ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲಾಕ್ ಡೌನ್ 4.0 ಜಾರಿಯಲ್ಲಿದ್ದರೂ ಕೂಡ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಾಗಿ ಸೋಂಕಿನ ವೇಗ ವೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಲಾಕ್ ಡೌನ್ ಅವಧಿ ಮತ್ತೆ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಮೇ 31ಕ್ಕೆ ನಾಲ್ಕನೇ ಹಂತದ ಲಾಕ್ ಡೌನ್ ಅವಧಿ ಅಂತ್ಯವಾಗುತ್ತಿದೆ. ಆದರೆ, ಕೊರೋನಾ ವೈರಸ್ ಹೆಚ್ಚುತ್ತಲೇ ಇರುವುದರಿಂದ ಲಾಕ್ ಡೌನ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕೆಂದ್ರ ಸರ್ಕಾರ ಇನ್ನೂ 2 ವಾರ ಲಾಕ್ ಡೌನ್ ವಿಸ್ತರಿಸುವ ಇರಾದೆಯಲ್ಲಿದ್ದು, ಜೂನ್ 15ರವರೆಗೂ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆಯಿದೆ.
ಈ ಬಾರಿ ಪ್ರಧಾನಿ ಮೋದಿ, ಲಾಕ್ ಡೌನ್ ವಿಸ್ತರಣೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಮಾಲೋಚನೆ ಮಾಡುವ ಸಾಧ್ಯತೆ ಇಲ್ಲ. ಆದರೆ, ನಾಲ್ಕನೇ ಹಂತದ ಲಾಕ್ಡೌನ್ ವೇಳೆ ಯಾವೆಲ್ಲಾ ಕ್ರಮಗಳನ್ನ ಕೈಗೊಳ್ಳಲಾಯಿತು ಎಂದು ರಾಜ್ಯ ಸರ್ಕಾರಗಳಿಂದ ಕೇಂದ್ರ ವರದಿ ತರಿಸಿಕೊಳ್ಳಲಿದೆ. ಆ ವರದಿಯ ಅಂಶಗಳನ್ನ ಆಧರಿಸಿ ಐದನೇ ಹಂತದ ಲಾಕ್ಡೌನ್ನಲ್ಲಿ ಹೊಸ ನಿಯಮಾವಳಿಗಳನ್ನ ಜಾರಿಗೆ ತರುವ ಸಾಧ್ಯತೆಯಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಇದೂವರೆಗೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1.45 ಲಕ್ಷ ದಾಟಿದೆ. ಸಾವಿನ ಸಂಖ್ಯೆ 4,167 ಕ್ಕೆ ಏರಿಕೆಯಾಗಿದೆ. ತಿಂಗಳ ಹಿಂದೆ ವಿಶ್ವ ಪಟ್ಟಿಯಲ್ಲಿ ಬಹಳ ಹಿಂದಿದ್ದ ಭಾರತ ಇದೀಗ ಕೊರೊನಾ ಪಟ್ಟಿಯಲ್ಲಿ ಟಾಪ್-10 ಪಟ್ಟಿಗೆ ಸೇರ್ಪಡೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ