Kannada NewsLatest
ಪರಿಷತ್ ಫಲಿತಾಂಶದಿಂದ ಕಾಂಗ್ರೆಸ್ ಒಗ್ಗಟ್ಟಿನ ಸಂದೇಶ: ಸತೀಶ್ ಜಾರಕಿಹೊಳಿ, ಸತೀಶ್ ನೇತೃತ್ವವೇ ಗೆಲುವಿಗೆ ಕಾರಣ – ಲಕ್ಷ್ಮಿ ಹೆಬ್ಬಾಳಕರ್, ಅಕ್ಕ ನನಗೆ ದೇವರಿದ್ದಂತೆ – ಚನ್ನರಾಜ
ಅಕ್ಕ ನನಗೆ ದೇವರಿದ್ದಂತೆ – ಚನ್ನರಾಜ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾಂಗ್ರೆಸ್ ಪಕ್ಷ ಬೆಳಗಾವಿಯಲ್ಲಿ ಗಟ್ಟಿಯಾಗಿದೆ. ಮುಂಬರುವ ಚುನಾವಣೆಗಳನ್ನು ಎಲ್ಲರ ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆಂಬ ಸಂದೇಶವನ್ನು ಈ ಚುನಾವಣೆ ಮೂಲಕ ನೀಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಪರಿಷತ್ ಚುನಾವಣೆ ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ಇತ್ತು. ಅದೇ ರೀತಿಯಾಗಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಎರಡನೇ ಪ್ರಾಶಸ್ತ್ಯ ಬಿಜೆಪಿ, ಪಕ್ಷೇತರ ಅಭ್ಯರ್ಥಿ ಯಾರೇ ಬಂದ್ರು ಕಾಂಗ್ರೆಸಗೆ ಲಾಭವೂ ಇಲ್ಲ. ನಷ್ಟವೂ ಇಲ್ಲ. ನಮಗೆ ಸಂಬಂಧ ಪಡುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವನ್ನೂ ಸೋಲಿಸಲೇಬೇಕೆಂದು ಎದುರಾಳಿಗಳು ಪಣ ತೊಟ್ಟಿದ್ದರು, ಇನ್ನೊಂದೆಡೆ ಪಕ್ಷದ ಹಾಲಿ, ಮಾಜಿ ಶಾಸಕರು, ಮುಖಂಡರು ಕೈ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಹಠ ತೊಟ್ಟಿದ್ದರು. ಒಗ್ಗಟ್ಟಿಗೆ ಜಯ ದೊರೆತಿದೆ. ‘ ಕೈ’ ನಾಯಕರ, ಮುಖಂಡರ ಕಾರ್ಯಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹೇಳಿದ್ದಾರೆ.
ಈಗಾಗಲೇ ಹೇಳಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಂದಾಣಿಕೆ ರಾಜಕಾರಣ ಮಾಡುವವರು. ಅಭ್ಯರ್ಥಿ ಚನ್ನರಾಜ್ ಗೆಲುವಿಗೆ ಬೇಕಾದಂತ ಮತ ಇವೆ. ಹೀಗಾಗಿ ಕಾಂಗ್ರೆಸ್ ಗೆಲುವು ನಿಶ್ಚಿತವೆಂದು ಹೇಳಲಾಗಿತ್ತು. ಅದೇ ರೀತಿ ಗೆಲುವು ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸೋಲಿಸಲು ಕಂಡಿತ ಸಾಧ್ಯವಿಲ್ಲ ಎನ್ನುವುದು ಈ ಚುನಾವಣೆ ಮೂಲಕ ಸಾಬೀತಾಗಿದೆ. ಪರಿಷತ್ ಚುನಾವಣೆಯಿಂದ ಜಿಲ್ಲೆಯಲ್ಲಿ ಭಿನ್ನ ವಾತಾವರಣ ನಿರ್ಮಾಣವಾಗಿದೆ, ಏರಿಳಿತ ಆಗುವುದು ಸಾಮಾನ್ಯ. ಎಲ್ಲವನ್ನೂ ಸ್ವೀಕರಿಸಬೇಕು ಎಂದರು.
ಸಂಭ್ರಮಾಚರಣೆ
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಗೆಲುವು ಸಾಧಿಸಿದ ಹಿನ್ನೆಲೆ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಕೈ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಪಕ್ಷದ ಪರ ಕೈ ಕಾರ್ಯಕರ್ತರು ಘೋಷಣೆ ಕೂಗಿ, ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಮಾಜಿ ಜಿಪಂ. ಸದಸ್ಯ ಅರುಣ ಕಟಾಂಬಳೆ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.
ಸತೀಶ್ ನೇತೃತ್ವವೇ ಗೆಲುವಿಗೆ ಕಾರಣ – ಲಕ್ಷ್ಮಿ ಹೆಬ್ಬಾಳಕರ್
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವವೇ ಗೆಲುವಿಗೆ ಕಾರಣ. ಕೇವಲ ಕಾಂಗ್ರೆಸ್ ಮತಗಳನ್ನು ಹಿಡಿದಿಟ್ಟುಕೊಳ್ಳುವುದೇ ನಮಗೆ ಚಾಲೇಂಜ್ ಆಗಿತ್ತು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರ ಗೆಲುವಿಗೆ ಹಾಲಿ, ಮಾಜಿ ಶಾಸಕರು, ಮುಖಂಡರು , ಕಾರ್ಯಕರ್ತರು ಪ್ರತಿಯೊಬ್ಬರು ತಾವೇ ಚುನಾವಣೆ ಸ್ಪರ್ಧಿಯಂತೆ ಕೆಲಸ ಮಾಡಿದ್ದಾರೆ. ಅವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪರಿಷತ್ ಚುನಾವಣೆಯಲ್ಲಿ ಯಾರು, ಯಾರನ್ನು ಸೋಲಿಸಲು ನಿಂತಿದ್ದರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಗೆಲ್ಲೋಕೆ ನಿಂತಿದ್ದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸವನ್ನು ಮಾಡಿದ್ದೇವೆ. ಅದರ ಫಲಿತಾಂಶ ಈಗ ಬಂದಿದೆ. ಬೇರೆ ಪಕ್ಷದ ಬಗ್ಗೆ ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಸಹ ಸ್ವತಃ ತಾವೇ ಚುನಾವಣೆಯಲ್ಲಿ ನಿಂತಿದ್ದೇನೆ ಅನ್ನುವ ರೀತಿಯಲ್ಲಿ ಕೆಲಸ ಮಾಡಿದರು. ಚುನಾವಣೆ ಘೋಷಣೆಯಾದಾಗಿನಿಂದ ಜಿಲ್ಲೆಯಾದ್ಯಂತ ತೆರಳಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು, ಅವರ ಪರಿಶ್ರಮ ಫಲ ನೀಡಿದೆ ಎಂದು ತಿಳಿಸಿದರು.
ಅಕ್ಕ ನನಗೆ ದೇವರಿದ್ದಂತೆ – ಚನ್ನರಾಜ
ಕಾಂಗ್ರೆಸ್ ಪಕ್ಷದ ಗೆಲುವಿನ ಶ್ರೇಯಸ್ಸು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರಿಗೆ ಸಲ್ಲಬೇಕು. ಅವರ ನಿರಂತರ ಪರಿಶ್ರಮದಿಂದ ಭರ್ಜರಿ ಗೆಲುವು ಸಾಧಿಸಿಲು ಸಾಧ್ಯವಾಗಿದೆ ಎಂದು ವಿಜೇತ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ.
ಫಲಿತಾಂಶದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರ ವಿಶ್ವಾಸವೇ ನಮ್ಮ ವಿಶ್ವಾಸವಾಗಿತ್ತು. ಆದ್ದರಿಂದಲೇ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ನಂಬಿಕೆ ಇತ್ತು ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಬದಲಾವಣೆ ಗಾಳಿ ಬಿಸಿದೆ, ಜನರು ಸಹ ಬದಲಾವಣೆ ಬಯಸಿದ್ದಾರೆ. ಆದ ಕಾರಣ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಪಕ್ಷದ ಪ್ರತಿಯೊಬ್ಬರು ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಇದರಿಂದಲೇ ನಾನು ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮ್ಯ, ಕೆಪಿಸಿಸಿ ಅಧ್ಯಕ್ಷ ಡಿ,ಕೆ.ಶಿವಕುಮಾರ್. ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ಮೇಲೆ ವಿಶ್ವಾಸವಿಟ್ಟು ಮತದಾರರು ಆಶೀರ್ವಾದ ಮಾಡಿದ್ದಾರೆ. ಅವರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯ ನಿನ್ನದಾಗಲಿ, ಯಶಸ್ಸು ದೇವರಿಗೆ ಬಿಟ್ಟಿದ್ದು ಅಂತಾ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಯಾವಾಗಲೂ ಹೇಳುತ್ತಿದ್ದರು. ಅವರ ಮಾರ್ಗದಲ್ಲಿಯೇ ನಾನು ನಡzದೆ. ಶಾಸಕಿ ಅವರು ನನಗೆ ರೋಲ್ ಮಾಡೆಲ್, ನನಗೆ ದೇವರು ಇದ್ದಂತೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ