Belagavi NewsBelgaum NewsKarnataka NewsPolitics

*ಬೆಳಗಾವಿಯಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್‌  ‘ರಣಕಹಳೆʼ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಎಲ್ಲಾ ವಸ್ತುಗಳ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಸಿಪಿಎಸ್‌ ಮೈದಾನದಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ʻ’ಬೇಕಿತ್ತಾ ದುಬಾರಿ ಬೆಲೆ ಏರಿಕೆಯ ಸರ್ಕಾರ” ಎಂದು ಕೇಂದ್ರದ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಎಲ್‌ಪಿಜಿ ಸಿಲಿಂಡರ್‌ಗಳು, ಅಕ್ಕಿ, ಚಿನ್ನ ಮತ್ತು ಇತರ ಸರಕುಗಳ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು,  ಕೇಂದ್ರ ಸರ್ಕಾರ ನಿರುದ್ಯೋಗ, ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಿಲ್ಲ. ಪ್ರತಿಭಾರಿಯೂ ಸುಳ್ಳಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ಬಿಜೆಪಿಯಿಂದ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಜನರ ಸಿಟ್ಟಿಗೆ ಕಾರಣವಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌‍ ಸರ್ಕಾರ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ನೆರವಿಗಾಗಿ ಐದು ಗ್ಯಾರಂಟಿಗಳನ್ನು ನೀಡಲಾಗುತ್ತಿದೆ. ಬಿಜೆಪಿ-ಜೆಡಿಎಸ್‌‍ನವರು ಜನಪರ ಯೋಜನೆಗಳನ್ನು ಟೀಕಿಸಿದರು. ಈ ಮೂಲಕ ವಿರೋಧ ಪಕ್ಷಗಳ ನಾಯಕರು ಜನ ಸಾಮಾನ್ಯರ ಪರವಾದ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಲು ಯತ್ನಿಸಿದರು ಎಂದು ಆರೋಪಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ನಮ್ಮ ದೇಶದ ಸಂವಿಧಾನ, ಏಕತೆ, ಸಮಗ್ರತೆ, ಶಾಂತಿ ರಕ್ಷಿಸಿಕೊಂಡು ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರನ್ನು ಕಾಪಾಡಲು ನಾವು ಈ ಹೋರಾಟ ಮಾಡುತ್ತಿದ್ದೇವೆ. ಬೆಳಗಾವಿ ಪುಣ್ಯಭೂಮಿ. ಇತ್ತೀಚೆಗಷ್ಟೇ ನಾವು ಮಹಾತ್ಮಾ ಗಾಂಧಿ ಅವರ ಎಐಸಿಸಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಆಚರಿಸಿದ್ದೆವು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ ಅವರು ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಇದೇ ಮೈದಾನದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದ್ದೆವು” ಎಂದು ತಿಳಿಸಿದರು. 

Home add -Advt

ಗಾಂಧಿಜಿ ಅವರು ಇದೇ ಭೂಮಿಯಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟರು. ನಮ್ಮ ಎಲ್ಲಾ ನಾಯಕರು ಸೇರಿ ಇಲ್ಲಿನ ಗಾಂಧಿ ಬಾವಿಯಲ್ಲಿ ನೀರು ತೆಗೆದುಕೊಂಡು ರಸ್ತೆ ಸ್ವಚ್ಛ ಮಾಡಿ ನಮ್ಮ ರಾಜ್ಯದ ರಕ್ಷಣೆ ಮಾಡುವ ಹೋರಾಟ ಪ್ರಾರಂಭಿಸಿದೆವು. ನಮ್ಮ ಜನರ ಧ್ವನಿ ಕೇಳಲು ಹೋರಾಟ ಮಾಡಿದೆವು. ನಂತರ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ಚಿಕ್ಕೋಡಿಯಲ್ಲಿ ಮೊದಲ ಗ್ಯಾರಂಟಿಯಾಗಿ ಗೃಹಜ್ಯೋತಿಯನ್ನು ಘೋಷಿಸಿದೆವು. ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ, ಬೆಲೆ ಗಗನಕ್ಕೇರುತ್ತಿದೆ, ಆದಾಯ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು” ಎಂದು ಹೇಳಿದರು. 

ನಮ್ಮ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಾಗಿ ಬಜೆಟ್ ನಲ್ಲಿ ರೂ.52 ಸಾವಿರ ಕೋಟಿ ಮೀಸಲಿಟ್ಟಾಗ ಸರ್ಕಾರ ದಿವಾಳಿಯಾಗಲಿದೆ ಎಂದು ಹೇಳುತ್ತಿದ್ದರು. ನಮ್ಮ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ರೂ.500 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ದೇವನಹಳ್ಳಿಯಲ್ಲಿ ಸುಮಾರು ರೂ.500 ಕೋಟಿ ರೂ., ಪಿರಿಯಾಪಟ್ಟಣದಲ್ಲಿ ರೂ,500 ಕೋಟಿ ರೂ., ಬೀದರ್ ಜಿಲ್ಲೆಯಲ್ಲಿ 2025 ಕೋಟಿ ರೂ. ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ” ಎಂದರು.

ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಮಹಿಳೆಯರು ಮಾಂಗಲ್ಯ ಮಾಡಿಸಿಕೊಳ್ಳುವ ಚಿನ್ನದ ಬೆಲೆ 28 ಸಾವಿರ ರೂ. ಇತ್ತು. ಇಂದು ಅದು 1 ಲಕ್ಷಕ್ಕೆ ಏರಿಕೆಯಾಗಿದೆ. ಬೆಳ್ಳಿ 43 ಸಾವಿರದಿಂದ 94 ಸಾವಿರಕ್ಕೆ ಏರಿಕೆಯಾಗಿದೆ. ಡಾಲರ್ ಮೊತ್ತ 59 ರೂ. ನಿಂದ ಇಂದಬ 90 ರೂ. ಸನಿಹಕ್ಕೆ ಬಂದು ನಿಂತಿದೆ. ಸೀಮೆಂಟ್ 268ರಿಂದ 410ಕ್ಕೆ ಏರಿಕೆ, ಕಬ್ಬಿಣ 39 ಸಾವಿರದಿಂದ 73 ಸಾವಿರಕ್ಕೆ ಏರಿಕೆಯಾಗಿದೆ. ಸಕ್ಕರೆ 30ರಿಂದ 60ಕ್ಕೆ, ಅಕ್ಕಿ 30ರಿಂದ 60ಕ್ಕೆ, ಅಡುಗೆ ಎಣ್ಣೆ 60ರಿಂದ 200 ರೂ. ಆಗಿದೆ. ಈ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.

ನೀವೆಲ್ಲರೂ ಆಶೀರ್ವಾದ ಮಾಡಿ ನಮಗೆ ಅಧಿಕಾರ ಕೊಟ್ಟಿದ್ದೀರಿ. ಅಧಿಕಾರ ನಶ್ವರ, ನಮ್ಮ ಸರ್ಕಾರದ ಸಾಧನೆ ಅಜರಾಮರ, ಮತದಾರನೇ ನಮ್ಮ ಪಾಲಿನ ಈಶ್ವರ. ನೀವು ಕೊಟ್ಟ ಶಕ್ತಿಗೆ ನಿಮ್ಮ ಈಣ ತೀರಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಬಿಜೆಪಿಯ ಕೇಂದ್ರ ಸರ್ಕಾರ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದೆ. ಅಂಬೋಡ್ಕರ್ ಅವರ ಹೆಸರನ್ನು ಉಳಿಸಬೇಕು, ಸಂವಿಧಾನ ಕಾಪಾಡಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಈ ಸಂವಿಧಾನದ ಮೂಲಕ ಎಲ್ಲಾ ವರ್ಗದ ಜನರನ್ನು ರಕ್ಷಣೆ ಮಾಡಿಕೊಂಡು ಬರಲಾಗುತ್ತಿದೆ” ಎಂದು ತಿಳಿಸಿದರು.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ಬೆಲೆ ಏರಿಕೆ ಮಾಡಿದ್ದನ್ನು ಜನರಿಗೆ ತಿಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗದೆ. ಕೇಂದ್ರ ಸರ್ಕಾರ ಮಾಡಿರುವ ಬೆಲೆ ಏರಿಕೆಯಿಂದ  ಜನಸಾಮಾನ್ಯರಿಗೆ ಬಹಳ ದೊಡ್ಡ ಹೊರೆಯಾಗಿದೆ ಎಂದರು.

ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಇರುದ್ದ ಪ್ರತಿಭಟನೆ ಮಾಡುವ ಬದಲು ನಮ್ಮ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಅಪ್ರಚಾರ ಮಾಡುವದರಲ್ಲಿ ನಿಸ್ಸಿಮರಾಗಿದ್ದು, ಸತ್ಯವನ್ನೆ ಸುಳ್ಳೆಂದು ಬಿಂಬಿಸಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ. ಆದ್ದರಿಂದ ಜನರು ಈ ಬೆಲೆ ಏರಿಕೆ ಮಾಡಿದ್ದು ಯಾರೆಂದು ತಿಳಿಸುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ  ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಸಚಿವರಾದ ಕೆ.ಎಚ್ ಮುನಿಯಪ್ಪ, ಎಂ.ಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಹೆಚ್.ಸಿ. ಮಹದೇವಪ್ಪ, ಸಂಸದೆ ಪ್ರಿಯಂಕಾ ಜಾರಕಿಹೊಳಿ, ಲಕ್ಷ್ಮಣ ಸವದಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ, ರಾಜ್ಯ ಯುವ ಕಾಂಗ್ರೆಸ್ ‌ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ, ಕೆಪಿಸಿಸಿ ಕಾರ್ಯದರ್ಶಿ ಸದಾನಂದ ವಿ. ಡಂಗನ್ನವರ , ಕಾರ್ತಿಕ್‌ ಪಾಟೀಲ  ಸೇರಿದಂತೆ ಅನೇಕ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್‌‍ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Related Articles

Back to top button