ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರೂ ಕೊರೊನಾ ವೈರಸ್ ಜಾಗೃತಿ ನೆಪದಲ್ಲಿ ಬೆಂಬಲಿಗರ ಗುಂಪು ಕಟ್ಟಿಕೊಂಡು ದಾವಣಗೆರೆ ನಗರ ಸುತ್ತಾಟ ನಡೆಸಿದ್ದ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಧಾನಿ ಮೋದಿ ದೇಶದಲ್ಲಿ ಲಾಕ್ ಡೌನ್ ಘೋಷಿಸಿದ್ದರೂ ಒಂದೆಡೆ ಜನರು ರಸ್ತೆಗಿಳಿಯುತ್ತಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಈ ನಡುವೆ ರಾಜಕಾರಣಿಗಳು ಕೂಡ ಜವಾಬ್ದಾರಿ ಮರೆತು ಜಾಗೃತಿ ಹೆಸರಲ್ಲಿ, ಲಾಕ್ ಡೌನ್ ಪರಿಶೀಲನೆ ನೆಪದಲ್ಲಿ ನಗರದಲ್ಲಿ ಸುತ್ತಾಡುತ್ತಿದ್ದಾರೆ. ನಿನ್ನೆ ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಬೆಂಬಲಿಗರ ಜತೆ ಪರಿಶಿಲನೆ ನಡೆಸಿದ್ದರು. ಇಂದು ಶಾಸಕ ರೇಣುಕಾಚಾರ್ಯ ಕೊರೊನಾ ಜಾಗೃತಿ ಎಂದು ದಾವಣಗೆರೆಯಲ್ಲಿ ಸುತ್ತಾಡಿದ್ದಾರೆ.
ನಗರದ ದುರ್ಗಾಂಬಿಕಾ ದೇವಸ್ಥಾನ ಪ್ರದೇಶದಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ರೇಣುಕಾಚಾರ್ಯ ಅವರಿಗೆ ಮೇಯರ್ ಬಿ.ಜೆ.ಅಜಯಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಉಮಾ ರಮೇಶ್ ಸೇರಿದಂತೆ ಅನೇಕ ಕಾರ್ಯಕರ್ತರು, ಬೆಂಬಲಿಗರು ಸಾಥ್ ನೀಡಿದ್ದರು.
ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ರೇಣುಕಾಚಾರ್ಯ ಅವರನ್ನ ತರಾಟೆಗೆ ತೆಗೆದುಕೊಂಡರು. ಹೀಗೆ ಗುಂಪು ಕಟ್ಟಿಕೊಂಡು ಜಾಗೃತಿ ಮೂಡಿದುವುದು ಸರಿಯಲ್ಲ. ಇದರಿಂದ ಮತ್ತಷ್ಟು ತೊಂದರೆಯಾಗುತ್ತದೆ. ಇದು ಪ್ರಚಾರದ ಸಮಯವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರರಲ್ಲಿ ಜಾಗೃತಿ ಮೂಡಿಸಲು ನಾಲ್ಕು ಜನರೊಂದಿಗೆ ಬಂದಿದ್ದೆ. ನಾನು ಪ್ರಾಚಾರ ನಡೆಸುತ್ತಿರಲಿಲ್ಲ ಎಂದು ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ