ರಾಜ್ಯದಲ್ಲಿ ಒಂದೇ ದಿನ 16 ಹೊಸ ಕೊರೊನಾ ಸೋಂಕಿತರ ಪ್ರಕರಣ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಒಂದೇ ದಿನದಲ್ಲಿ 16 ಹೊಸ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 197ಕ್ಕೆ ಏರಿಕೆಯಾಗಿದೆ.

16 ಜನರ ಸೋಂಕಿತರ ಪೈಕಿ ಇಬ್ಬರು ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲದಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಕೊರೊನಾ ಸೋಂಕು ಯಾವುದೇ ಸೊಂಕಿತರ ಸಂಪರ್ಕದಲ್ಲಿ ಇಲ್ಲದವರಿಗೂ ಹರಡಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 5 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಐವರು ಸೋಂಕಿತರಲ್ಲಿ ಮೂವರಲ್ಲಿ ತೀವ್ರ ಉಸಿರಾಟದ ತೊಂದರೆಯಿದ್ದು, ಯಾವುದೇ ಟ್ರಾವಲ್ ಹಿಸ್ಟರಿಯಿಲ್ಲದಿರುವುದು ಆರೋಗ್ಯ ಇಲಾಖೆ ಮಾಹಿತಿಯಿಂದ ತಿಳಿದುಬಂದಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಪ್ರಕಾರ ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 5, ಬಾಗಲಕೋಟೆ 3, ಧಾರವಾಡ 1, ಉಡುಪಿ 3, ಬೆಳಗಾವಿ 3 ಮಂಡ್ಯ 1 ಹಾಗೂ ಮೈಸೂರಿನಲ್ಲಿ 2 ಹೊಸ ಕೊರೊನಾ ಪ್ರಕರಣ ದೃಢವಾಗಿದೆ.

ಬೆಳಗಾವಿಯಲ್ಲಿ ಯುವಕನಿಂದ ತಾಯಿ ಹಾಗೂ ಆತನ ಸಹೋದರನಿಗೂ ಸೋಂಕು ಹರಡಿರುವುದು ಪತ್ತೆಯಾಗಿದೆ. ಬೆಳಿಗ್ಗೆ ಯುವಕನ ತಂದೆಯಲ್ಲಿ ಸೋಂಕು ಪತ್ತೆಯಾಗಿತ್ತು. ಈ ಯುವಕ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ ಬಂದಿದ್ದ. ಅಲ್ಲದೇ ಆತ ಬೆಳಗಾವಿಗೆ ಬಂದು ಈರುಳ್ಳಿ ವ್ಯಾಪಾರದಲ್ಲಿ ತೊಡಗಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button