GIT add 2024-1
Kore@40
Beereshwara 33

*ಈ ಚುನಾವಣೆ ಕಾಂಗ್ರೆಸ್ ಭರವಸೆ ಮತ್ತು ಬಿಜೆಪಿ ಬುರುಡೆ ನಡುವಣ ಹೋರಾಟ: ಡಿಸಿಎಂ ಡಿ.ಕೆ. ಶಿವಕುಮಾರ್*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: “ನಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ. ಬಿಜೆಪಿ 10 ವರ್ಷಗಳಿಂದ ಕೇವಲ ಬುರುಡೆ ಬಿಟ್ಟಿದೆ. ಹೀಗಾಗಿ ಈ ಚುನಾವಣೆ ಕಾಂಗ್ರೆಸ್ ಭರವಸೆ ಮತ್ತು ಬಿಜೆಪಿ ಬುರುಡೆ ನಡುವಣ ಹೋರಾಟ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿಯಲ್ಲಿ ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿವಕುಮಾರ್ ಅವರು ಹೇಳಿದ್ದಿಷ್ಟು;

ಕಳೆದ 10 ವರ್ಷಗಳಲ್ಲಿ ಬಿಜೆಪಿ ತಾನು ಕೊಟ್ಟ ಯಾವ ಮಾತನ್ನು ಈಡೇರಿಸಿದೆ? ಬಿಜೆಪಿ ಭಾವನೆ ಮೇಲೆ ಮಾತನಾಡುತ್ತಿದ್ದಾರೆ ಹೊರತು ಜನರ ಬದುಕಿನ ಬಗ್ಗೆ ಮಾತಾಡುತ್ತಿಲ್ಲ. ನಮ್ಮ ಗ್ಯಾರಂಟಿಗಳನ್ನು ಟೀಕೆ ಮಾಡಿದವರು ಇಂದು ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಬಿಜೆಪಿ ಹೆಸರೂ ಹಾಕದೇ, ಕೇವಲ ಮೋದಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಅಲೆ ಇದೆ. ನಮ್ಮದು 1 ಮತಕ್ಕೆ 10 ಗ್ಯಾರಂಟಿ. ಈ ದೇಶದ ಜನರ ಬದುಕಿನಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಇಂತಹ ಐತಿಹಾಸಿಕ ತೀರ್ಮಾನ ಮಾಡಿದೆ. ನಾನು ಸಿದ್ದರಾಮಯ್ಯ ಅವರು ಗ್ಯಾರಂಟಿಗೆ ಸಹಿ ಹಾಕಿದಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರು ಕೂಡ ಗ್ಯಾರಂಟಿಗೆ ಸಹಿ ಹಾಕಿದ್ದಾರೆ. ಈ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಲಾಗಿದೆ. ನಮ್ಮ ಸರ್ಕಾರ ಕೇಂದ್ರದಲ್ಲೂ ಅಧಿಕಾರಕ್ಕೆ ಬರಲಿದ್ದು, ಈ ಗ್ಯಾರಂಟಿಗಳನ್ನು ಜಾರಿ ಮಾಡಲಿದೆ.

ಗ್ಯಾರಂಟಿ ನಿಲ್ಲಿಸುವುದು ಬಿಜೆಪಿ ಭ್ರಮೆ:

ಯಡಿಯೂರಪ್ಪನವರು ಚುನಾವಣೆ ಬಳಿಕ ಗ್ಯಾರಂಟಿ ಸ್ಥಗಿತ ಎಂದು ಹೇಳಿದ್ದಾರೆ, ಆರ್ ಅಶೋಕ್ ಅವರು ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಇಲ್ಲ ಎಂದು ಹೇಳಿದ್ದಾರೆ. ಇನ್ನು ವಿಜಯೇಂದ್ರ ಅವರು ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಸ್ಥಗಿತ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ಭ್ರಮೆಯಲ್ಲಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನ ಸಂತೋಷವಾಗಿದ್ದು, ಇದನ್ನು ನಿಲ್ಲಿಸಲು ಬಿಜೆಪಿ ನಾಯಕರು ಬಯಸುತ್ತಿದ್ದಾರೆ. ನಮ್ಮ ಯೋಜನೆಗಳಿಗೆ ಬಜೆಟ್ ನಲ್ಲಿ 58 ಸಾವಿರ ಕೋಟಿ ಅನುದಾನ ಮಿಸಲಿಡಲಾಗಿದೆ. ರಾಜ್ಯದ 7 ಕೋಟಿ ಜನರ ಪೈಕಿ 5.60 ಕೋಟಿ ಜನರಿಗೆ ನಮ್ಮ ಯೋಜನೆ ತಲುಪುತ್ತಿವೆ. ಇದು ಬದಲಾವಣೆಯಲ್ಲವೇ?

ಬಿಜೆಪಿ ನಾಯಕರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅನುದಾನದ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ಬೆಳಗಾವಿ ಅಧಿವೇಶನದಲ್ಲಿ SCP-TSP ಕಾಯ್ದೆ ಜಾರಿಗೆ ತಂದು ಜನಸಂಖ್ಯೆ ಅನುಗುಣವಾಗಿ ಈ ಸಮುದಾಯಗಳಿಗೆ ಬಜೆಟ್ ನಲ್ಲಿ ಹಣ ಮೀಸಲಿಡಲು ಆರಂಭಿಸಿದ್ದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ಈ ವರ್ಷ 39 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಬಡವರು, ಪರಿಶಿಷ್ಟರ ಕಲ್ಯಾಣಕ್ಕೆ ಬಿಜೆಪಿಯ ಬುರುಡೆ ಸರ್ಕಾರ ಒಂದೇ ಒಂದು ತೀರ್ಮಾನ ನೀಡಲಿಲ್ಲ.

ನೀರಾವರಿ ವಿಚಾರದಲ್ಲಿ ಬಿಜೆಪಿ ಬುರುಡೆ:

ಈ ಭಾಗದ ನೀರಾವರಿ ವಿಚಾರವನ್ನು ತೆಗೆದುಕೊಳ್ಳೋಣ. ಈಗಾಗಲೇ 9 ಸಾವಿರ ಕೋಟಿ ಕಾಮಗಾರಿ ಕೈಗೊಂಡಿದ್ದೇವೆ. ಕೃಷ್ಣ ಮೇಲ್ದಂಡೆ ಯೋಜನೆ, ಭದ್ರ ಮೇಲ್ದಂಡೆ ಯೋಜನೆ ಕೈಗೆತ್ತಿಕೊಂಡಿದ್ದು, ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಇಲಾಖೆ ಅನುಮತಿ ನೀಡದಿದ್ದರೂ ನಾವು ಟೆಂಡರ್ ಕರೆದಿದ್ದೇವೆ. ಬಿಜೆಪಿ ನಾಯಕರಾದ ಶೆಟ್ಟರ್, ಬೊಮ್ಮಾಯಿ ಹಾಗೂ ಜೋಷಿ ಅವರು ಸಂಭ್ರಮಾಚರಣೆ ಮಾಡಿದರು. ಅವರದ್ದು ಕೇವಲ ಬುರುಡೆ ಹಾಗೂ ಖಾಲಿ ಮಾತು. ನಾವು ನುಡಿದಂತೆ ನಡೆದರೆ, ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ.

Emergency Service

ದೇಶದೆಲ್ಲೆಡೆ ರೈತರು ಬೀದಿಗಿಳಿದು ಹೋರಾಟ ಮಾಡಿ 800 ಮಂದಿ ಸತ್ತರು. ಅವರ ಹೋರಾಟದ ಪರಿಣಾಮ ಕೃಷಿ ಕರಾಳ ಕಾನೂನನ್ನು ಹಿಂಪಡೆದರು. ಆದರೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಅದನ್ನು ಹಿಂಪಡೆಯಲಿಲ್ಲ. ರೈತರ ಪಕ್ಷ ಎಂದು ಹೇಳುತ್ತಿದ್ದ ಜೆಡಿಎಸ್ ಈ ಕಾಯ್ದೆ ಜಾರಿಗೆ ಸಹಕಾರ ನೀಡಿತು. ಈಗ ಅವರಿಬ್ಬರು ಒಂದೇ ತಂಡವಾಗಿದ್ದಾರೆ.

ದೇವಾಲಯಗಳ ಅಭಿವೃದ್ಧಿ ಕಾಯ್ದೆಗೆ ಬಿಜೆಪಿ ವಿರೋಧ:
ಇನ್ನು ಬಿಜೆಪಿಯವರು ಧರ್ಮದ ಬಗ್ಗೆ ಮಾತನಾಡುತ್ತಾರೆ. ನಮ್ಮ ಸರ್ಕಾರ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಎ ದರ್ಜೆ ದೇವಾಲಯಗಳ ಆದಾಯದಲ್ಲಿ 10% ಆದಾಯವನ್ನು ಪಡೆದು ಸಿ ದರ್ಜೆಯ ದೇವಾಲಯಗಳ ಅಭಿವೃದ್ಧಿಗೆ ಬಳಸುವ ಐತಿಹಾಸಿಕ ಕಾನೂನು ತಂದಿತ್ತು. ಇದರಿಂದ ನಮ್ಮ ಗ್ರಾಮಗಳಲ್ಲಿರುವ ಮಾರಮ್ಮ, ಕೆಂಕೇರಮ್ಮ, ಕಬ್ಬಾಳಮ್ಮ ಸೇರಿದಂತೆ ಸ್ಥಳೀಯ ದೇವಾಲಯಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು. ಅಲ್ಲದೆ ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ, ವಿಮೆ, ಪಿಂಚಣಿ ಭದ್ರತೆಗೆ ನೀಡಲು ಮುಂದಾದರೆ ಈ ಬಿಜೆಪಿಯವರು ರಾಜ್ಯಪಾಲರಿಗೆ ಹೇಳಿ ಈ ಕಾನೂನಿಗೆ ತಡೆ ಹಿಡಿಯುತ್ತಾರೆ.

ಬಂಗಾರಪ್ಪನವರು ಆರಾಧನಾ ಯೋಜನೆ ಮಾಡಿ ಹಳ್ಳಿ ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದರು. ನಮ್ಮ ಈ ಕಾಯ್ದೆ ವಿರೋಧಿಸುವ ಬಿಜೆಪಿ ಇನ್ಯಾವ ಧರ್ಮ ರಕ್ಷಣೆ ಮಾಡುತ್ತದೆ? ನಮಗೆ ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. “ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ” ಎಂಬ ಶ್ಲೋಕದ ಮೂಲಕ ನಾವು ಅರ್ಚಕನ ಪ್ರಭಾವದಿಂದ ಶಿಲೆಯಲ್ಲೂ ದೇವರನ್ನು ಕಾಣುತ್ತೇವೆ. ಅಂತಹ ಅರ್ಚಕರಿಗೆ ನೆರವಾಗಲು ಬಿಜೆಪಿ ಅಡ್ಡಿ ಮಾಡಿದೆ.

ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ:

ಬಿಜೆಪಿ ಏನು ಮಾಡಿದೆ ಅಂತಾ ಮತ ಕೇಳುತ್ತಿದ್ದಾರೆ? ಅವರಿಗೆ ಮತ ಕೇಳುವ ನೈತಿಕತೆ ಇಲ್ಲ. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ನಮ್ಮ ತೆರಿಗೆ ನಮ್ಮ ಹಕ್ಕು ಜಾರಿಗೆ ತರುತ್ತೇವೆ. ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತಂದೇ ತರುತ್ತೇವೆ. ಮಹಾದಾಯಿ, ಭದ್ರಾ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ. ಅವರು ಈ ಯೋಜನೆಗೆ 5300 ಕೋಟಿ ಬಜೆಟ್ ನಲ್ಲಿ ಅನುದಾನ ಘೋಷಿಸಿ ನಯಾ ಪೈಸೆ ನೀಡಲಿಲ್ಲ. ಆದರೂ ಪ್ರಧಾನಿಗಳು ದಾವಣಗೆರೆಯಲ್ಲಿ ಬಂದು ಯಾಕೆ ಮತ ಕೇಳಿದರು?

ಪ್ರಧಾನಮಂತ್ರಿಗಳು ಮಾಂಗಲ್ಯದ ಬಗ್ಗೆ ಮಾತನಾಡುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಮಾಂಗ್ಯಲ್ಯ ಮಾಡಿಸುವುದು ಚಿನ್ನದಲ್ಲಿ. ಮನಮೋಹನ್ ಸಿಂಗ್ ಅವರು ಅಧಿಕಾರ ಬಿಡುವಾಗ 24 ಸಾವಿರ ಇದ್ದ 10 ಗ್ರಾಂ ಚಿನ್ನದ ಬೆಲೆ ಈಗ 74 ಸಾವಿರ ಆಗಿದೆ. ಇನ್ನು ಮಾಂಗಲ್ಯದ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಯವರಿಗೇನಿದೆ? ನಾವು ನಮ್ಮ ಸಂಸ್ಕೃತಿ ರಕ್ಷಣೆ ಮಾಡುತ್ತೇವೆ. ನಮ್ಮ ಹೆಣ್ಣುಮಕ್ಕಳ ಗೌರವ, ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ರಕ್ಷಣೆ ಮಾಡುತ್ತೇವೆ. ಅವರ ಮೇಲಿನ ಶೋಷಣೆ ತಡೆಯುತ್ತೇವೆ. ಎಲ್ಲಾ ಧರ್ಮವನ್ನು ಸಮಾನವಾಗಿ ನೋಡುತ್ತೇವೆ.

ದೇಶದಲ್ಲಿ ಕರ್ನಾಟಕ ಸರ್ಕಾರ ಮಾದರಿ ಆಡಳಿತ ನಡೆಸುತ್ತಿದೆ. ನಾವು ಎಲ್ಲರ ಹೊಟ್ಟೆ ತುಂಬಿಸಿ ಜನರ ಬದುಕು ರಕ್ಷಣೆ ಮಾಡಿದ್ದೇವೆ. ನಮ್ಮ ಗ್ಯಾರಂಟಿ ನೋಡಿ ಮೋದಿ ಗ್ಯಾರಂಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡುತ್ತೇವೆ.

ಕೋವಿಡ್ ಸಮಯದಲ್ಲಿ ಈ ಭಾಗದ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಪಾರ್ಥೀವ ಶರೀರವನ್ನು ಇಲ್ಲಿಗೆ ತಂದು ಅಂತ್ಯಸಂಸ್ಕಾರ ಮಾಡಲಿಲ್ಲ. ಜೆಸಿಬಿಯಲ್ಲಿ ಅವರ ಮೃತದೇಹ ತಳ್ಳಿ ಅಪಮಾನ ಮಾಡಿದರು. ಈ ಸರ್ಕಾರದಿಂದ ಎಲ್ಲಾ ವರ್ಗದ ಜನರಿಗೆ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಜನ ಕ್ಷಮಿಸಬಾರದು.

ಬೆಳಗಾವಿ ನಮ್ಮ ರಾಜ್ಯದ ಪ್ರಮುಖ ಭಾಗ. ಇಲ್ಲಿ ಸುವರ್ಣ ಸೌಧ ಸ್ಥಾಪಿಸಿ ಇಲ್ಲಿ ಅನೇಕ ತೀರ್ಮಾನ ಮಾದಿದ್ದೇವೆ. ನಾವು ಪ್ರಜಾಧ್ವನಿ ಯಾತ್ರೆಯನ್ನು ಇದೇ ಜಾಗದಿಂದ ಆರಂಭಿಸಿದ್ದೆವು. ಹೀಗಾಗಿ ನಾವು ಇಲ್ಲೇ ಈ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ. ನಾವು ಇದೇ ನೆಲದಲ್ಲಿ ಗೃಹಜ್ಯೋತಿ ಯೋಜನೆ ಪ್ರಕಟಿಸಿ ಗ್ಯಾರಂಟಿ ಯೋಜನೆ ಆರಂಭಿಸಿದೆವು.

ಈ ಬಾರಿ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 10 ಕ್ಷೇತ್ರ ಗೆಲ್ಲಲಿದ್ದು, 12 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ. ಅಂತಹ ವಾತಾವರಣ ಇದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ ಎಂದರು.

Laxmi Tai add
Bottom Add3
Bottom Ad 2