*ಸಂವಿಧಾನ ಭಾರತೀಯರ ಪವಿತ್ರ ಗ್ರಂಥ, ಅದನ್ನು ತಿರುಚಲು ಅವಕಾಶ ನೀಡಬಾರದು: ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ:
“ಹಿಂದೂಗಳಿಗೆ ಭಗವದ್ಗೀತೆ, ಮುಸಲ್ಮಾನರಿಗೆ ಖುರಾನ್, ಕ್ರೈಸ್ತರಿಗೆ ಬೈಬಲ್ ಹೇಗೆ ಪವಿತ್ರ ಗ್ರಂಥವೋ ಅದೇರೀತಿ ಪ್ರತಿಯೊಬ್ಬ ಭಾರತೀಯನಿಗೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಪವಿತ್ರ ಗ್ರಂಥ. ಇದನ್ನು ತಿರುಚಲು ಅವಕಾಶ ನೀಡಬಾರದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಆನೇಕಲ್ ನಲ್ಲಿ ನಡೆದ ‘ಸಂವಿಧಾನ ಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಡಿಸಿಎಂ ಅವರು ಹೇಳಿದ್ದಿಷ್ಟು;
“ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೆ ಪವಿತ್ರ ಗ್ರಂಥ. ಪ್ರಜಾಪ್ರಭುತ್ವ ಎಂದರೆ ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ಜನ ಪ್ರತಿನಿಧಿಗಳನ್ನು ಜನರೇ ಆಯ್ಕೆ ಮಾಡುವ ವ್ಯವಸ್ಥೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ರಕ್ಷಣೆ ನೀಡಲಾಗಿದೆ.
ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಯಾವುದೇ ಒಂದು ಜಾತಿ, ಧರ್ಮ ಹಾಗೂ ವರ್ಗಕ್ಕೆ ಸೇರಿಲ್ಲ. ಎಲ್ಲರನ್ನೂ ಸಮಾನವಾಗಿ ಕಂಡು ಸಹಾಯ ಮಾಡುವುದು ಕಾಂಗ್ರೆಸ್ ಪಕ್ಷದ ತತ್ವ.
ಕಾಂಗ್ರೆಸ್ ಪಕ್ಷ ನೀಡಿರುವ ಐದೂ ಗ್ಯಾರಂಟಿ ಯೋಜನೆಗಳು ಎಲ್ಲಾ ಸಮುದಾಯದವರಿಗೂ ಸೇರಿದೆ. ಜಾತಿ, ಧರ್ಮ ಆಧಾರದ ಮೇಲೆ ಈ ಯೋಜನೆ ನೀಡುತ್ತಿಲ್ಲ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳು ಎಲ್ಲ ವರ್ಗದವರಿಗೂ ನೀಡಲಾಗುತ್ತಿದೆ. ಇದೇ “ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ತತ್ವವಾಗಿದೆ.
ಮೋದಿ ಅವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದರು. ಆದರೆ ಈಗ ಮಾಧ್ಯಮಗಳಲ್ಲಿ ಮೋದಿ ಗ್ಯಾರಂಟಿ ಎಂದು ಜಾಹೀರಾತು ಪ್ರಕಟಿಸಿ ನಮ್ಮ ವಿಚಾರವನ್ನು ಕಾಪಿ ಮಾಡುತ್ತಿದ್ದಾರೆ.
ಅಂಬೇಡ್ಕರ್ ಅವರು ‘ನೀನು ಹೋರಾಟ ಮಾಡದಿದ್ದರೂ ಮಾರಾಟ ಆಗಬೇಡ’ ಎಂದು ಹೇಳಿದ್ದಾರೆ. ನಿನ್ನಲ್ಲಿರುವ ಮೌಲ್ಯಗಳು, ಶಕ್ತಿಗಳನ್ನು ಮಾರಾಟ ಮಾಡಿಕೊಳ್ಳಬೇಡ ಎಂಬುದು ಅವರ ಮಾತಿನ ಆರ್ಥ.
ಜಾತಿ ಧರ್ಮಗಳ ನಡುವಿನ ಮೇಲು ಕೀಳು ಭಾವನೆ ಅಳಿಸಿ. ನಾವು ಭಾರತೀಯರು ಎಂಬ ಸತ್ಯವನ್ನು ಸಾರಿ, ಸಂವಿಧಾನವನ್ನು ಅರ್ಪಿಸಿಕೊಂಡಿದ್ದೇವೆ.
ಇಂದು ಸ್ವಾತಂತ್ರ್ಯ ಸಂಗ್ರಾಮದ ಧೀಮಂತ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರನ್ನು ಗಲ್ಲಿಗೇರಿಸಿದ ದಿನವೂ ಆಗಿದೆ. ಸಂವಿಧಾನ ರಾಮ ರಾಜ್ಯದ ಬುನಾದಿ. ಈ ಸಂವಿಧಾನ ಜಾಗೃತಿ ಜಾಥಾ ಪ್ರತಿ ಹಳ್ಳಿಗೂ ತೆರಳಲಿದೆ. ಎಲ್ಲಾ ಪಂಚಾಯ್ತಿಗಳಿಗೆ ಈ ಜಾಥಾ ಹೋದಾಗ ನೀವು ಅದನ್ನು ಬರಮಾಡಿಕೊಂಡು ಸಂವಿಧಾನದ ಪ್ರಾಮುಖ್ಯತೆ ಹಾಗೂ ಜನರ ಬದುಕಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಭದ್ರತೆ ಬಗ್ಗೆ ಅರಿವು ಮೂಡಿಸಬೇಕು.
ದೇವರು ನಮಗೆ ವರವನ್ನೂ ನೀಡುವುದಿಲ್ಲ, ಶಾಪವನ್ನು ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು.
ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ 5-6 ಸಾವಿರ ರೂ. ಉಳಿತಾಯವಾಗುತ್ತದೆ.
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ದೇವರು ನಮಗೆ ಎರಡು ಆಯ್ಕೆ ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ನಾವು ನಮ್ಮ ಕೈಲಾದಷ್ಟು ಬೇರೆಯವರಿಗೆ ಸಹಾಯ ಮಾಡಬೇಕು.
ಈ ಭಾಗದವರಿಗೆ ಕುಡಿಯಲು ಕಾವೇರಿ ನೀರು, ಮೆಟ್ರೋ ಸಂಪರ್ಕ:
ಈ ತಾಲೂಕಿನ ಅಭಿವೃದ್ಧಿಗೆ ನಾನು, ಸಂಸದ ಸುರೇಶ್ ಹಾಗೂ ಶಾಸಕ ಶಿವಣ್ಣನವರು ಬದ್ಧರಾಗಿದ್ದೇವೆ.
ಬೆಂಗಳೂರಿನ ಅನೇಕ ಭಾಗಗಳಲ್ಲಿ ಕುಡಿಯಲು ಕಾವೇರಿ ನೀರು ಪೂರೈಸಲು ಸಂಸದರಾದ ಸುರೇಶ್ ಹಾಗೂ ಇತರೆ ಶಾಸಕರು ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಈ ಭಾಗಕ್ಕೆ ಕುಡಿಯಲು ಕಾವೇರಿ ನೀರು ಪೂರೈಸಲು ಯೋಜನೆ ರೂಪಿಸಲಾಗುತ್ತಿದೆ. ಹಿಂದೆ ಈ ಯೋಜನೆಗೆ ಬಿಜೆಪಿ ಸರ್ಕಾರ ತಡೆ ನೀಡಿತ್ತು. ನಾವು ಇದನ್ನು ಮತ್ತೆ ಆರಂಭಿಸಿದ್ದೇವೆ. ನೀವು ನನಗೆ, ಸುರೇಶ್ ಹಾಗೂ ಶಿವಣ್ಣ ಅವರಿಗೆ ಶಕ್ತಿ ತುಂಬಬೇಕು. ಎಲ್ಲರೂ ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ಮಾಡಬೇಕು.
ಆನೇಕಲ್ ತಾಲ್ಲೂಕು ಬೆಂಗಳೂರು ನಗರದ ಒಳಗೆ ಸೇರಿಕೊಂಡಿದೆ. ಈ ಭಾಗಕ್ಕೆ ಮೆಟ್ರೋ ತರಲು ಡಿಪಿಆರ್ ತಯಾರಾಗುತ್ತಿದೆ. ಬೆಂಗಳೂರು ನಗರ ಬೆಳೆಯುತ್ತಿದ್ದು, ಈ ಭಾಗಗಳಿಗೆ ಯೋಜಿತ ರೂಪದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಮಾಡಲಾಗುವುದು.
ಮೇಕೆದಾಟು ಯೋಜನೆ ಜಾರಿಗೆ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ:
ಕಾರ್ಯಕ್ರಮದ ನಂತರ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಮೇಕೆದಾಟು ಯೋಜನೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಯೋಜನೆ ವಿಚಾರವಾಗಿ ಚರ್ಚಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಫೆ.1ಕ್ಕೆ ಪೂರ್ವಭಾವಿ ಸಭೆ ನಡೆಸುತ್ತಿದೆ. ಈ ಯೋಜನೆಯಲ್ಲಿ ಮುಳುಗಡೆಯಾಗಲಿರುವ ಅರಣ್ಯ ಪ್ರದೇಶಕ್ಕೆ ಬದಲಿಯಾಗಿ ಕಂದಾಯ ಭೂಮಿಯನ್ನೇ ನೀಡಲಾಗುವುದು. ಇದಕ್ಕಾಗಿ ಭೂಮಿಗಳನ್ನು ಗುರುತಿಸಲಾಗುತ್ತಿದೆ. ನಮ್ಮ ನೀರು ನಮ್ಮ ಹಕ್ಕು. ಇದಕ್ಕೆ ಪೂರಕವಾಗಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಈ ಯೋಜನೆಯಿಂದ ಬೆಂಗಳೂರು ನಗರ ಹಾಗೂ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ನೆರವಾಗಲಿದೆ” ಎಂದು ತಿಳಿಸಿದರು.
ಸವದಿ ಪ್ರಜ್ಞಾವಂತರು, ಕಾಂಗ್ರೆಸ್ ಬಿಡುವುದಿಲ್ಲ:
ಶೆಟ್ಟರ್ ಬಿಜೆಪಿ ಸೇರಿದ್ದು ಸವದಿ ಹಾಗೂ ಇತರ ನಾಯಕರು ಬಿಜೆಪಿ ಸೇರುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ನಮ್ಮ ಪಕ್ಷಕ್ಕೆ ಬಂದವರನ್ನು ಸೇರಿಸಿಕೊಂಡಿದ್ದೇವೆ. ಸವದಿ ಪ್ರಜ್ಞಾವಂತರು. ಅವರು ಸೇರಿದಂತೆ ಬೇರೆ ಯಾರೂ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ಧರಿರುವವರ ಪಟ್ಟಿ ಇದೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ