ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಂದು ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿರುವ 47 ವರ್ಷದ ವ್ಯಕ್ತಿ ಚಿಕ್ಕೋಡಿಯವನಲ್ಲ, ಸಂಕೇಶ್ವರದವನು ಎಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಚಿಕ್ಕೋಡಿ ಎಂದು ಉಲ್ಲೇಖಿಸಲಾಗಿತ್ತು. ಈ ವ್ಯಕ್ತಿ ದೆಹಲಿಗೆ ಹೋಗಿ ಬಂದವನಾಗಿದ್ದು, ಈ ಮೊದಲು ಟೆಸ್ಟ್ ಮಾಡಿದಾಗ ನೆಗೆಟಿವ್ ಎಂದು ಬಂದಿತ್ತು. ಮತ್ತೊಮ್ಮೆ ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ.
ಬೆಳಗಾವಿಯ ಯಳ್ಳೂರಲ್ಲೂ ಕೊರೋನಾ ಸೋಂಕು ಪತ್ತೆಯಾಗಿದೆ. ಯಳ್ಳೂರಿನ 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಈಕೆ ಕೂಡ ದೆಹಲಿಗೆ ಹೋಗಿ ಬಂದಿದ್ದು, ಎರಡನೆ ಬಾರಿಗೆ ಪರೀಕ್ಷೆ ನಡೆಸಿದಾಗ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಮತ್ತಷ್ಟು ಬಿಗಿ ಕ್ರಮಕ್ಕೆ ನಿರ್ಧಾರ
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಸೋಂಕು ಹರಡುವಿಕೆ ತಡೆಗಟ್ಟುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆದ್ದರಿಂದ ಇದು ಇನ್ನಷ್ಟು ಹರಡದಂತೆ ಬಿಗಿಯಾದ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್-೧೯ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಾಲ್ಲೂಕುಗಳ ಅಧಿಕಾರಿಗಳ ಜತೆ ಗುರುವಾರ(ಏ.೧೬) ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಕಂಟೈನ್ಮೆಂಟ್ ಝೋನ್ ನಿರ್ವಹಣೆ ಸೇರಿದಂತೆ ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ಅಧಿಕಾರಗಳನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಯಾವುದೇ ತುರ್ತು ನಿರ್ಧಾರ ಅಥವಾ ಕ್ರಮಗಳನ್ನು ಕೈಗೊಳ್ಳಬೇಕು.
ಅಗತ್ಯ ಸಾಮಗ್ರಿಗಳ ಖರೀದಿಗೂ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಕೂಡ ಪ್ರತ್ಯೇಕವಾಗಿ ಸಮಿತಿ ರಚಿಸಿ, ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ.
ಬೆಳಗಾವಿ ರೆಡ್ ಝೋನ್ ನಲ್ಲಿದೆ. ಪ್ರಕರಣಗಳ ಸಂಖ್ಯೆ ಅತೀ ಹೆಚ್ಚಾಗಿದ್ದು, ಯಾವುದೇ ಕಾರಣಕ್ಕೂ ಉದಾಸೀನತೆ ತೋರಿಸಬಾರದು.
ಕೆಲವು ಕಡೆ ಯಾವುದೇ ಪಾಸಿಟಿವ್ ಕಂಡುಬಂದಿಲ್ಲ ಎಂದು ನಿರ್ಲಕ್ಷ್ಯ ವಹಿಸುವಂತಿಲ್ಲ. ಈಗಾಗಲೇ ನಡೆಸಿರುವ ಮನೆ ಮನೆ ಸಮೀಕ್ಷೆ ಎರಡು ದಿನಗಳಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು.
ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ತಾಲ್ಲೂಕು ಅಥವಾ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೂಡ ಈಗಾಗಲೇ ಟಾಸ್ಕಫೋರ್ಸ್ ರಚನೆ ಮಾಡಲಾಗಿದ್ದು, ಎಲ್ಲ ಟಾಸ್ಕಫೋರ್ಸ್ ಗಳು ಕಾರ್ಯಪ್ರವೃತ್ತಗೊಳ್ಳಬೇಕು.
ಪ್ರತಿಯೊಂದು ತಾಲ್ಲೂಕು ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಹೋಟೆಲ್ ಗಳನ್ನು ಗುರುತಿಸಿ ವರದಿ ನೀಡುವುದರ ಜತೆಗೆ ಅಗತ್ಯಬಿದ್ದರೆ ಅವುಗಳ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಹೊಸ ಕಂಟೈನ್ಮೆಂಟ್ ಝೋನ್ ಘೋಷಣೆ:
ಜಿಲ್ಲೆಯಲ್ಲಿ ಈಗಾಗಲೇ ೬ ಕಂಟೈನ್ಮೆಂಟ್ ಝೋನ್ ಈಗಾಗಲೇ ಘೋಷಿಸಲಾಗಿದೆ. ಇದೀಗ ಸಂಕೇಶ್ವರ ಮತ್ತು ಯಳ್ಳೂರ ಪ್ರದೇಶಗಳನ್ನು ಕೂಡ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗುವುದು.
ಆದ್ದರಿಂದ ಸಂಕೇಶ್ವರ ಪಟ್ಟಣವನ್ನು ಮತ್ತು ಯಳ್ಳೂರ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಯಾವುದೇ ಕಾರಣಕ್ಕೂ ಕಂಟೈನ್ಮೆಂಟ್ ಝೋನ್ ನಲ್ಲಿ ಜನಸಂಚಾರ ತಡೆ ಮತ್ತು ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು ಎಂದು ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಎಲ್ಲರಿಗೂ ತಕ್ಷಣವೇ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಇರಿಸಬೇಕು.
ಜಿಲ್ಲೆಯ ಯಾವುದೇ ಭಾಗದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಸೇರಿದಂತೆ ಸಂಘ-ಸಂಸ್ಥೆಗಳು ಸಾರ್ವಜನಿಕರಿಗೆ ನೇರವಾಗಿ ವಿತರಿಸುವಂತಿಲ್ಲ. ಆಯಾ ತಾಲ್ಲೂಕಿನ ತಹಶಿಲ್ದಾರರ ಮೂಲಕ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಮೂಲಕ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಜ್ವರ-ಕೆಮ್ಮು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಸೇರಿಸಿ:
೬೦ ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಜ್ವರ ಕಂಡುಬಂದರೆ ತಕ್ಷಣವೇ ಸರಕಾರಿ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕು.
ತಾಲ್ಲೂಕುವಾರು ಸಹಾಯವಾಣಿ ಆರಂಭಿಸಿ ಜ್ವರ, ಕೆಮ್ಮು ಮತ್ತಿತರ ಲಕ್ಷಣಗಳಿರುವ ವ್ಯಕ್ತಿಗಳನ್ನು ಗುರುತಿಸಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಗೆ ಕಳುಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯವನ್ನು ಅಧಿಕಾರಿ ಡಾ.ರಾಜೇಂದ್ರ ಸೂಚನೆ ನೀಡಿದರು.
ಅಗತ್ಯವಿರುವ ಪಿಪಿಇ ಖರೀದಿಸಲು ಈಗಾಗಲೇ ಹಣ ಕೂಡ ಬಿಡುಗಡೆ ಮಾಡಲಾಗಿದ್ದು, ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಮುಂಚಿತವಾಗಿಯೇ ಖರೀದಿಸಿ ಇಟ್ಟುಕೊಳ್ಳಬೇಕು.
ಮನೆ ಮನೆಗೆ ಸಮೀಕ್ಷೆಗೆ ತೆರಳುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ಅಗತ್ಯ ಮಾಸ್ಕ್ ಮತ್ತು ಸ್ಯಾನಿಟೈಸರ್ ಪೂರೈಸಬೇಕು.
ಕಂಟೈನ್ಮೆಂಟ್ ಝೋನ್: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ:
ಕಂಟೈನ್ಮೆಂಟ್ ಝೋನ್ ಗಳಲ್ಲಿ ಜನಸಂಚಾರ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಡಾ.ರಾಜೇಂದ್ರ ಸೂಚನೆ ನೀಡಿದರು.
ಈ ಪ್ರದೇಶಗಳಲ್ಲಿ ಅತೀಯಾದ ಜ್ವರ-ಕೆಮ್ಮು ಇರುವ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಿ ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಬೇಕು.
ಅಗತ್ಯ ವಸ್ತುಗಳ ಪೂರೈಕೆಗೆ ಸ್ವಯಂಸೇವಕರನ್ನು ಗುರುತಿಸಿ ಅವರ ಮೂಲಕವೇ ಮನೆ ಮನೆಗಳಿಗೆ ಸಾಮಗ್ರಿಗಳನ್ನು ಪೂರೈಸುವ ಕ್ರಮ ಕೈಗೊಳ್ಳಬೇಕು ಎಂದರು.
ಕಂಟೈನ್ಮೆಂಟ್ ಝೋನ್ ನಲ್ಲಿ ಇರುವ ಪ್ರತಿ ಮನೆಗೂ ಆರೋಗ್ಯ ತಂಡಗಳು ಭೇಟಿ ನೀಡಿ, ಜ್ವರ-ಕೆಮ್ಮು ಇರುವವರನ್ನು ಗುರುತಿಸಬೇಕು ಅವರು ನಿರ್ದೇಶನ ನೀಡಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಅಶೋಕ ತೇಲಿ, ರವೀಂದ್ರ ಕರಲಿಂಗಣ್ಣವರ, ಎಲ್ಲ ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ