Belagavi NewsBelgaum NewsElection NewsKannada NewsKarnataka NewsPolitics

ಮನೆ ಮಗನಾಗಿ ಮೃಣಾಲ್‌ ಕೆಲಸ‌ ಮಾಡಲಿದ್ದಾನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ; ಮೆಳವಂಕಿ, ಕೌಜಲಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ 

*

* ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ* : 25 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕೀಯ ಜೀವನ ಆರಂಭಿಸಿದ ನಾನು, ಇಂದು ಏಳು ಕೋಟಿ ಜನಸಂಖ್ಯೆಯ ಕರ್ನಾಟಕದ ಏಕೈಕ ಮಹಿಳಾ ಮಂತ್ರಿಯಾಗಿರುವೆ. ಸಾಮಾನ್ಯ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ತೋರುವ ಮಹತ್ವ ಇದಾಗಿದೆ. ಸ್ಥಳೀಯ ಅಭ್ಯರ್ಥಿ, ನಿಮ್ಮ ಮನೆ ಮಗ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. 

ಅರಭಾವಿ‌ ವಿಧಾನಸಭಾ ಕ್ಷೇತ್ರದ ಮೆಳವಂಕಿ ಹಾಗೂ ಕೌಜಲಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಕಾರ್ಯಕರ್ತರು ಈ ಬಾರಿ ಮೈಮರೆಯದೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

 *ಬಿಜೆಪಿ ಕೊಡುಗೆ ಶೂನ್ಯ* 

ಕಳೆದ 2​0 ವರ್ಷಗಳಿಂದ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿದ್ದರೂ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡದೆ, ಜನರಿಂದ ದೂರ ಉಳಿದರು. ಮೋದಿ ಹೆಸರಿನಲ್ಲಿ ಎರಡು ಬಾರಿ ಗೆದ್ದಿದ್ದೆ ಅವರ ಸಾಧನೆ ಎಂದು ಸಚಿವರು ಟೀಕಿಸಿದರು. ಈಗಿನ ಬಿಜೆಪಿ ಅಭ್ಯರ್ಥಿ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ​ ಹಾಗಾಗಿ ಸ್ಥಳೀಯ ಅಭ್ಯರ್ಥಿಗೆ ಮತ ನೀಡಿ ಎಂದರು. 

ಸ್ಥಳೀಯ ಸಮಸ್ಯೆಗಳನ್ನು ಸರಿಯಾಗಿ ಅರಿತಿರುವ ಮೃಣಾಲ್‌ ಹೆಬ್ಬಾಳ್ಕರ್, ನಿಮ್ಮ ಧ್ವನಿಯಾಗಿ ದೆಹಲಿಯಲ್ಲಿ ಕೆಲಸ ಮಾಡಲಿದ್ದಾನೆ. ಇ​ನ್ನೂ ಯುವಕನಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಂತೆ ಬೆಳಗಾವಿ ಕ್ಷೇತ್ರಕ್ಕೆ ಮೃಣಾಲ್‌ ಹೆಬ್ಬಾಳ್ಕರ್, ಚಿಕ್ಕೋಡಿ ಕ್ಷೇತ್ರಕ್ಕೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸುವಂತಾಗಬೇಕು ಎಂದರು‌.

 *ಸ್ಥಳೀಯ ಸಮಸ್ಯೆಗಳ ಅರಿವಿದೆ*; *ಮೃಣಾಲ್‌*

ತಾಯಿ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಸ್ಪರ್ಧಿಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಮನವಿ ಮಾಡಿದರು. ಕಳೆದ 2​0 ವರ್ಷಗಳಿಂದ ಬಿಜೆಪಿ ಸಂಸದರಿದ್ದರೂ ಜಿಲ್ಲೆಯ ಎಷ್ಟೋ ಗ್ರಾಮಗಳಿಗೆ ಅವರು ಭೇಟಿಯನ್ನೇ ಕೊಟ್ಟಿರಲಿಲ್ಲ. ಒಂದೇ ಒಂದು ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಇದರಿಂದ ನಮ್ಮ ಜಿಲ್ಲೆಯ ಯುವಕರು ಬೆಂಗಳೂರು, ಪುಣೆ ಕಡೆಗೆ ವಲಸೆ‌ ಹೋಗುವಂತಾಗಿದೆ ಎಂದರು.

 *ತೆರೆದ ವಾಹನದಲ್ಲಿ ಮೆರವಣಿಗೆ* 

ಕೌಜಲಗಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರಿಗೆ ಸ್ಥಳೀಯ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು. ​ ಬಳಿಕ ತೆರೆದ ವಾಹನದಲ್ಲಿ ಸಚಿವರು, ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆದ ಸ್ಥಳದವರೆಗೂ ಮೆರವಣಿಗೆ ಮೂಲಕ ಕರೆ ತರಲಾಯಿತು. ಇದೇ ವೇಳೆ ಅನ್ಯ ಪಕ್ಷಗಳ ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.​ 

ಪ್ರಚಾರ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರಾದ ಮಹಾಂತೇಶ ಕಡಾಡಿ, ಲಗಮಣ್ಣ ಕಳಸಣ್ಣವರ, ಲಕಣ್ಣ ಸವಸುದ್ದಿ, ಲಕ್ಕಪ್ಪ ಕಲ್ಲಪ್ಪಗೌಡ, ಭರಮಣ್ಣ ಉಪ್ಪಾರ, ರಮೇಶ್ ಉಟಗಿ, ರಾಮಸಾಬ್ ಬೆಳಕೊಡ್, ಚಂದನ ವಕೀಲರು ಶಶಿಕಾಂತ್ ಕಲ್ಲೋಳಿ, ಶ್ರೀಕಾಂತ್ ಕರಿಯಪ್ಪನವರ, ಅನಿಲ್ ದಳವಾಯಿ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಅರಳಿ, ವಿ.ಪಿ. ನಾಯ್ಕ್, ವೆಂಕನಗೌಡ ಪಾಟೀಲ್, ಮಾಲಪ್ಪ ಬಿದರಿ, ಹಿಮಾಮ್, ರವಿ ಮೂಡ್ಲಗಿ, ಗುರುನಾಥ ಉಪ್ಪಾರ್, ಬೀರಪ್ಪ ಬಳದಾರ್, ಮೀರಾಸಾಬ್ ಅನ್ಸಾರಿ, ರಾಜು ಮುಲ್ತಾನಿ, ಸುಲ್ತಾನ್ ಮುಲ್ತಾನಿ, ಜಡಿಯಪ್ಪ ಮಾರಪ್ಪ, ಬಿ.ಎಂ.ನ್ಯಾಮಗೌಡರ್, ಅನಿಲ್ ಕುಮಾರ್ ದಳವಾಯಿ,  ಕಲ್ಲಪ್ಪಗೌಡ ಲಕ್ಕಾರ,  ಲಗಮಣ್ಣ ಕಳಸಣ್ಣನವರ್, ಪಿ.ವಿ. ಪಾವಟಿ, ಎ.ಬಿ. ಮಂಟೂರು, ಮೌಲಾ ಸಾಬ್ ತಹಶಿಲ್ದಾರ, ಮಂಜುನಾಥ ಮಠಗುಡ್, ಜಾಫರ್ ಜಾರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button