ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಇಂದು ಮಹಾಮಾರಿ ಕೊರೊನಾ ಇಬ್ಬರನ್ನು ಬಲಿ ಪಡೆದಿದೆ. ಈ ಮೂಲಕ ಕೊರೊನಾ ಸೋಂಕಿಗೆ ಕರ್ನಾಟಕದಲ್ಲಿ ಬಲಿಯಾದವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಂಧ್ರ ಪ್ರದೇಶ ಮೂಲದ 60 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿಯಿಂದ ಪತ್ನಿ ಮತ್ತು ಖಾಸಗಿ ಆಸ್ಪತ್ರೆಯ ವಾರ್ಡ್ ಬಾಯ್‍ಗೆ ಸೋಂಕು ತಗುಲಿತ್ತು.
ಆಂಧ್ರದ ಅನಂತಪುರ ಜಿಲ್ಲೆಯವರಾದ ವೃದ್ಧ ಅನಾರೋಗ್ಯದ ಕಾರಣ ಆಂಧ್ರ ಪ್ರದೇಶದಲ್ಲೇ ಚಿಕಿತ್ಸೆ ಪಡೆದಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಎಂದು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ವೃದ್ಧ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಆಗ ವೃದ್ಧ ಲೋ ಬಿಪಿ, ಶುಗರ್, ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ತಕ್ಷಣ ವೃದ್ಧನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ವರದಿಯಲ್ಲಿ ಪಾಸಿಟಿವ್ ಬಂದಿದೆ. ನಂತರ ವೃದ್ಧನನ್ನು ಕೋವಿಡ್ ವಾರ್ಡಿನಲ್ಲಿ ಇರಿಸಿ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದೇ ವೇಳೆ ಕರಾವಳಿ ನಗರಿ ಮಂಗಳೂರಿನಲ್ಲಿ ಕೊರೊನಾ ಸೋಂಕು ಮಹಿಳೆಯೊಬ್ಬರನ್ನು ಬಲಿ ಪಡೆದಿದೆ. ಮಂಗಳೂರಿನ 80 ವರ್ಷದ ವೃದ್ಧೆ ಕೊರೊನಾಗೆ ಸಾವನ್ನಪ್ಪಿದ್ದಾರೆ. ಇವರು ಫಸ್ಟ್ ನ್ಯೂರೋ ಆಸ್ಪತ್ರೆಗೆ ನರಸಂಬಂಧಿ ಕಾಯಿಲೆ ಚಿಕಿತ್ಸೆಗಾಗಿ ಹೋಗಿದ್ದರು. ಈ ವೇಳೆ ವೃದ್ಧೆಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ