Latest

24 ಗಂಟೆಯಲ್ಲಿ 20 ಸಾವಿರ ಗಡಿ ತಲುಪಿದ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 20,000 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5.28 ಲಕ್ಷಕ್ಕೆ ಏರಿಕೆಯಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ದಿನೇ ದಿನೇ ಗಣನೀಯವಾಗಿ ಹೆಚ್ಚಾಗುತ್ತಿದೆ. ಒಂದೇ ದಿನದಲ್ಲಿ 19,906 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಇದು ಒಂದೇ ದಿನದಲ್ಲಿ ದಾಖಲಾದ ಅತಿಹೆಚ್ಚು ಕೊರೋನಾ ಪ್ರಕರಣವಾಗಿದೆ.

ಆರಂಭದಲ್ಲಿ ಅತೀ ಹೆಚ್ಚು ಕೊರೋನಾ ಸೋಂಕಿತ ದೇಶಗಳ ಪಟ್ಟಿಯಲ್ಲಿ ಟಾಪ್​ 10ರಲ್ಲಿ ಇರದಿದ್ದ ಭಾರತ ಈಗ 4ನೇ ಸ್ಥಾನಕ್ಕೆ ಬಂದು ತಲುಪಿದೆ. ಅಮೆರಿಕ, ಬ್ರೆಜಿಲ್, ರಷ್ಯಾ ಬಳಿಕ ನಂತರದ ಸ್ಥಾನದಲ್ಲಿ ಭಾರತ ಇದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 410 ಕೊರೋನಾ ಸೋಂಕಿತರ ಸಾವಿನ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 16,096ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿಯೂ ನಿನ್ನೆ ಒಂದೇ ದಿನ 918 ಕೊರೋನಾ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್​ಡೌನ್ ನಿಯಮವನ್ನು ಬಿಗಿಗೊಳಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್-19 ಭಾರೀ ಪ್ರಮಾಣದಲ್ಲಿ ಹರಡಿದ್ದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಮಹಾರಾಷ್ಟ್ರ ದೇಶದಲ್ಲಿಯೇ ಹೆಚ್ಚು 1,52,765 ಮಂದಿಗೆ ಕೋವಿಡ್-19 ಪತ್ತೆಯಾಗಿದೆ. ಜೊತೆಗೆ 7,106 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ದೆಹಲಿ ಎರಡನೇ ಸ್ಥಾನದಲ್ಲಿದೆ. ಅಲ್ಲಿ 77,240 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, 2,492 ಜನರು ಹೆಮ್ಮಾರಿಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 74,622 ಜನರಿಗೆ ಸೋಂಕು ದೃಢಪಟ್ಟಿದ್ದು, 957 ಸಾವನ್ನಪ್ಪಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button