ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನಿಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ರಾಜ್ಯ ಸರ್ಕಾರದ ಪ್ರತಿನಿಧಿಗಳು ಹೇಳುತ್ತಿರುವುದರ ನಡುವೆಯೇ ಕರ್ನಾಟಕ ಕೊರೊನಾ ಸೋಂಕು ಪೀಡಿತರ ಪಟ್ಟಿಯಲ್ಲಿ ದೇಶದಲ್ಲೇ 3ನೇ ಸ್ಥಾನಕ್ಕೇರಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಿತ್ಯವೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದು ಸರ್ಕಾರದ ‘ಕಟ್ಟುನಿಟ್ಟಿನ ಕ್ರಮ’ಗಳನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ಟೀಕಿಸಿದ್ದಾರೆ. ಒಂದು ಸಾವಿರ ವೆಂಟಿಲೇಟರ್, 10 ಲಕ್ಷ ಎನ್.95 ಮಾಸ್ಕ್ , 5 ಲಕ್ಷ ಕಿಟ್, 15 ಲಕ್ಷ ತ್ರೀ ಲೇಯರ್ ಮಾಸ್ಕ್ ಖರೀಸುವುದಾಗಿ ಸರ್ಕಾರ ಹೇಳಿ ವಾರವಾಯ್ತು. ವಾರದಲ್ಲಿ ಸೋಂಕು ತೀವ್ರಗತಿಯಲ್ಲಿ ಏರಿದೆ. ಆದರೆ, ಸರ್ಕಾರ ಹೇಳಿರುವುದೆಲ್ಲವೂ ಕಾರ್ಯಗತವಾಗಿದೆಯೇ? ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಸೋಂಕಿನ ವಿರುದ್ಧ ಇಷ್ಟು ನಿಧಾನದ ಕಾರ್ಯಾಚರಣೆ ಸರಿಯೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಮೊದಲು ಹೆಚ್ಚಿನ ಪ್ರಮಾಣದಲ್ಲಿ ವೈದ್ಯಕೀಯ ಪರಿಕರಗಳನ್ನು ಹೊಂದಿಸಿಕೊಳ್ಳಬೇಕು. ವೈದ್ಯರಿಗೆ ಸೂಕ್ತ ಸವಲತ್ತುಗಳನ್ನು ನೀಡಬೇಕು. ಘೋಷಣೆಗಳು, ಹೇಳಿಕೆಗಳು ಅಷ್ಟಕ್ಕೆ ಸೀಮಿತವಾಗಬಾರದು, ಕಾರ್ಯರೂಪಕ್ಕೆ ಬರಬೇಕು. ಇಲ್ಲವಾದರೆ ಜಗತ್ತನ್ನೇ ಆವರಿಸಿರುವ ಮಹಾಮಾರಿ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ “ಮರಣ ಮೃದಂಗ” ಬಾರಿಸುವ ಕಾಲ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೊರಡಿಸಿದ ಲಾಕ್‌ಡೌನ್ ಹೊರತುಪಡಿಸಿ, ವೈರಸ್ ತಡೆಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿರುವುದು ನಿಜವೇ ಆಗಿದ್ದರೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಸವಲತ್ತು, ರಕ್ಷಣಾ ಕವಚಗಳನ್ನು ಪೂರೈಸಿದ್ದರೆ, ಚಿಕಿತ್ಸೆಗೆ ವೈದ್ಯಕೀಯ ಸಲಕರಣೆಗಳನ್ನು ನೀಡಿದ್ದೆ ಆಗಿದ್ದಲ್ಲಿ ಸೋಂಕು ಶರವೇಗದಲ್ಲಿ ವ್ಯಾಪಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಪ್ರೋತ್ಸಾಹ ಧನ ನೀಡುವಂತೆ ನಾನು ಕೋರಿದ್ದೆ. ಆದರೆ, ರಕ್ಷಣಾ ಕವಚವನ್ನೇ ನೀಡದಿರುವ ಬಗ್ಗೆ ಮಾಹಿತಿ ಇದೆ. ಜನ ರಸ್ತೆಗಳಿಯದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿದೆ. ಅವರಿಗೂ ಸೂಕ್ತ ರಕ್ಷಣಾ ಕವಚಗಳಿಲ್ಲ. ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಂತೆ ಪೊಲೀಸರಿಗೂ ರಕ್ಷಣಾ ಕವಚಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ