
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ನಡುವೆ ಖಾಕಿಗಳಿಗೂ ಕೊರೊನಾ ಕಂಟಕ ಎದುರಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೂ ಕೊರೊನಾ ಸೋಂಕು ಹರಡುತ್ತಿದೆ.
ಇಂದು ಬೆಂಗಳೂರಿನಲ್ಲಿ ಓರ್ವ ಪೊಲೀಸ್ ಪೇದೆ, ಹಾಸನದಲ್ಲಿ ಓರ್ವ ಪೇದೆ ಹಾಗೂ ಉಡುಪಿ ಹಾಗೂ ಮಂಗಳೂರಿನ ಪೊಲೀಸ್ ಕಾನ್ಸ್ ಟೇಬಲ್ ಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಪೊಲೀಸ್ ಇಲಾಖೆಯಲ್ಲಿ ಆತಂಕ ಹೆಚ್ಚಿಸಿದೆ.
ಹಾಸನ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರು ಇತ್ತೀಚೆಗೆ ಬೆಂಗಳೂರಿಗೆ ಬಂದು ಹೋಗಿದ್ದರು. ಅಲ್ಲದೇ ಜಿಲ್ಲೆಯ ಪೊಲೀಸ್ ಟ್ರೈನಿಂಗ್ ಶಾಲೆಗೆ ಭೇಟಿ ನೀಡಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.
ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಅಜೆಕಾರಿನ ತಲಾ ಓರ್ವ ಪೊಲೀಸರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಎರಡೂ ಕಡೆಯ ಒಟ್ಟು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಮತ್ತು ಅಜೆಕಾರು ಠಾಣೆಯ ಎಎಸ್ ಐ ಗೆ ಸೋಂಕು ದೃಢಪಟ್ಟಿದೆ. ಇವರು ಚೆಕ್ ಪೋಸ್ಟ್ ಗಳಲ್ಲಿ, ಹೈವೇ ಪೆಟ್ರೋಲ್ ಗಳಲ್ಲಿ ಕಾರ್ಯ ನಿರ್ವಹಿಸಿದ್ದರು.