Kannada NewsKarnataka NewsLatestPolitics
*ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್*
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ನಾಳೆ ರಾಜ್ಯಕ್ಕೆ ಆಗಮಿಸುತಿದ್ದು, ಇದೇ ವೇಳೆ ರಾಜ್ಯ ಕಾಂಗ್ರೆಸ್ ಪ್ರಧಾನಿ ಮೋದಿಯವ್ರುಗೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದೆ.
- ರಾಜ್ಯದ ಜನರ ಪರವಾಗಿ ಆಡಳಿತ ಪಕ್ಷ ಕಾಂಗ್ರೆಸ್ ಕೇಳುತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಿ ಮೋದಿ ಎಂದು ಆಗ್ರಹಿಸಿದೆ.
ಬರ ಪರಿಹಾರಕ್ಕಾಗಿ ಸೆಪ್ಟೆಂಬರ್ನಲ್ಲಿ ಮನವಿ ಸಲ್ಲಿಸಲಾಗಿದೆ. ಬರ ಅಧ್ಯಯನ ತಂಡ ಅಕ್ಟೋಬರ್ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದೆ. ಅದೇ ತಿಂಗಳು ಕೇಂದ್ರಕ್ಕೆ ₹17,901 ಕೋಟಿ ಪರಿಹಾರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಷ್ಟು ದಿನ ಸುಮ್ಮನಿದ್ದಿದ್ದು ಯಾಕೆ? #AnswerMadiModi #ಉತ್ತರಕೊಡಿ ಮೋದಿ
- ರಾಜ್ಯದ ಬರಪೀಡಿತ ತಾಲೂಕುಗಳು 223. ಸಂಭವಿಸಿರುವ ನಷ್ಟ ₹33,770 ಕೋಟಿ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ರಾಜ್ಯ ಸರ್ಕಾರ ಕೇಳುತ್ತಿರುವುದು ₹18,177 ಕೋಟಿ ಪರಿಹಾರ.
ನಯಾಪೈಸೆ ಬಿಡುಗಡೆ ಮಾಡದೆ ಕೇಂದ್ರ ಸತಾಯಿಸುತ್ತಿರುವುದೇಕೆ?
3.ರಾಜ್ಯವು ಕಳೆದ 123 ವರ್ಷಗಳಲ್ಲಿ ಕಾಣದ ಭೀಕರ ಬರ ಎದುರಿಸುತ್ತಿದೆ. ಶೇಕಡಾ 40ರಿಂದ 90ರಷ್ಟು ಬೆಳೆ ನಷ್ಟವಾಗಿದೆ. ರೈತರಿಗೆ ಇನ್ಪುಟ್ ಸಬ್ಸಿಡಿ ನೀಡಲು ಹಣ ನೀಡುತ್ತಿಲ್ಲ ಯಾಕೆ?
- ನವೆಂಬರ್ನಲ್ಲಿ ರಾಜ್ಯ ಸಚಿವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರನ್ನು, ಡಿಸೆಂಬರ್ನಲ್ಲಿ ಸ್ವತಃ ಮುಖ್ಯಮಂತ್ರಿಗಳು ಗೃಹಮಂತ್ರಿಯನ್ನು ಭೇಟಿಯಾಗಿ ಬರ ಪರಿಹಾರ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಆದರೂ ಪರಿಹಾರ ನೀಡದಿರುವುದು ಯಾರ ಮೇಲಿನ ಹಟಕ್ಕೆ?
- ಬರ ಪರಿಹಾರಕ್ಕೆ ಬೀದಿ ಹೋರಾಟ ಮಾಡಿದರೂ ಬಗ್ಗಲಿಲ್ಲ. ಸುಪ್ರೀಂ ಕೋರ್ಟ್ ಈಗ 2 ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ತಾಕೀತು ಮಾಡಿ, ಸೂಚಿಸಿದೆ. ಈಗಲಾದರೂ ಬರ ಪರಿಹಾರ ಬಿಡುಗಡೆ ಮಾಡುವಿರೋ ಅಥವಾ ದೇಶದ ಕಾನೂನನ್ನು ಧಿಕ್ಕರಿಸುವಿರೊ? #AnswerMadiModi #ಉತ್ತರಕೊಡಿ ಮೋದಿ
- ಕರ್ನಾಟಕ ತೆರಿಗೆ ಪಾಲನ್ನು ಶೇಕಡಾ 4.72 ರಿಂದ ಶೇಕಡಾ 3.64ಕ್ಕೆ ಇಳಿಸಿದ್ದೇಕೆ? ಇದರಿಂದ ರಾಜ್ಯಕ್ಕೆ ಆದ ₹45,000 ಕೋಟಿಗಳಿಗೂ ಹೆಚ್ಚಿನ ನಷ್ಟ ತುಂಬಿಕೊಡುವವರು ಯಾರು?
- ಕರ್ನಾಟಕದಿಂದ ₹4.5 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಕೇಂದ್ರ ಸರ್ಕಾರ, ತೆರಿಗೆ ಪಾಲಿನ ರೂಪದಲ್ಲಿ ರಾಜ್ಯಕ್ಕೆ ಕೊಡುತ್ತಿರುವುದು ₹50,000 ಕೋಟಿ ಮಾತ್ರ. ಇದು ಅನ್ಯಾಯವಲ್ಲವೆ?
- 2017ರಲ್ಲಿ ತೀವ್ರ ಬರದಿಂದ ರಾಜ್ಯಕ್ಕೆ ₹30,000 ಕೋಟಿ ನಷ್ಟವಾಗಿದ್ದಾಗ ಕೇಂದ್ರ ಬಿಡುಗಡೆ ಮಾಡಿದ್ದು ಕೇವಲ ₹1,435 ಕೋಟಿ. ಆದರೆ ಮಹಾರಾಷ್ಟ್ರಕ್ಕೆ ₹8,195 ಕೋಟಿ, ಗುಜರಾತಿಗೆ ₹3,894 ಕೋಟಿ ಬಿಡುಗಡೆ ಮಾಡಿತ್ತು. ಈ ತಾರತಮ್ಯ ಏಕೆ?
- ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲೆಂದೇ ರೂಪಿಸಿದ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಯಾಕೆ ಅನುಮತಿ ನೀಡಲಿಲ್ಲ?
- 2019ರಲ್ಲಿ ಕರ್ನಾಟಕ ತೀವ್ರ ಪ್ರವಾಹ ಎದುರಿಸಿದಾಗ, ರಾಜ್ಯಕ್ಕೆ ಭೇಟಿ ನೀಡದೇ ಇದ್ದಿದ್ದು, ಕೇಳಿದಷ್ಟು ನೆರೆ ಪರಿಹಾರವನ್ನು ಬಿಡುಗಡೆ ಮಾಡದೇ ಇದ್ದಿದ್ದು ಯಾಕೆ?
- ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ಜೀವ ತುಂಬಲಿರುವ ಮಹಾದಾಯಿ ನದಿ ಯೋಜನೆಗೆ ಇದುವರೆಗೂ ಅನುಮಾತಿ ಯಾಕೆ ನೀಡಿಲ್ಲ?
- ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭದ್ರ ಮೇಲ್ದಂಡೆ ನೀರಾವರಿ ಯೋಜನೆಗೆ ₹5,300 ಕೋಟಿ ಘೋಷಿಸಿದ್ದ ಕೇಂದ್ರ, ವರ್ಷವಾಗುತ್ತಾ ಬಂದರೂ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ?
- ಹದಿನೈದನೆಯ ಹಣಕಾಸು ಯೋಜನೆಯ ಶಿಫಾರಸು ಮಾಡಿದ್ದರೂ ₹5,495 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ?
- ಬೆಂಗಳೂರಿನಲ್ಲಿ ಏಮ್ಸ್ಗೆ ಸ್ಥಾಪನೆಗೆ ಅನುಮತಿ ನೀಡಿದ್ದರೂ ಅನುದಾನ ಬಿಡುಗಡೆಯಾಗಿಲ್ಲ ಯಾಕೆ?
- ರಾಯಚೂರು ಮತ್ತು ಕಲಬುರಗಿಗೆ ಏಮ್ಸ್ ನೀಡಿಲ್ಲ ಯಾಕೆ?
- ಗುಜರಾತಿನ ಅಮುಲ್ ಉದ್ಧಾರ ಮಾಡಲು ನಮ್ಮ ಕನ್ನಡಿಗರ ಬ್ರ್ಯಾಂಡ್ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಯತ್ನಿಸಿದ್ದು ಯಾಕೆ?
- ರಾಜ್ಯದಲ್ಲಿ ನೆರ ಬಂದಿದ್ದಾಗಲೂ ಬರಲಿಲ್ಲ, ಬರ ಬಂದಾಗಲೂ ಬರಲಿಲ್ಲ, ಚುನಾವಣೆ ಬಂದರೆ ಮಾತ್ರ ಓಡೋಡಿ ಬರುತ್ತೀರಲ್ಲ ಯಾಕೆ?
- ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೀನಿ ಎಂಬ ಮಾತನ್ನು ಉಳಿಸಿಕೊಳ್ಳಲಿಲ್ಲ ಯಾಕೆ? ನಿರುದ್ಯೋಗ ತಾಂಡವವಾಡುತ್ತಿದ್ದರೂ ಮಂದಿರ, ಮಸೀದಿಗಳತ್ತ ಕೈತೋರಿಸುತ್ತೀರಿ ಯಾಕೆ?
- 2018ರಲ್ಲಿ ನಮ್ಮ ರಾಜ್ಯಕ್ಕೆ ಕನ್ನಡ ಧ್ವಜದ ಮಾನ್ಯತೆ ನೀಡುವಂತೆ ಮನವಿ ಮಾಡಿದ್ದರೂ ಇದುವರೆಗೆ ಏನೂ ಹೇಳದೆ ಮೌನವಹಿಸಿರುವುದು ಯಾಕೆ?
- ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಹೇರಿಕೆ ವಿರೋಧಿಸಿ ಕನ್ನಡಿಗರು ಪ್ರತಿಭಟಿಸಿದರೂ ಇದುವರೆಗೆ ಏನೂ ಹೇಳದೆ ಮೌನವಹಿಸಿರುವುದು ಯಾಕೆ?
- ಸಂವಿಧಾನ ಬದಲಿಸುವ ಮಾತುಗಳನ್ನು ಬಿಜೆಪಿಯ ಮಂತ್ರಿಗಳು, ಸಂಸದರು, ಶಾಸಕರುಗಳೇ ಹೇಳುತ್ತಿದ್ದರೂ ಅವರ ಮಾತುಗಳನ್ನು ಖಂಡಿಸುತ್ತಿಲ್ಲವೇಕೆ? ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ?
- ಎರಡು ರಾಜ್ಯಗಳ ನಡುವೆ ಕಾವೇರಿ ವಿಚಾರವಾಗಿ ಸಂಘರ್ಷ ನಡೆಯುತ್ತಿದ್ದರೂ ಮಧ್ಯಸ್ಥಿಕೆ ವಹಿಸಲು ಹಿಂದೇಟು ಹಾಕಿದ್ದೇಕೆ? #AnswerMadiModi #ಉತ್ತರಕೊಡಿಮೋದಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ