ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಈ ಕುರಿತು ತಂತ್ರಗಾರಿಕೆಗೆ ಗುರುವಾರ ರಾತ್ರಿ ಖಾಸಗಿ ಹೊಟೆಲ್ ನಲ್ಲಿ ಸಭೆ ನಡೆಸಿತು.
ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್ ಮೊದಲಾದವರು ಸಭೆಯಲ್ಲಿದ್ದರು.
ಡಿ.ಕೆ.ಶಿವಕುಮಾರ ಬುಧವಾರ ರಾತ್ರಿಯಿಂದ ಬೆಳಗಾವಿಯಲ್ಲಿದ್ದು, ಹಲವಾರು ಗಣ್ಯರನ್ನು ಭೇಟಿ ಮಾಡಿದ್ದಾರೆ. ಕೆಲವು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಬೆಳಗಾವಿ ಕ್ಷೇತ್ರದ ಪರಿಸ್ಥಿತಿ ಅರ್ಥ ಮಾಡಿಕೊಂಡಿರುವ ಅವರು ಎಲ್ಲ ಮುಖಂಡರೂ ಚುನಾವಣೆಯವರೆಗೆ ಬೆಳಗಾವಿಯಲ್ಲೇ ವಾಸ್ತವ್ಯ ಹೂಡುವಂತೆ ನಿರ್ದೇಶಿಸಿದ್ದಾರೆ. ಪ್ರತಿಯೊಬ್ಬರಿಗೂ ಟಾಸ್ಕ್ ನೀಡಿದ್ದಾರೆ. ವ್ಯರ್ಥವಾಗಿ ಸಮಯ ಕಳೆಯದಂತೆ ತಾಖೀತು ಮಾಡಿದ್ದಾರೆ.
ಈವರೆಗಿನ ಪ್ರಚಾರ, ಯಾವ ಭಾಗದಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವ ಕುರಿತು ಸತೀಶ್ ಜಾರಕಿಹೊಳಿ ಅವರಿಂದ ಡಿ.ಕೆ.ಶಿವಕುಮಾರ ಮಾಹಿತಿ ಪಡೆದುಕೊಂಡರು. ಆಗಬೇಕಾದ ಕೆಲಸಗಳ ಕುರಿತು, ರಾಜಕೀಯ ಬೆಳವಣಿಗೆ, ಬಿಜೆಪಿಯ ತಂತ್ರಗಾರಿಕೆ ಎಲ್ಲವನ್ನೂ ತಿಳಿದುಕೊಂಡರು.
ಯಾವುದೇ ಕಾರಣದಿಂದ ಈ ಬಾರಿ ಬೆಳಗಾವಿಯನ್ನು ಬಿಜೆಪಿಗೆ ಬಿಟ್ಟುಕೊಡಬಾರದು. ಬಿಜೆಪಿ ಕೇವಲ ಅನುಕಂಪದ ಆಧಾರದ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಲಿಂಗಾಯತರು ಸೇರಿದಂತೆ ಎಲ್ಲ ಜಾತಿಯವರೂ ನಮ್ಮನ್ನು ಬೆಂಬಲಿಸಲು ಬರುತ್ತಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದೆ ಎನ್ನುವ ಅಭಿಪ್ರಾಯವನ್ನು ಕ್ಷೇತ್ರದಲ್ಲಿ ಓಡಾಡಿದ ಎಲ್ಲ ಮುಖಂಡರೂ ತಿಳಿಸಿದರು.
ಶನಿವಾರ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗಮಿಸುತ್ತಿದ್ದು ಅವರ ಕಾರ್ಯಕ್ರಮ ಆಯೋಜಿಸುವ ಕುರಿತು ಸಹ ಚರ್ಚಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ