Kannada NewsKarnataka NewsLatest

ಕೊರೋನಾ ಸಾವು: ಲೆಕ್ಕ ತಪ್ಪಿದ್ದೆಲ್ಲಿ? ; ಅಂಜಲಿ ನಿಂಬಾಳಕರ್ ಎದುರೇ ಸಾವು

ಜಿಲ್ಲೆಯಲ್ಲಿ ಮಂಗಳವಾರ 615 ಜನರಿಗೆ ಕೊರೋನಾ ಪಾಸಿಟಿವ್

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮಂಗಳವಾರ ಒಂದೇ ದಿನ ತಾಲ್ಲೂಕಿನ ವಿವಿಧ ಗ್ರಾಮಗಳ ಒಟ್ಟು ಮೂವರು ಕೋವಿಡ್ ಸೊಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ
ಸಾವನ್ನಪ್ಪಿದ್ದಾರೆ.
ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಲೋಂಡಾ ಗ್ರಾಮದ 45 ವರ್ಷ
ವಯಸ್ಸಿನ ಪುರುಷ, ಕರ್ಜಗಿ ಗ್ರಾಮದ 68 ವಯಸ್ಸಿನ ಮಹಿಳೆ ಮತ್ತು ತಾಲ್ಲೂಕಿನ ನಂದಗಡ
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅದೇ ಗ್ರಾಮದ 65 ವಯಸ್ಸಿನ ಪುರುಷ
ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಸೋಮವಾರ ಸಂಜೆ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದ ಲೋಂಡಾ ಗ್ರಾಮದ ವ್ಯಕ್ತಿ
ಉಸಿರಾಟದ ತೊಂದರೆಯಿಂದಾಗಿ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ. ಮಂಗಳವಾರ ಮುಂಜಾನೆ ದಾಖಲಾಗಿದ್ದ ಕರ್ಜಗಿ ಗ್ರಾಮದ ವೃದ್ಧೆ ತೀವ್ರ ಜ್ವರದಿಂದ ಬಳಲುತ್ತಿದ್ದು, ಮಧ್ಯಾಹ್ನದ
ವೇಳೆಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ನಂದಗಡದ ಆರೋಗ್ಯ ಕೇಂದ್ರಕ್ಕೆ ವ್ಹೀಲ್ ಚೇರ್ ನಲ್ಲಿ ಕುಳಿತು ಆಗಮಿಸಿದ್ದ ವೃದ್ಧ ಆಸ್ಪತ್ರೆಗೆ ದಾಖಲಾಗಿ ಹತ್ತೇ ನಿಮಿಷದಲ್ಲಿ ಸಾವನ್ನಪ್ಪಿದ್ದಾರೆ. ನಂದಗಡದ ಆರೋಗ್ಯ ಕೇಂದ್ರಕ್ಕೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಆಕಸ್ಮಿಕ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಎದುರಲ್ಲೇ ಈ ಘಟನೆ ನಡೆದಿದೆ.
ಮಂಗಳವಾರ ಮೃತಪಟ್ಟ ಮೂವರಲ್ಲೂ ಇತ್ತೀಚೆಗಷ್ಟೇ ಕೋವಿಡ್ ಪಾಸಿಟಿವ್ ವರದಿಯಾಗಿತ್ತು.
ಇವರ ಅಂತ್ಯವಿಧಿಯನ್ನು ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ ಎಂದು ತಾಲ್ಲೂಕು
ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ಹೇಳಿದ್ದಾರೆ

ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ಪ್ರಕಟಣೆಯಲ್ಲಿ ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಎಂದಿದೆ. ಖಾನಾಪುರ, ಗೋಕಾಕ ಹಾಗೂ ಬೆಳಗಾವಿಯಲ್ಲಿ ತಲಾ ಓರ್ವರು ಸಾವಿಗೀಡಾಗಿದ್ದಾರೆ ಎಂದು ಹೇಳಿದೆ.
ಹಾಗಾದರೆ ಖಾನಾಪುರದಲ್ಲಿ ಮೃತಪಟ್ಟ ಇತರ ಇಬ್ಬರು ಯಾವ ಜಿಲ್ಲೆಯ ಲೆಕ್ಕಕ್ಕೆ?
ಜಿಲ್ಲೆಯಲ್ಲಿ ಮಂಗಳವಾರ 615 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಬೆಳಗಾವಿಯಲ್ಲಿ 260 ಜನರಿಗೆ, ಅಥಣಿಯಲ್ಲಿ 25, ಬೈಲಹೊಂಗಲ 51, ಚಿಕ್ಕೋಡಿ 41, ಗೋಕಾಕ 65, ಹುಕ್ಕೇರಿ 28, ಖಾನಾಪುರ 34, ರಾಮದುರ್ಗ 19, ರಾಯಬಾಗ 26, ಸವದತ್ತಿ 55 ಹಾಗೂ ಇತರೆ 11 ಜನರಿಗೆ ಸೋಂಕು ಪತ್ತೆಯಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button