Kannada NewsKarnataka NewsLatest

ಕೊರೋನಾ ಸೋಂಕಿತರನ್ನು ಗೌರವದಿಂದ ಕಾಣಬೇಕು – ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ :  ಮೂಡಲಗಿ ಮತ್ತು ಗೋಕಾಕ ತಾಲೂಕುಗಳಲ್ಲಿ ಕೊರೋನಾ ಸೊಂಕಿತರ ಆರೈಕೆಗಾಗಿ ಕಾಳಜಿ ಪೂರ್ವಕವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೋಗಿಗಳಿಗೆ ಸಮರ್ಪಕ ರೀತಿಯಲ್ಲಿ ಉತ್ತಮ ಗುಣಮಟ್ಟದ ಊಟೋಪಚಾರ ಹಾಗೂ ಅಗತ್ಯ ವೈದ್ಯಕೀಯ ಸೇವೆ ಒದಗಿಸಲು ಸೂಚಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹೆಚ್ಚುತ್ತಿರುವ ಕೊರೋನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂದೆ ಅನುಸರಿಸಬೇಕಾದ ಕ್ರಮಗಳ ಕುರಿತು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ರೋಗಿಗಳ ಆರೈಕೆ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಈ ವೇಳೆ ದೂರವಾಣಿ ಮೂಲಕ ಮಾತನಾಡಿದ ಅವರು, ಕೋವಿಡ್ ಕೇರ್ ಸೆಂಟರ್‌ಗಳು ರೋಗಿಗಳಿಗೆ ಉತ್ತಮ ವಾತಾವರಣ ಒದಗಿಸಿಕೊಡಬೇಕು. ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರೆ ಸಮಾಜವು ಅವರನ್ನು ಗೌರವದಿಂದ ಕಾಣಬೇಕು. ಈಗಾಗಲೇ ಕೊರೋನಾ ಸೊಂಕಿತರಿಗೆ ನೀಡುತ್ತಿರುವ ಕಿಟ್‌ಗಳಂತೆಯೇ ಇನ್ನು ಮುಂದೆ ಸೊಂಕಿತರ ಆರೈಕೆ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೂ ಸಹ ಕಿಟ್‌ಗಳನ್ನು ನೀಡಲಾಗುವುದು. ಕೋವಿಡ್-೧೯ ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.

ಸಭೆ ನಡೆಸಿದ ತಹಸಿಲ್ದಾರ

 ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ ಕೋವಿಡ್-೧೯ ಕೊರೋನಾ ಸೊಂಕು ತಡೆಗಟ್ಟುವ ಮತ್ತು ಸೊಂಕಿತ ರೋಗಿಗಳ ಆರೈಕೆ ಕುರಿತು ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಮೂಡಲಗಿ ತಹಶೀಲ್ದಾರ ದಿಲ್‌ಶಾದ್ ಮಹಾತ್, ಟಿಎಚ್‌ಓ ಡಾ.ಜಗದೀಶ ಜಿಂಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ ಕೋವಿಡ್-೧೯ ಕೊರೋನಾ ಸೊಂಕು ತಡೆಗಟ್ಟುವ ಮತ್ತು ಸೊಂಕಿತ ರೋಗಿಗಳ ಆರೈಕೆ ಕುರಿತು ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಮೂಡಲಗಿ ತಹಶೀಲ್ದಾರ ದಿಲ್‌ಶಾದ್ ಮಹಾತ್, ಟಿಎಚ್‌ಓ ಡಾ.ಜಗದೀಶ ಜಿಂಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಆರೋಗ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಪಿಎಚ್‌ಸಿಗಳ ವೈದ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕೊರೋನಾ ಸೊಂಕಿನ ವಿರುದ್ಧ ಹೋರಾಡಲು ಗೋಕಾಕ-ಮೂಡಲಗಿ ತಾಲೂಕುಗಳ ಅಧಿಕಾರಿಗಳು ಜಂಟಿಯಾಗಿ ಕೆಲಸ ನಿರ್ವಹಿಸಬೇಕು. ರೋಗಿಗಳ ಸುರಕ್ಷತೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಅಧಿಕಾರಿಗಳು ಇತರೇ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷತೆ ತೋರದೇ ಕಾಳಜಿಪೂರ್ವಕವಾಗಿ ಸೊಂಕಿತರ ಆರೈಕೆಗಾಗಿ ತಮ್ಮ ಸೇವೆಯನ್ನು ಮೀಸಲಿಡುವಂತೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರ, ಮಲ್ಲಾಪೂರ ಪಿಜಿ ಮತ್ತು ನಾಗನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಆರೈಕೆ ಕೇಂದ್ರಗಳಿಗೆ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತೆಗೆದುಕೊಂಡಿದ್ದು, ಮೂರ‍್ನಾಲ್ಕು ದಿನಗಳಲ್ಲಿ ಸೊಂಕಿತರ ಸಾವಿನ ಪ್ರಮಾಣ ಇಳಿಕೆ ಮಾಡಲು ರೋಗಿಗಳಿಗೆ ಆಕ್ಷಿಜನ್ ವ್ಯವಸ್ಥೆ ಮಾಡುತ್ತಿರುವ ಶಾಸಕರ ಕಾರ್ಯಕ್ಕೆ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
ಅಂಬ್ಯುಲನ್ಸ್ ಹಾಗೂ ೧೦೮ ವಾಹನಗಳ ಕೊರತೆ ಸಂದರ್ಭದಲ್ಲಿ ರೋಗಿಗಳ ಸಂಖ್ಯೆಯು ಹೆಚ್ಚಾದರೆ ಅವುಗಳನ್ನು ಬಾಡಿಗೆ ರೂಪದಲ್ಲಿ ಪಡೆಯಬೇಕು. ಸೊಂಕಿತರು ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಶಿಷ್ಠಾಚಾರ ಪಾಲಿಸಬೇಕು. ಸ್ಥಳೀಯ ವೈದ್ಯಾಧಿಕಾರಿ, ಪಿಡಿಓ/ಮುಖ್ಯಾಧಿಕಾರಿ, ಗ್ರಾಮ ಲೆಕ್ಕಿಗ, ಪೊಲೀಸರು ಈ ಜವಾಬ್ದಾರಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಒಂದು ವೇಳೆ ಸೊಂಕಿತರ ಶವ ಸಂಸ್ಕಾರಕ್ಕೆ ಕುಟುಂಬಸ್ಥರು ಮುಂದೆ ಬಂದರೆ ಅಂತ್ಯಕ್ರಿಯೆಗೆ ತಗಲುವ ವೆಚ್ಚವನ್ನು ಭರಿಸಬೇಕು. ಸರ್ಕಾರಿ ನಿಯಮಾವಳಿಗಳ ಪ್ರಕಾರವೇ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಕುಂಟು ನೆಪ ಹೇಳಿ ಕರ್ತವ್ಯದಿಂದ ಪಾರಾಗಲು ಯತ್ನಿಸಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ನೀಡಿದರು.
ಈಗಾಗಲೇ ಅರಭಾವಿ ಕ್ಷೇತ್ರದ ಜನತೆಗೆ ೨.೫೦ ಲಕ್ಷ ಮಾಸ್ಕ್‌ಗಳನ್ನು ಶಾಸಕರು ವಿತರಿಸಿದ್ದಾರೆ. ಕೊರೋನಾ ಅಟ್ಟಹಾಸ ಮತ್ತೆ ಮುಂದುವರೆಯುತ್ತಿರುವುದರಿಂದ ಕ್ಷೇತ್ರದ ನಾಗರೀಕರ ಸುರಕ್ಷತೆಗಾಗಿ ಎರಡನೇ ಬಾರಿಗೆ ೨ ಲಕ್ಷ ಮಾಸ್ಕ್‌ಗಳನ್ನು ವಿತರಿಸಲಿದ್ದಾರೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಗುಣಮಟ್ಟದ ಆಹಾರವನ್ನು ವಿತರಿಸಲಾಗುತ್ತಿದೆ. ಜೊತೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೋಗಿಗಳಿಗೆ ಕಿಟ್‌ಗಳನ್ನು ನೀಡುತ್ತಿದ್ದಾರೆ. ಕೊರೋನಾ ರೋಗಿಗಳ ಸುರಕ್ಷತೆಗೆ ರಕ್ಷಾ ಕವಚದಂತೆ ಬೆನ್ನೆಲುಬಾಗಿ ನಿಂತುಕೊಂಡು ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಉಭಯ ತಾಲ್ಲೂಕುಗಳ ಸೊಂಕಿತರ ಆರೈಕೆಗಾಗಿ ಸಕಲ ರೀತಿಯಾಗಿ ನಮ್ಮ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುತ್ತಿರುವ ಅವರಿಗೆ ನಮ್ಮ ಇಲಾಖೆಯು ಅಭಿನಂದನೆ ಸಲ್ಲಿಸುತ್ತದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ಹೇಳಿದರು.
ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮೂಡಲಗಿ ತಹಶೀಲ್ದಾರ ದಿಲ್‌ಶಾದ್ ಮಹಾತ್, ಹಿರಿಯ ತಜ್ಞ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಿ. ಕೋಣಿ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ, ಗೋಕಾಕ ಬಿಇಓ ಜಿ.ಬಿ. ಬಳಗಾರ, ಮೂಡಲಗಿ ಸಿಡಿಪಿಓ ವಾಯ್.ಎಂ. ಗುಜನಟ್ಟಿ, ಸಬ್ ಇನ್ಸ್‌ಪೆಕ್ಟರ್‌ಗಳಾದ ಮಲ್ಲಿಕಾರ್ಜುನ ಸಿಂಧೂರ, ಎಚ್.ವಾಯ್. ಬಾಲದಂಡಿ, ಎಚ್.ಕೆ. ನರಳೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button