ನಿರಂತರ ಕಾರ್ಯಕ್ರಮ: ಶನಿವಾರ 2 ಕಡೆ 10 ಸಾವಿರ ಭಕ್ತರಿಂದ ಹನುಮಾನ ಚಾಲಿಸಾ ಪಠಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಯೋಧ್ಯೆಯಲ್ಲಿ ಜನೆವರಿ 22ರಂದು ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಳೆದ ಸುಮಾರು 15 ದಿನಗಳಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.
ಅಕ್ಷತಾ ಅಭಿಯಾನದ ಅಂಗವಾಗಿ ಮನೆ ಮನೆಗೆ ಆಮಂತ್ರಣ ನೀಡುವ ಜೊತೆಗೆ ವಿವಿಧ ದೇವಾಲಯಗಳಲ್ಲಿ ಮತ್ತು ವಿಶ್ವಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಡಿಸೆಂಬರ್ 5ರಿಂದ ಪ್ರತಿದಿನ ಸಂಜೆ ಹನುಮಾನ ಚಾಲಿಸಾ ಪಠಣ ನಡೆಯುತ್ತಿದೆ.
ಮಂಗಳವಾರದಿಂದ ಶನಿವಾರದವರೆಗೆ (ಡಿ.16ರಿಂದ 20ರ ವರೆಗೆ) ಗೂಡ್ಸ್ ಶೆಡ್ ರಸ್ತೆಯ ಸಮರಸತಾ ಭವನದಲ್ಲಿರುವ ವಿಶ್ವಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಅಹೋರಾತ್ರಿ ಅಖಂಡ ಹನುಮಾನ ಚಾಲಿಸಾ ಪಠಣ ನಡೆಯಲಿದೆ.
ಶನಿವಾರ ಸಂಜೆ 5.30ರಿಂದ ಇಲ್ಲಿಯ ಸರದಾರ್ ಹೈಸ್ಕೂಲ್ ಮೈದಾನ ಮತ್ತು ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ 10 ಸಾವಿರ ಭಕ್ತರಿಂದ 11 ಬಾರಿ ಹನುಮಾನ ಚಾಲಿಸಾ ಪಠಣದ ಮೂಲಕ ಮಹಾಆರತಿ ಸಮರ್ಪಣೆ ನಡೆಯಲಿದೆ. ಮೈದಾನದ ಮಧ್ಯದಲ್ಲಿ ಶ್ರೀರಾಮ, ಹನುಮಂತ ಮತ್ತು ಭಾರತ ಮಾತೆಯ ಫೋಟೋ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಭಕ್ತರು ಎಲ್ಲ ದಿಕ್ಕುಗಳಿಂದ ಪುಷ್ಪಾರ್ಚನೆ ಮಾಡಲು ಅವಕಾಶವಿರಲಿದೆ.
ಜ.22ರಂದು ಸಂಜೆ ಬಿ.ಕೆ.ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ 5 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಒಂದು ಲಕ್ಷ ದೀಪ ಪ್ರಜ್ವಲನ ನಡೆಯಲಿದೆ. ಇದರಲ್ಲಿ ವಿದ್ಯಾರ್ಥಿಗಳು, ಉದ್ಯಮಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ಉತ್ತರ ಕರ್ನಾಟಕ ಕೋಶಾಧ್ಯಕ್ಷ ಕೃಷ್ಣ ಭಟ್ ತಿಳಿಸಿದ್ದಾರೆ.
ಅಂದು ಮಧ್ಯಾಹ್ನ 12.39ರಿಂದ 12.41ರ ವರೆಗೆ ಅಯೋಧ್ಯೆಯ ನೂತನ ಶ್ರೀರಾಮ ಮಂದಿರದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆಯಲ್ಲಿ ಕಪಿಲೇಶ್ವರ ದೇವಸ್ಥಾನ, ರಾಮತೀರ್ಥ ನಗರದ ದೇವಸ್ಥಾನ, ಮಾರುತಿ ಮಂದಿರ, ಮಾಳಮಾರುತಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಎಲ್ಇಡಿ ಪರದೇಯ ಮೂಲಕ ನೇರಪ್ರಸಾರ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮನೆಗಳ ಮುಂದೆ ಸಹ ಅಂದು ಸಂಜೆ ದೀಪ ಬೆಳಗಿಸುವಂತೆ ವಿಶ್ವಹಿಂದೂ ಪರಿಷತ್ ಮನವಿ ಮಾಡಿದೆ.
ಅಪರೂಪದ ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ತನ್ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು ಎಂದು ವಿಶ್ವಹಿಂದೂ ಪರಿಷತ್ ಪ್ರಮುಖ ಪರಮೇಶ್ವರ ಹೆಗಡೆ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ