ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ‘ಪದ್ಮವಿಭೂಷಣ’ ಪುರಸ್ಕೃತ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರದ ಮಾಜಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ವಿಧಾನ ಪರಿಷತನಲ್ಲಿ ಸಂತಾಪ ಸೂಚಿಸಲಾಯಿತು.
ಎರಡನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಎಸ್ ಎಂ ಕೃಷ್ಣ ಅವರ ನಿಧನರಾಗಿರುವ ವಿಷಯವನ್ನು ಸದನಕ್ಕೆ ತಿಳಿಸಲು ವಿಷಾಧಿಸುತ್ತೇನೆ ಎಂದು ಸಂತಾಪ ಸೂಚನೆಯ ವಿಷಯವನ್ನು ಪ್ರಕಟಿಸಿದರು.
ಮಿತಭಾಷಿ, ಸೌಮ್ಯ ರಾಜಕಾರಣಿ ಹಾಗೂ ಅಜಾತಶತ್ರುಗಳಾಗಿದ್ದ ಎಸ್ ಎಂ ಕೃಷ್ಣ ಅವರ ನಿಧನದಿಂದಾಗಿ ರಾಷ್ಟ್ರ ಹಾಗೂ ರಾಜ್ಯವು ಒಬ್ಬ ಶ್ರೇಷ್ಟ ರಾಜಕೀಯ ಮುತ್ಸದ್ದಿಯನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚನೆಯ ನಿರ್ಣಯದ ಪ್ರಸ್ತಾವವನ್ನು ಸದನಕ್ಕೆ ಓದಿ ಹೇಳಿದರು.
ಬಳಿಕ ಸಭಾ ನಾಯಕರು ಮತ್ತು ಸಚಿವರಾದ ಎನ್ ಎಸ್ ಬೋಸರಾಜು ಅವರು ಮಾತನಾಡಿ, ಎಸ್ ಎಂ ಕೃಷ್ಣ ಅವರು ತಮ್ಮ ಆಡಾಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದರು. ನೀರಾವರಿ,
ರೈತರ ಸಮಸ್ಯೆಗಳು ಎದುರಾದಾಗ ಅಂತಹ ಸವಾಲುಗಳನ್ನು ಸಮರ್ಥವಾಗಿ ನಿಬಾಯಿಸಿದರು. ಕೆರೆ ಅಭಿವೃದ್ದಿಗೆ ಸಾಕಷ್ಟು ಒತ್ತು ಕೊಟ್ಟಿದ್ದರು. ಬಡ ಮಕ್ಕಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆರಂಭಿಸಿದರು. ಮಹಿಳೆಯರ ಅನುಕೂಲಕ್ಕಾಗಿ ಸ್ತ್ರೀಶಕ್ತಿ ಗುಂಪುಗಳನ್ನು ಆರಂಭಿಸಿದರು. ಅವರ ವಿಚಾರ, ದೂರದೃಷ್ಟಿ ರಾಜ್ಯದ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಯಿತು ಎಂದು ತಿಳಿಸಿದರು.
ಬಳಿಕ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಎಸ್ ಎಂ ಕೃಷ್ಣ ಅವರು ದೂರದೃಷ್ಟಿ ಹೊಂದಿದ ನಾಯಕರಾಗಿದ್ದರು. ಹಿರಿಯರು ಕಿರಿಯರು ಎನ್ನದೇ ಎಲ್ಲರಿಗೂ ಗೌರವ ಕೊಡುತ್ತಿದ್ದರು. ಯುವಕರು ಬೆಳೆಯವೇಕು ಎಂದು ಬಯಸುತ್ತಿದ್ದರು. ಅವರ ಅಗಲಿಕೆ ರಾಜ್ಯ ಹಾಗೂ ರಾಷ್ಟ್ರಕ್ಕೆ ದೊಡ್ಡ ನಷ್ಟ ಎಂದು ತಿಳಿಸಿದರು.
ಸಭಾ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಮತ್ತು ಇನ್ನೀತರ ಸದಸ್ಯರು ಎಸ್ ಎಂ ಕೃಷ್ಣ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿದ ಸೇವೆಯನ್ನು ಸ್ಮರಿಸಿದರು.
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು 1932ರ ಮೇ 01 ರಂದು ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದರು. ಶ್ರೀಯುತರು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ, ಬೆಂಗಳೂರು ಸರ್ಕಾರಿ ಕಾನೂನು ಕಾಲೇಜಿನಿಂದ, ಟೆಕ್ಸಾಸ್‌ನ ಸದರನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಹಾಗೂ ಜಾರ್ಜ್ ವಾಶಿಂಗ್‌ಟನ್‌ನ ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದರು. ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಅಂತರಾಷ್ಟ್ರೀಯ ನ್ಯಾಯ ಶಾಸ್ತ್ರದ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
1962ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಶ್ರೀಯುತರು 4, 5 ಮತ್ತು 7ನೇ ಲೋಕಸಭೆಯ ಸದಸ್ಯರಾಗಿ, 1972-77ರವರೆಗೆ ವಿಧಾನ ಪರಿಷತ್ತಿನ ಸದಸ್ಯರಾಗಿ, 1996- 1999ರವರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಶ್ರೀಯುತರು 1989-1993ರ ಅವಧಿಯಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾಗಿ, 1993-1994ರಲ್ಲಿ ಮೊದಲ ಉಪ ಮುಖ್ಯಮಂತ್ರಿಯಾಗಿ, 1999-2004ರವರೆಗೆ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿ, 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.
ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಕೈಗಾರಿಕೆಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ, ಹಣಕಾಸು ಖಾತೆ ರಾಜ್ಯ ಸಚಿವರಾಗಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ವಿವಿಧ ಹುದ್ದೆಗಳಲ್ಲಿ ಸ್ಮರಣೀಯವಾಗಿ ಜನ ಸೇವೆಯನ್ನು ಸಲ್ಲಿಸಿರುತ್ತಾರೆ. ವಿಶ್ವಭೂಪಟದಲ್ಲಿ ಬೆಂಗಳೂರು ನಗರದ ಚಿತ್ರಣ ಬದಲಿಸಿ ಬೆಂಗಳೂರನ್ನು “ಸಿಲಿಕಾನ್ ಸಿಟಿ”ಯಾಗಿ ಪರಿವರ್ತಿಸಿದ ಹರಿಕಾರರಾಗಿದ್ದ ಶ್ರೀಯುತರು ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರನ್ನು ತಂದವರು. ತಾಲ್ಲೂಕು ಮಟ್ಟದಲ್ಲಿ “ಭೂಮಿ” ತಂತ್ರಜ್ಞಾನವನ್ನು ಜಾರಿ ತರುವ ಮೂಲಕ ಡಿಜಿಟಲೀಕರಣಕ್ಕೆ ನಾಂದಿ ಹಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಶ್ರೀಯುತರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ, ಅಧ್ಯಯನಶೀಲ ಪ್ರವೃತ್ತಿ ಹಾಗೂ ವ್ಯಕ್ತಿತ್ವವು ಉದಯೋನ್ಮುಖ ರಾಜಕಾರಣಿಗಳಿಗೆ ಸ್ಪೂರ್ತಿದಾಯಕವಾಗಿದೆ. ಶ್ರೀಯುತರು ರಾಷ್ಟ್ರ ಮತ್ತು ರಾಜ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ