Latest

ಕೊರೊನಾ ಭೀತಿ; ತವರಿಂದ ಬಂದ ಪತ್ನಿಗೆ ಬಾಗಿಲು ತೆರೆಯದ ಪತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ವೇಳೆ ಊರಿಗೆ ಹೋಗಿದ್ದ ಪತ್ನಿ ಲಾಕ್ ಡೌನ್ ಸಡಿಲಿಕೆಯಾದ ಬಳಿಕ ತವರಿನಿಂದ ಬಂದಾಗ ಪತಿ ಮನೆ ಬಾಗಿಲು ತೆರೆಯದ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆ ಲಾಕ್‍ಡೌನ್ ಮುಂಚೆ ಚಂಡೀಗಢನಲ್ಲಿರುವ ತವರು ಮನೆಗೆ ಹೋಗಿದ್ದರು. ದಿಢೀರ್ ಅಂತಾ ಲಾಕ್‍ಡೌನ್ ಆಗಿದ್ದರಿಂದ ಚಂಡೀಗಢನಲ್ಲಿಯೇ ಉಳಿದುಕೊಂಡಿದ್ದರು. ಬೆಂಗಳೂರಿನಲ್ಲಿ ಪತಿ ಮತ್ತು 10 ವರ್ಷದ ಮಗ ಇದ್ದರು. ಅನ್‍ಲಾಕ್ ಬಳಿಕ ಸದ್ಯ ಮಹಿಳೆ ಚಂಡೀಗಢನಿಂದ ಬೆಂಗಳೂರಿಗೆ ಬಂದಿದ್ದಾರೆ. ಆದ್ರೆ ತನ್ನನ್ನು ನೋಡಿ ಪತಿ ಖುಷಿ ಪಡ್ತಾರೆ ಎಂದು ತಿಳಿದಿದ್ದ ಮಹಿಳೆಗೆ ಗಂಡ ಬಾಗಿಲು ತೆಗೆಯದೇ ಆಘಾತ ನೀಡಿದ್ದಾನೆ.

ಮೂರು ತಿಂಗಳು ನಂತ್ರ ಮಗನನ್ನು ನೋಡಲು ಬಂದ ಪತ್ನಿಯನ್ನ ಪತಿ ಮನೆಯ ಹೊರಗೆ ನಿಲ್ಲಿಸಿದ್ದಾನೆ. ಕೊನೆಗೆ ಮಹಿಳೆ ತಾನು 14 ದಿನ ಮನೆಯಲ್ಲಿ ನಿಮ್ಮಿಬ್ಬರಿಂದ ದೂರವಿದ್ದು ಕ್ವಾರಂಟೈನ್ ನಲ್ಲಿರುತ್ತೇನೆ. ಕೋವಿಡ್ ನೆಗೆಟಿವ್ ವರದಿ ಬಂದ ಬಳಿಕ ಹೊರಗೆ ಬರುತ್ತೇನೆ ಎಂದು ಕೇಳಿದ್ರೂ ಪತಿ ಬಾಗಿಲು ತೆಗೆದಿಲ್ಲ.

ಪತಿ ಬಾಗಿಲು ತೆಗೆಯದಿದ್ದಾಗ ಕೊನೆಗೆ ಮಹಿಳೆ ವರ್ತೂರು ಠಾಣೆಯ ಪೊಲೀಸರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಪೊಲೀಸರು ಫೋನ್ ಮಾಡಿದ್ರೆ ಪತಿ ರಿಸೀವ್ ಮಾಡಿಲ್ಲ. ಕೊನೆಗೆ ಪೊಲೀಸರು ಬರಬಹುದೆಂದು ತಿಳಿದು ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ಪೊಲೀಸರು ಮಹಿಳೆಯನ್ನು ಆಕೆಯ ಸಂಬಂಧಿಕರ ಮನೆಯಲ್ಲಿರಿಸುವ ವ್ಯವಸ್ಥೆ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button