ಶಾಸಕ ಗಣೇಶ ಹುಕ್ಕೇರಿ ಮಾರ್ಗದರ್ಶನದಲ್ಲಿ 4 ಹೋಬಳಿಗಳಲ್ಲಿ ಸ್ಥಾಪನೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿ -ಸದಲಗಾ ಮತ ಕ್ಷೇತ್ರದಲ್ಲಿ ಹೋಬಳಿ ಮಟ್ಟದಲ್ಲಿ ಒಂದರಂತೆ ಒಟ್ಟು 4 ಸುಸಜ್ಜಿತವಾದ ಸರ್ಕಾರಿ ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ.
ಶಾಸಕ ಗಣೇಶ ಹುಕ್ಕೇರಿ ಅವರ ವಿನೂತನವಾದ ಯೋಜನೆ ಇದಾಗಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಇಂತಹ ಕೇರ್ ಸೆಂಟರ್ ಸ್ಥಾಪಿಸಿದ್ದಾರೆ. ಕರ್ನಾಟಕದಲ್ಲಿಯೇ ಶಾಸಕರೊಬ್ಬರ ಮುಂದಾಳತ್ವದಲ್ಲಿ ನಡೆಯುತ್ತಿರುವ ಕೋವಿಡ್ ಕೇರ್ ಸೆಂಟರ್ ಇದಾಗಿದೆ.
ಕೇಂದ್ರಕ್ಕೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಆರೈಕೆ ಮಾಡಲು ಕೇರ್ ಸೆಂಟರ್ ನಲ್ಲಿ ವೈದ್ಯರನ್ನು ನೇಮಕ ಮಾಡಲಾಗಿದೆ. ವ್ಯವಸ್ಥಿತವಾಗಿ ನೋಡಿಕೊಳ್ಳಲು ಒಬ್ಬ ನೋಡಲ್ ಅಧಿಕಾರಿಯನ್ನು ಹಾಗೂ ಸಿಬ್ಬಂದಿಯನ್ನು ಸಹ ನೇಮಕ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲಿರುವವರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಕೊರೋನಾ ತೀವ್ರ ಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ಪ್ರಕರಣಗಳು ಇನ್ನಷ್ಟು ಹೆಚ್ಚುವ ಅಪಾಯವಿರುವದರಿಂದ ಚಿಕ್ಕೋಡಿಯಲ್ಲಿ ಮುಂಜಾಗೃತ ಕ್ರಮವಾಗಿ ಈ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇದರಲ್ಲಿ ಸೋಂಕಿತರು ಮತ್ತು ಶಂಕಿತರಿಗೆ ತೀವ್ರಗತಿಯಲ್ಲಿ ಚಿಕಿತ್ಸೆ ದೊರೆಯುತ್ತದೆ.
ಮಳೆಗಾಲ ಪ್ರಾರಂಭವಾಗಿದ್ದರಿಂದ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೆಚ್ಚು ಹರಡುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಚಿಕ್ಕೋಡಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಂಡು ಬಂದಲ್ಲಿ ರೋಗಿಗಳಿಗೆ ತೊದರೆಯಾಗಬಾರದೆಂಬ ಉದ್ದೇಶದಿಂದ ಹಾಗೂ ತ್ವರೀತವಾಗಿ ಚಿಕಿತ್ಸೆ ಕೊಡಿಸುವ ದೃಷ್ಟಿಯಿಂದ ಎಲ್ಲ ಮೂಲಭೂತ ಸೌಕರ್ಯವನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಲು ಈ ಸೆಂಟರ್ ಗಳನ್ನು ಆರಂಭಿಸಲಾಗಿದೆ ಎಂದು ಗಣೇಶ ಹುಕ್ಕೇರಿ ತಿಳಿಸಿದ್ದಾರೆ.
ಚಿಕ್ಕೋಡಿ ತಾಲೂಕಿನಲ್ಲಿ ಈವರೆಗೂ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ. ಮುಂದಿನ ದಿನಗಳಲ್ಲಿ ಸಹ ಬಾರದಿರಲಿ ಎಂದು ಅವರು ಆಶಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ