*ಬೆಂಕಿ ಹಚ್ಚಿಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ; ಪತ್ನಿ ಸ್ಥಳದಲ್ಲೇ ದುರ್ಮರಣ; ಪತಿ ಸ್ಥಿತಿ ಚಿಂತಾಜನಕ*

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹಕ್ಕೆ ದಂಪತಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾರದಾ ಮೃತ ಮಹಿಳೆ. ಪತಿ ಶಂಕರಯ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತಿ ಶಂಕರಯ್ಯ ಅಕ್ಕ-ತಂಗಿಯನ್ನೇ ವಿವಾಹವಾಗಿದ್ದ ಎನ್ನಲಾಗಿದೆ. ಶಾರದಾ ಶಂಕರಯ್ಯ ಎರಡನೇ ಪತ್ನಿ. ರಾತ್ರಿ ಕಂಠಪೂರ್ತಿ ಕುಡಿದು ಬಂದ ಶಂಕರಯ್ಯ ಪತ್ನಿ ಜೊತೆ ಜಗಳವಾಡಿದ್ದಾನೆ. ಅಲ್ಲದೇ ಪತ್ನಿ ಮೇಲೆ ಪೆಟ್ರೋಲ್ ಎರಚಿದ್ದಾನೆ. ಈ ವೇಳೆ ಕೋಪದಲ್ಲಿ ಪತ್ನಿ ಶಾರದಾ ಬೆಂಕಿಕಡ್ಡಿ ಗೀರಿದ್ದಾಳೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಸ್ಥಳದಲ್ಲೇ ಇದ್ದ ಶಂಕರಯ್ಯಗೂ ಬೆಂಕಿ ತಗುಲಿದೆ. ಪತ್ನಿ ಪತಿಯ ಕಣ್ಣೆದುರೇ ಸಜೀವದಹನವಾಗಿದ್ದು, ಶಂಕರಯ್ಯ ಸುಟ್ಟಗಾಯಗಳಿಂದ ಗಂಭೀರವಾಗಿದ್ದಾರೆ ಎಂದು ತಿಳಿದುಬಂದಿದೆ. ಗೌರಿಬಿದನೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ