ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಜಾತಿ ರಾಜಕಾರಣದಲ್ಲಿ ಕಾಂಗ್ರೆಸ್ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸರ್ಕಾರ ಹಾಗೂ ಪಕ್ಷದ ವಿರುದ್ಧ ಮಾತನಾಡುವವರ ಬಗ್ಗೆ ಪಕ್ಷವು ಸರಿಯಾದ ನಿರ್ಧಾರ ಕೈಗೊಳ್ಳಲಿದೆ. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಎಲ್ಲಾ ಸಮುದಾಯವನ್ನು ಸಮನಾಗಿ ನೋಡಬೇಕು ಹಾಗೂ ನ್ಯಾಯ ನೀಡಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ವಾಗಬಾರದು. ನಾನು ಕಾಲಮಿತಿ ನೀಡಿಲ್ಲ. ಅವರೇ ಮಾಡಿ ಎಂದು ಹೇಳಿದ್ದು. ಅವರು ಕೊಟ್ಟ ಒಂದು ವಾರದಲ್ಲಿಯೇ ನಾವು ತೀರ್ಮಾನ ಕೈಗೊಂಡಿದ್ದೇವೆ. ಕಾಶಪ್ಪನವರ್ ಅಧ್ಯಕ್ಷರು ಹಾಗೂ ಶಾಸಕರಿದ್ದರು. ಹಾಗೂ ಅವರ ತಂದೆ ಸಚಿವರಿದ್ದಾಗ ಕಾಂಗ್ರೆಸ್ ಯಾಕೆ ಮಾಡಿಲ್ಲ. 2016 ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು, ಸಿದ್ದರಾಮಯ್ಯ ಮುಖ್ಯ ಮಂತ್ರಿಗಳಿದ್ದರು. ಕಾಂತರಾಜ ಸಮಿತಿ ಇವರ ಅರ್ಜಿಯನ್ನು ತಿರಸ್ಕರಿಸಿತು. 2 ಎ ನೀಡಲಾಗುವುದಿಲ್ಲ 3 ಬಿ ನಲ್ಲಿಯೇ ಇರಬೇಕು ಎಂದು ಆದೇಶವಾಗಿದೆ. 2016 ರಿಂದ 18 ರವಗೆ ಅವರದ್ದೇ ಸರ್ಕಾರವಿತ್ತು. ಆಗ ಪ್ರಶ್ನೆ ಕೇಳದವರು ಈಗ ಏಕೆ ಕೇಳುತ್ತಾರೆ.ಅವರಿಗೆ ಯಾವ ನೈತಿಕ ಹಕ್ಕಿದೆ. ಕಾಂಗ್ರೆಸ್ ನವರು ಈ ಜಾತಿ ರಾಜಕಾರಣದಲ್ಲಿ ತಮ್ಮ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಸ್ವಾಮಿಗಳು ಅವರ ಅಕ್ಕಪಕ್ಕದಲ್ಲಿರುವವರಿಗೆ ಅವರು ಇದ್ದಾಗ ಏನು ಮಾಡಿದರು ಎಂಬ ಪ್ರಶ್ನೆ ಕೇಳಬೇಕು. ಅದು ಬಿಟ್ಟು ಈ ರೀತಿಯ ವಿಷಮ ವಾತಾವರಣ ಸೃಷ್ಟಿ ಸುವುದು ಸರಿಯಲ್ಲ ಎಂದರು.
*ವೈಯಕ್ತಿಕ ನಿಂದನೆ ಮಾಡುವುದು ಕರ್ನಾಟಕದ ರಾಜಕೀಯ ಸಂಸ್ಕೃತಿಯಲ್ಲ*
ಮೀಸಲಾತಿ ವಿಚಾರದಲ್ಲಿ ಬದ್ಧತೆಯಿಂದ ಸರ್ಕಾರ ಕೆಲಸ ಮಾಡುತ್ತಿದ್ದೇವೆ. ಸದಾಶಿವ ಆಯೋಗ ಹತ್ತು ವರ್ಷವಾದರೂ ಅನುಷ್ಠಾನಕ್ಕೆ ಬಂದಿಲ್ಲ. ಕಾಂತರಾಜ ಆಯೋಗವೂ ಬೆಳಕು ಕಂಡಿಲ್ಲ. ಹಿಂದುಳಿದ ವರ್ಗದ ಆಯೋಗ ನೀಡಿರುವ ಮಧ್ಯಂತರ ವರದಿಯನ್ನು ಒಂದು ವಾರದಲ್ಲಿ ಸಂಪುಟದಲ್ಲಿಟ್ಟು, ತಾತ್ವಿಕ ಒಪ್ಪಿಗೆ ನೀಡಿ, ಬೇಡಿಕೆ ಇಟ್ಟವರನ್ನು ಗಮನಿಸಿ, ಪ್ರವರ್ಗ 2 ರಲ್ಲಿ ಸೇರಿಸಲು ನಾವು ಘೋಷಣೆ ಮಾಡಿದ್ದೇವೆ. ಇದು ನಮ್ಮ ಬದ್ಧತೆ ಮ್ ಹೆಚ್ಚಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ದತ್ತಾಂಶ ಸಂಗ್ರಹ ಮಾಡಿ ಅಂತಿಮ ವರದಿ ನೀಡಲಾಗುವುದು ಎಂದಿದ್ದಾರೆ. ಆದಷ್ಟು ಬೇಗ ನೀಡಲು ತಿಳಿಸಲಾಗಿದೆ.
ವೈಯಕ್ತಿಕ ವಿಚಾರಗಳನ್ನು ಎಲ್ಲರೊಂದಿಗೆ ತಿಳಿಸಿದ್ದಾರೆ. ರಾಜಕಾರಣದಲ್ಲಿ ಎಲ್ಲರೂ ಜನ ಮನ್ನಣೆ ಪಡೆದೆ ಬಂದಿರುತ್ತಾರೆ. ಯಾರು ಎನಿದ್ದಾರೆ ಎಂದು ಜನರಿಗೆ ತಿಳಿದಿದೆ. ವೈಯಕ್ತಿಕವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನಾವು ಚಿಂತಿಸಬೇಕು. ಕರ್ನಾಟಕದ ರಾಜಕೀಯ ಸಂಸ್ಕೃತಿ ಇದಲ್ಲ. ವಿಷಯಾಧಾರಿತ ಭಿನ್ನಾಭಿಪ್ರಾಯ ಇರಬೇಕು. ಆದರೆ ವೈಯಕ್ತಿಕ ನಿಂದನೆ ಸರಿಯಲ್ಲ. ಅದಕ್ಕೆ ಹೊರತಾಗಿ ಮಾತನಾಡಿದರೆ, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
*ಎಸ್ಕಾಂ ಗಳನ್ನು ಸಾಲದ ಸುಳಿಗೆ ನೂಕಿದ ಕಾಂಗ್ರೆಸ್*
ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಈಗಾಗಲೇ ಎಸ್ಕಾಮ್ ಗಳನ್ನು ಸಾಲದ ಶೂಲಕ್ಕೆ ನೂಕಿದ್ದಾರೆ. ಅವುಗಳಿಗೆ ನೇರವಾಗಿ 8 ಸಾವಿರ ಕೋಟಿ ರೂ. ನೀಡಿದ್ದೇವೆ.
13 ಸಾವಿರ ಕೋಟಿ ರೂ.ಗಳಿಗೆ ಗ್ಯಾರಂಟಿ ಕೊಟ್ಟು ಸಾಲ ಪಡೆಯಲಾಗಿದೆ. ಅಂದರೆ 21 ಸಾವಿರ ಕೋಟಿ ರೂ. ಎಸ್ಕಾಂ ಮತ್ತು ಇಂಧನ ಕ್ಷೇತ್ರದಲ್ಲಿ ತೊಡಗಿಸಿದ್ದರಿಂದ ಅವು ಜೀವಂತವಾಗಿವೆ. ಇದು ಕಾಂಗ್ರೆಸ್ ಕಾಣಿಕೆ. ಅವರು ಬಿಟ್ಟು ಹೋದ ಬಳುವಳಿ. ಈಗ ಮತ್ತೆ ಚುನಾವಣೆ ಯಲ್ಲಿ ಸೋಲುತ್ತೇವೆ ಎಂದು ಗೊತ್ತಾಗಿ ಹತಾಶರಾಗಿ ಈ ರೀತಿ ಘೋಷಣೆಗಳನ್ನು ಮಾಡಿದ್ದಾರೆ. ಅವರಿಗೆ ಇದ್ಯಾವುದೂ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ದಾರಿ ತಪ್ಪಿಸುವ, ಮೋಸ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಅವರ ಘೋಷಣೆಗೆ ಸುಮಾರು 9 ಸಾವಿರ ಕೋಟಿಗಿಂತ ಹೆಚ್ಚು ರೂ.ಗಳ ಅವಶ್ಯಕತೆ ಇದೆ. 9 ಸಾವಿರ ಕೋಟಿ ಇಲ್ಲಿ ನೀಡಿದರೆ, ಬೇರೆ ಯೋಜನೆಗಳಿಗೆ ಕಡಿತ ಮಾಡುತ್ತಾರೆ. ಸಾಮಾಜಿಕ ವಲಯದಲ್ಲಿ ಕಡಿತವಾಗುತ್ತದೆ. ಅವರು ಆರಿಸಿ ಬರುವುದಿಲ್ಲ. ಜನರಿಗೆ ದಾರಿ ತಪ್ಪಿಸುವ ಕೆಲಸ ವನ್ನು ಮಾಡುತ್ತಿದ್ದಾರೆ. ನಾವು ಜವಾಬ್ದಾರಿಯುತ ಸರ್ಕಾರ ವಾಗಿರುವುದರಿಂದ ಜವಾಬ್ದಾರಿಯಿಂದ ಮಾತನಾಡುತ್ತೇವೆ. ನಮಗೂ ಜನರ ಕಷ್ಟ ಕಾರ್ಪಣ್ಯಗಳು ತಿಳಿದಿವೆ ಎಂದರು.
https://pragati.taskdun.com/what-is-the-reason-why-sanjay-patil-is-so-disturbed/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ