
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕೆಲ ಜಿಲ್ಲೆಗಳಲ್ಲಿ ಕೊರೊನಾ ಕಂಟ್ರೋಲ್ ತಪ್ಪುತ್ತಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಜನತೆಯಲ್ಲಿ ಆತಂಕ ಹೆಚ್ಚಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ, ರಾಜ್ಯದಲ್ಲಿ 10 ಸಾವಿರ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಪರಿಶೀಲನೆಗೆ ತೆರಳುತ್ತಿದ್ದೇನೆ. ಈಗಾಗಲೇ ಕೇಂದ್ರ ತಂಡ ಬಂದು ರಾಜ್ಯದ ಕೊರೊನಾ ಪರಿಸ್ಥಿತಿಯನ್ನು ನೋಡಿಕೊಂಡು ಹೋಗಿದ್ದು, ಸರ್ಕಾರ ತೆಗೆದುಕೊಂಡಿರುವ ಕೆಲವು ನಿರ್ಧಾರಗಳಿಗೆ ಮೆಚ್ಚುಗೆ ಸೂಚಿಸಿದೆ. ಹಾಗೆ ಕೆಲವು ಮುನ್ನೇಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆಗಳನ್ನು ನೀಡಿದೆ ಎಂದರು.
ಕೋವಿಡ್ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಂಬುಲೆನ್ಸ್ ಬೇಕು. ಹೆಚ್ಚುವರಿ ಅಂಬುಲೆನ್ಸ್ ಗಳ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಕೆಲವು ಜಿಲ್ಲೆಗಳಲ್ಲಿ ಕೊರೊನಾ ಕಂಟ್ರೋಲ್ ತಪ್ಪುತ್ತಿದ್ದು, ಜಿಲ್ಲಾಧಿಕಾರಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನಾಳೆ ಸುದ್ದಿಗೋಷ್ಠಿ ಕರೆದಿದ್ದೇನೆ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.