಬ್ದಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ವೈಜ್ಞಾನಿಕ ಪದ್ದತಿ ಅನುಸರಿಸುವಂತೆ ಸೂಚಿಸಿದ್ದು, ನಿರ್ಲಕ್ಷ್ಯ ವಹಿಸಿದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದರು.
ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ತ್ಯಾಜ್ಯದಿಂದ ಹೊರಬಂದ ನೀರು ಬೇರೆ ಕಡೆ ಹರಿದಿರುವುದನ್ನು ಗಮನಿಸಲಾಗಿದ್ದು, ಈಗ ಸರಿಪಡಿಸಲಾಗಿದೆ. ಮುಂದೆ ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ಆದರೂ ಶಾಸಕರಾದ ವೆಂಕಟರಮಣಯ್ಯ ಅವರು ಹಾಗೂ ಕೃಷ್ಣ ಭೈರೇಗೌಡ ಅವರು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಇದೊಂದು ಗಂಭೀರ ವಿಚಾರವಾಗಿದ್ದು ಈ ಬಗ್ಗೆ ನಿರ್ಧಾರ ಕೈಗೊಳ್ಳ ಸಲುವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಏರ್ಪಡಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಬೆಳಗಾವಿಯಲ್ಲಿ 2 ಜೀಪ್ ಖರೀದಿಸಿದ ಮುಖ್ಯಮಂತ್ರಿ ಬೊಮ್ಮಾಯಿ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ