ಎಂ.ಕೆ.ಹೆಗಡೆ, ಬೆಳಗಾವಿ
ಪ್ರಶ್ನೆ: ಫಲಿತಾಂಶದ ಬಳಿಕ ರಾಜ್ಯ ರಾಜಕೀಯ ಏನಾಗಲಿದೆ?
ಬಿಜೆಪಿ ಉತ್ತರ: ನಮ್ಮ ಸರಕಾರಕ್ಕೆ ಅಪಾಯವಿಲ್ಲ, ಮುಂದಿನ ಮೂರೂವರೆ ವರ್ಷ ಭದ್ರವಾಗಿರುತ್ತದೆ.
ಜೆಡಿಎಸ್ ಉತ್ತರ: ಸರಕಾರ ಸುಭದ್ರವಾಗಿರುತ್ತದೆ, ಆದರೆ ಯಾವ ಸರಕಾರ ಎಂದು ಹೇಳುವುದಿಲ್ಲ.
ಕಾಂಗ್ರೆಸ್ ಉತ್ತರ: ಬಿಜೆಪಿ ಸರಕಾರ ಪತನವಾಗಲಿದೆ. ಮುಂದೆ ಏನೂ ಆಗಬಹುದು.
ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆ ಫಲಿತಾಂಶ ಡಿ.9ರಂದು ಹೊರಬೀಳಲಿದೆ. ಈ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ 15ರಲ್ಲಿ 6 ಸ್ಥಾನ ಗೆದ್ದರೆ ನೂತನವಾಗಿ ಗೆದ್ದಿರುವವರು ಮಂತ್ರಿಸ್ಥಾನ ಅಲಂಕರಿಸಲಿದ್ದಾರೆ. ಬಿಜೆಪಿಯೊಳಗೆ ಆಂತರಿಕ ಕಲಹ ಕಾಣಿಸಿಕೊಳ್ಳಬಹುದು.
ಬಿಜೆಪಿ ಕನಿಷ್ಠ 6 ಸ್ಥಾನವನ್ನೂ ಗೆಲ್ಲಲು ಆಗದಿದ್ದರೆ? ಆಗ ಶುರುವಾಗಲಿದೆ ನಂಬರ್ ಗೇಮ್.
ಸಾಧ್ಯತೆ 1: ಬಿಜೆಪಿ ಮತ್ತೆ ಆಪರೇಶನ್ ಕಮಲಕ್ಕೆ ಕೈ ಹಾಕಬಹುದು.
ಸಾಧ್ಯತೆ 2: ಕಾಂಗ್ರೆಸ್ -ಜೆಡಿಎಸ್ ಮರು ಮೈತ್ರಿ.
ಸಾಧ್ಯತೆ 3: ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದು.
3ನೇ ಸಾಧ್ಯತೆ ತೀರಾ ಕಡಿಮೆ. ಯಾವ ಪಕ್ಷಕ್ಕೂ ಚುನಾವಣೆ ಬೇಕಾಗಿಲ್ಲ. ಹೇಗಾದರೂ ಸರಿ ಅಧಿಕಾರ ಬೇಕಾಗಿದೆ.
ಸಮ್ಮಿಶ್ರ ಸರಕಾರ ಪತನದ ನಂತರ ಬಾಯಿಗೆ ಬಂದಂತೆ ಕೆಸರೆರಚಾಟ ಮಾಡಿದ್ದ ಕಾಂಗ್ರೆಸ್ -ಜೆಡಿಎಸ್ ಮರು ಮೈತ್ರಿ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ಗೆ ಮುಖ್ಯಮಂತ್ರಿ ಸ್ಥಾನ ನೀಡಿ, ತಾನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಜೆಡಿಎಸ್ ತೃಪ್ತಿಪಟ್ಟುಕೊಳ್ಳಲೂ ಬಹುದು. ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ ಅಥವಾ ಮತ್ತೆ ಯಾರನ್ನಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಜೆಡಿಎಸ್ ಪ್ರಫೋಸ್ ಮಾಡಬಹುದು.
ಕಾಂಗ್ರೆಸ್ ಹಾಗೂ ಬಿಜೆಪಿ ಎರಡರ ಜೊತೆಗೂ ಸಮಾನ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದೆ ಜೆಡಿಎಸ್. ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಸಾಧ್ಯವಾಗದಿದ್ದರೆ ಬಿಜೆಪಿಗೆ ಬೆಂಬಲ ನೀಡಿ ಸರಕಾರದೊಳಗೆ ಸೇರಿಕೊಳ್ಳಬಹುದು.
ಸರಕಾರ ಸೇಫ್ ಆಗಿರುತ್ತದೆ ಎಂದು ಹೇಳಿದ್ದೇನೆ, ಆದರೆ ಯಾವ ಸರಕಾರ ಎಂದು ಹೇಳಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ.
ಕಾಂಗ್ರೆಸ್ 12 ಸ್ಥಾನ ಗೆಲ್ಲಲಿದೆ. ಬಿಜೆಪಿ ಸರಕಾರ ಪತನವಾಗುತ್ತದೆ. ನಂತರ ಏನು ಬೇಕಾದರೂ ಆಗಬಹುದು ಎಂದಿದ್ದಾರೆ ಸಿದ್ದರಾಮಯ್ಯ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ನಿರ್ಣಯವೇ ಅಂತಿಮ ಎಂದಿದ್ದಾರೆ ಎಚ್.ಡಿ.ದೇವೇಗೌಡ.
ಕಳೆದ 4-5 ದಿನದಿಂದ ಕಾಂಗ್ರೆಸ್ -ಜೆಡಿಎಸ್ ಆರೋಪ -ಪ್ರತ್ಯಾರೋಪ ಕಡಿಮೆ ಮಾಡಿವೆ. ಕೆಲವು ಕ್ಷೇತ್ರಗಳಲ್ಲಿ ಒಳ ಒಪ್ಪಂದದ ಗುಮಾನಿಯೂ ಎದ್ದಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಪಚುನಾವಣೆ ಬಳಿಕ ಕುತೂಹಲಕರ ರಾಜಕೀಯ ಬೆಳವಣಿಗೆಯಂತೂ ನಿಶ್ಚಿತ. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ, ಅಧಿಕಾರ ಹಿಡಿಯುವುದಕ್ಕಾಗಿ ಯಾರು ಯಾವ ಮಟ್ಟಕ್ಕೂ ಇಳಿಯಬಹುದು.
ಬಿಜೆಪಿ ಬಹುಮತ ಪಡೆಯದಿದ್ದಲ್ಲಿ ಕಾಂಗ್ರೆಸ್-ಜೆಡಿಎಸ್ ಆಟಆಡಬಹುದು. ಬಿಜೆಪಿ ಬಹುಮತ ಸಾಧಿಸಿದಲ್ಲಿ ಮಂತ್ರಿಸ್ಥಾನ ವಂಚಿತರು ಆಟಆಡಲು ಶುರುಮಾಡಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ