ಸಂವಿಧಾನ ಬದಲಾವಣೆ ಬಿಜೆಪಿ ಡಿಎನ್ಎಯಲ್ಲೇ ಇದೆ: ರಣದೀಪ್ ಸಿಂಗ್ ಸುರ್ಜೇವಾಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂವಿಧಾನ ಬದಲಾವಣೆ ಬಿಜೆಪಿ ಡಿಎನ್ಎಯಲ್ಲೇ ಇದೆ. ಇದರ ಜೊತೆಗೆ ದಲಿತ, ರೈತ, ಮಹಿಳಾ ವಿರೋಧಿ ಡಿ ಎನ್ ಎ ಕೂಡ ಹೊಂದಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಇವರು ಹೇಳುವುದಾದರೆ ಇವರ ಪಕ್ಷದ ಅನಂತಕುಮಾರ್ ಹೆಗಡೆ ಹೇಳಿದಾಗ ಏಕೆ ಅವರನ್ನು ವಜಾ ಮಾಡಲಿಲ್ಲ?. ಅರುಣ್ ಗೋಯಲ್ ಹೇಳಿದಾಗ ಯಾಕೆ ಅವರ ಮೇಲೆ ಕ್ರಮ ಜರುಗಿಸಲಿಲ್ಲ? ಈಗ ಚುನಾವಣೆಗೆ ಸ್ಪರ್ಧೆ ಮಾಡಿರುವ ಲುಲ್ಲು ಸಿಂಗ್ ಯಾದವ್, ಜ್ಯೋತಿ ಮಿರ್ದಾ ಕೂಡ ಸಂವಿಧಾನ ಬದಲಾವಣೆ ಹೇಳಿಕೆ ಕೊಟ್ಟಿದ್ದಾರೆ. ಅವರನ್ನು ಚುನಾವಣೆಯಿಂದ ವಿತ್ ಡ್ರಾ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ರಾಜ್ಯದ ಬಡವರು, ಮಹಿಳೆಯರಿಗೆ ಮಾಡುತ್ತಿರುವ ಅನ್ಯಾಯ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರುಗಳ ರಕ್ತ ಇರೋವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದರು.
ನೂರಾರು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಪ್ರಜ್ವಲ್ ರೇವಣ್ಣ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಬಿಜೆಪಿ ನಾಯಕರು ಎಲ್ಲೂ ಧ್ವನಿ ಎತ್ತಿಲ್ಲ. ಅಲ್ಲದೆ, ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ಆ ಮೂಲಕ ಅವನ ಬೆಂಬಲಕ್ಕೆ ಕರ್ನಾಟಕ ರಾಜ್ಯದ ಬಿಜೆಪಿ ಘಟಕ ನಿಂತಿರುವುದು ಬಹಿರಂಗವಾಗಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು .
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ