Uncategorized

ಜೈನ ಮುನಿಗಾಗಿ ಮುಂದುವರಿದ ಶೋಧ; ಆರೋಪಿಗಳ ಬಂಧನದ ನಂತರವೂ ನಿಗೂಢತೆ ಬಿಟ್ಟುಕೊಡದ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆಗೈದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ನಿನ್ನೆ(ಶುಕ್ರವಾರ) ಶ್ರೀಗಳು ಆಶ್ರಮದಿಂದ ಏಕಾಏಕಿ ನಾಪತ್ತೆಯಾಗಿದ್ದರು. ಅವರಿಗಾಗಿ ತೀವ್ರ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಆಚಾರ್ಯ ಕಾಮಕುಮಾರ ನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ಅವರ ದೂರಿನನ್ವಯ ಪೊಲೀಸರು ಅನುಮಾನದ ಆಧಾರದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶವ ಕತ್ತರಿಸಿ ಕಟಕಬಾವಿಯ ಗದ್ದೆಯೊಂದರಲ್ಲಿರುವ ಕೊಳವೆ ಬಾವಿಯಲ್ಲಿ ಹಾಕಿರುವುದಾಗಿ ಹೇಳಿದ್ದರು. ಆದರೆ ಪೊಲೀಸರಿಗೆ ಇನ್ನೂ ಶವ ಸಿಕ್ಕಿಲ್ಲ.

ಆರೋಪಿಗಳು ಹೇಳಿದ ಜಾಗದಲ್ಲಿ ಭೂಮಿ ಅಗೆಯುವ ಕಾರ್ಯ ಜಾರಿಯಿದ್ದು ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ಹಣದ ವ್ಯವಹಾರ?: ಮುನಿಗಳ ಹತ್ಯೆಗೆ ಹಣದ ವ್ಯವಹಾರ ಕಾರಣ ಎನ್ನಲಾಗಿದ್ದು ಇತ್ತೀಚೆಗೆ ಆರೋಪಿಗಳ ಪೈಕಿ ಒಬ್ಬನಿಗೆ ಅವರು 5 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ. ಕೆಲ ದಿನಗಳ ನಂತರ ಈ ಹಣ ಮರಳಿ ಕೇಳಿದ್ದಕ್ಕೆ ಆಶ್ರಮದಲ್ಲೇ ಅವರ ಕೊಲೆ ಮಾಡಿದ್ದಾಗಿ ಆರೋಪಿ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಮುನಿಶ್ರೀ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದ್ದು ಆಶ್ರಮದ ಭಕ್ತರಲ್ಲಿ ಆತಂಕ ಮನೆ ಮಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button