
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಈ ನಡುವೆ ಕೊರೊನಾ ವಾರಿಯಸ್ ಗಳಾದ ಗುತ್ತಿಗೆ ಆಧಾರಿತ ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆಗಿಳಿದಿದ್ದಾರೆ.
ಈಗಾಗಲೇ ಗುತ್ತಿಗೆ ಆಧಾರಿತ ವೈದ್ಯರು ತಮ್ಮ ಸೇವೆ ಖಾಯಂಗೊಳಿಸುವಂತೆ ಒತ್ತಾಯಿಸಿ, ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೆಲ ವೈದ್ಯರು, ಕೊರೊನಾದಂತಹ ಈ ಸಂದರ್ಭದಲ್ಲಿ ನಮ್ಮ ಕೆಲಸ ಖಾಯಂ ಗೊಳಿಸುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೆವು. ಸೋಂಕಿತ ರೋಗಿಯ ಚಿಕಿತ್ಸೆ ವೇಳೆ ಒಂದು ವೇಳೆ ನಮಗೇನಾದರೂ ಸೋಂಕು ಬಂದು ನಮಗೂ ಅಪಾಯವಿರುವುದರಿಂದ ನಮ್ಮ ಕುಟುಂಬಕ್ಕೆ ಭದ್ರತೆ ನಿಟ್ಟಿನಲ್ಲಿ ಕೆಲಸ ಖಾಂಗೊಳಿಸುವಂತೆ ಮನವಿ ಮಾಡಿದ್ದೆವು. ಆದರೆ ರಾಜ್ಯ ಸರ್ಕಾರ ಇತ್ತೀಚೆಗೆ ನಮಗೆ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಕೆಲಸ ಖಾಯಂ ಮಾಡಲು ಒಪ್ಪುತ್ತಿಲ್ಲ. ಹೀಗಾಗಿ ನಾವು ವೈದ್ಯಕೀಯ ಸೇವೆಗೆ ಹಾಜರಾಗುತ್ತಿಲ್ಲ. ಇಂದಿನಿಂದ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಗುತ್ತಿಗೆ ಆಧಾರಿತ ವೈದ್ಯರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆಯೇ ಆಶಾ ಕಾರ್ಯಕರ್ತೆಯರು ಕೂಡ ರಾಜ್ಯಾವ್ಯಾಪಿ ಜುಲೈ 10 ರಿಂದ ಪ್ರತಿಭಟನೆ ನಡೆಸುತ್ತಿರುವುದಾಗಿ ಘೋಷಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಕೊರೊನಾದಂತಹ ಈ ಕಠಿಣ ಸಂದರ್ಭದಲ್ಲಿ ಹಗಲು ರಾತ್ರಿಯೆನ್ನದೇ ಸಂಕಷ್ಟದಲ್ಲಿ ನಿರಂತರ ಸೇವೆ ಮಾಡುತ್ತಿದ್ದೇವೆ. ನಮ್ಮ ಬಳಿ ಅಗತ್ಯ ಸಲಕರಣೆಗಳೂ ಕೂಡ ಇಲ್ಲ. ಮಾಸಿಕ ವೇತನ ಕೂಡ ಕಡಿಮೆಯಿದೆ. ಅಭದ್ರತೆಯಲ್ಲಿ ಸೇಎ ಸಲ್ಲಿಸುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಜುಲೈ 10ರಿಂದ ಅನಿರ್ಧಿಷ್ಟಾವದಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ನಮಗೆ ಚಪ್ಪಾಳೆ ತಟ್ಟಿದ್ದು, ಹೂಮಳೆ ಸುರಿಸಿದ್ದು ಸಾಕು. ನಮಗೆ ಗೌರವಯುತವಾಗಿ ಬದುಕಲು ಗೌರವಧನ ಹೆಚ್ಚಿಸಬೇಕು. 12 ಸಾವಿರ ಮಾಸಿಕ ವೇತನ ನಿಗದಿ ಮಾಡಿ, ಕೊರೊನಾ ಸಂದರ್ಭದಲ್ಲಿ ಅಗತ್ಯ ಸಲಕರಣೆಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.
ಒಟ್ಟಾರೆ ಹೆಚ್ಚುತ್ತಿರುವ ಕೊರೊನಾ ಸಂಕಷ್ಟಗಳ ನಡುವೆ ರಾಜ್ಯ ಸರ್ಕಾರಕ್ಕೆ ಇದೀಗ ಹೊಸ ತಲೆನೋವು ಶುರುವಾಗಿದೆ.