Kannada NewsLatest

ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ;ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವು ಕಷ್ಟವಲ್ಲ ಎಂದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಾಯುವ್ಯ ಶಿಕ್ಷಕರ ಮತ್ತು ಪದವೀಧರರ ಮತಕ್ಷೇತ್ರದ ಚುನಾವಣೆಯನ್ನು ಕಾಂಗ್ರೆಸ್‌ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕರೆ ನೀಡಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ವಾಯುವ್ಯ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಯ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಪದವೀಧರರ ಮತಕ್ಷೇತ್ರಕ್ಕೆ ಅಥಣಿಯ ಸುನೀಲ್‌ ಸಂಕ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಈಗಾಗಲೇ ಘೋಷಿಸಲಾಗಿದೆ. ಆದ್ದರಿಂದ ಮೂರು ಜಿಲ್ಲೆಯ ಮುಖಂಡರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಕಷ್ಟವಿಲ್ಲ. ಆದ್ದರಿಂದ ಪ್ರತಿಯೊಬ್ಬ ಮತದಾರರನ್ನು ಖುದ್ದು ಭೇಟಿ ನೀಡಿ ಕಾಂಗ್ರೆಸ್‌ ಪಕ್ಷಕ್ಕೆ ಸೆಳೆಯಬೇಕು. ಅದಕ್ಕೆ ಬೇಕಾದ ಸಹಾಯ, ಸಹಕಾರ ಪಕ್ಷದ ಎಲ್ಲಾ ಶಾಸಕರು, ಮಾಜಿ ಶಾಸಕರು, ಮುಖಂಡರು ನೀಡುತ್ತಾರೆ ಎಂದು ತಿಳಿಸಿದರು.

Home add -Advt

ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ  ಸರ್ಕಾರ ಅತೀ ಭ್ರಷ್ಟವಾಗಿದೆ. ಸುಳ್ಳು ಹೇಳುವುದೇ ಪ್ರಧಾನಿ ಮೋದಿಯವರ ಕಾಯಕವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್‌ ಕೈ ಗೊಂಬೆ ಆಗಿದ್ದಾರೆ. ಕಾರಣ ಈ ಬಿಜೆಪಿ ಸರ್ಕಾರದಿಂದ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಜನರಿಗೆ ಈ ಬಗ್ಗೆ ತಿಳಿವಳಿಕೆ ನೀಡಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಲು ಪಣ ತೊಡಬೇಕೆಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿಯಾದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಪದವೀಧರರ ಮತಕ್ಷೇತ್ರದ ಅಭ್ಯರ್ಥಿಯಾದ ಸುನೀಲ್‌ ಸಂಕ ಅವರಷ್ಟೇ ಚುನಾವಣೆಗೆ  ತಯಾರಿ ಮಾಡಿದರೆ ಸಾಲದು, ಮೂರು ಜಿಲ್ಲೆಯ ಮುಖಂಡರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರ ನೇತೃತ್ವದಲ್ಲಿ ಚುನಾವಣೆ ತಯಾರಿ ನಡೆಸಬೇಕು. ಅದಕ್ಕೆ ನಮ್ಮ ಸಹಕಾರವೂ ಇರಲಿದೆ. ಬೆಳಗಾವಿ ಎಂಎಲ್‌ ಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರೀತಿಯಲ್ಲಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸೋಣ ಎಂದು ಕರೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮಾತನಾಡಿ, ಈಗಾಗಲೇ ನಾವು ಸಾಕಷ್ಟು ಚುನಾವಣೆಗಳನ್ನು ಎದುರಿಸಿ, ಗೆಲುವು ಸಾಧಿಸಿದ್ದು, ವಾಯುವ್ಯ ಶಿಕ್ಷಕರ ಮತ್ತು ಪದವೀಧರರ ಮತಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಯಾರಿ ನಡೆಸೋಣ. ಕಾರ್ಯಕರ್ತರು ಇಂದಿನಿಂದಲೇ ಚುನಾವಣೆಗೆ ಕಾರ್ಯ ಪ್ರವರ್ತರಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂಎಲ್‌ಸಿ ಸುನೀಲ್‌ ಪಾಟೀಲ್‌, ಶಾಸಕರಾದ ಗಣೇಶ ಹುಕ್ಕೇರಿ, ಆನಂದ ನ್ಯಾಮಗೌಡ, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳಕರ್‌, ಅಂಜಲಿ ಲಿಂಬಾಳ್ಕರ್‌, ಮಾಜಿ ಶಾಸಕರಾದ ಅಶೋಕ ಪಟ್ಟಣ, ಶ್ಯಾಮ್‌ ಘಾಟಗೆ, ಮಾಜಿ ಸಚಿವ ವೀರಕುಮಾರ ಪಾಟೀಲ್‌, ಎಚ್.ವೈ.ಮೇಟಿ, ಅಜಯ ಸರನಾಯಕ, ಆರ್. ತಿಮ್ಮಾಪುರ, ಕಾಂಗ್ರೆಸ್‌ ಮುಖಂಡರಾದ ಮಹಾವೀರ ಮೋಹಿತೆ, ಗಜಾನನ ಮಂಗಸೂಳಿ, ಕಿರಣ ಸಾಧುನ್ನವರ್‌, ಡಾ. ಪದ್ಮಜೀತ್‌ ನಾಡಗೌಡ, ವಿಶ್ವಾಸ ವೈದ್ಯ, ಪಂಚನಗೌಡರ ದ್ಯಾಮಣ್ಣವರ್‌, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಎಂ.ಜೆ, ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿಯಾದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಪದವೀಧರರ ಮತಕ್ಷೇತ್ರದ ಅಭ್ಯರ್ಥಿಯಾದ ಸುನೀಲ್‌ ಸಂಕ ಸೇರಿದಂತೆ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ಸರಕಾರದಿಂದ ಸಾಧ್ಯವಾಗದ ಕೆಲಸ ಮಠದಿಂದ ಸಾಧ್ಯವಾಗಿದೆ:ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button