Latest

ರೆಮಿಡಿಸಿವಿರ್ ಔಷಧ ಕೃತಕ ಅಭಾವ ಸೃಷ್ಟಿಸುವವರನ್ನು ಬಂಧಿಸಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿತರ ಪ್ರಾಣ ಉಳಿಸುವ ರೆಮಿಡಿಸಿವಿರ್ ಔಷಧಿಯ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಎಫ್ ಐ ಆರ್ ದಾಖಲಿಸಿ ಬಂಧನ ಮಾಡುವಂತೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು. ರೆಮಿಡಿಸಿವಿರ್ ಔಷಧಿಯ ವಿರುದ್ಧ ಕಾರ್ಯಾಚರಣೆ ಆರಂಭಿಸಿ. ರೆಮಿಡಿಸಿವಿರ್ ಚುಚ್ಚುಮದ್ದು ಕೋವಿಡ್ ಪೀಡಿತರ ಪ್ರಾಣ ಉಳಿಸಲು ಇರುವ ಪರಿಣಾಮಕಾರಿ ಚುಚ್ಚುಮದ್ದು. ಇದನ್ನು ಕಳ್ಳಸಂತೆಯಲ್ಲಿ ಮಾರಾಟ ಮಾಡುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಈ ಔಷಧದ ಸ್ಟಾಕಿಸ್ಟ್ ಯಾರು? ಡಿಸ್ಟ್ರಿಬ್ಯೂಟರ್ ಯಾರು? ಎಂಬುದರ ಕುರಿತು ಮಾಹಿತಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಇಂಡೆಂಟ್ ಯಾರು ಹಾಕಿದ್ದಾರೆ ? ಸ್ಟೋರೇಜ್ ಎಲ್ಲಿದೆ? ಡಿಸ್ಟ್ರಿಬ್ಯೂಟರ್ ಯಾರು? ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿ. ಯಾವ ಹಂತದಲ್ಲಿ ಔಷಧ ಕೃತಕ ಅಭಾವ ಸೃಷ್ಟಿಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ . ತಪ್ಪು ಮಾಡಿದ್ದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿ. ಸಂಬಂಧಪಟ್ಟವರನ್ನು ಬಂಧನ ಮಾಡಿ. ಕಾನೂನು ಪ್ರಕಾರ ತಕ್ಕ ಶಿಕ್ಷೆ ನೀಡಿ ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಬಸವರಾಜ್ ಬೊಮ್ಮಾಯಿ ವಿವರಿಸಿದರು.

ರಾಜ್ಯದ ಗಡಿಭಾಗದಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೊರರಾಜ್ಯಗಳಿಂದ ರಾಜ್ಯ ಪ್ರವೇಶಿಸುವ ಜನರಿಗೆ ಆರ್ ಟಿ ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಬೇಕಾಗಿದೆ. ಇಲ್ಲದಿದ್ದರೆ ಗಡಿಭಾಗದಲ್ಲಿ rtpcr ಟೆಸ್ಟಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡುವ ಬಗ್ಗೆ ಆರೋಗ್ಯ ಇಲಾಖೆ ಸಚಿವರ ಜತೆ ಚರ್ಚೆ ಮಾಡುವುದಾಗಿ ಅವರು ತಿಳಿಸಿದರು‌.

ರಾತ್ರಿ ಕರ್ಫೂ ಯಶಸ್ವಿ

Home add -Advt

ಇದುವರೆಗೆ ರಾತ್ರಿ ಕರ್ಫ್ಯೂ ಜನರ ಸಹಕಾರದಿಂದ ಯಶಸ್ವಿಯಾಗಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡರೂ ಅದನ್ನು ಜಾರಿಗೆ ತರಲು ನಮ್ಮ ಇಲಾಖೆ ಸಿದ್ಧವಾಗಿದೆ. ಬೇರೆ ನಗರ ಅಥವಾ ಪಟ್ಟಣಗಳಿಗೆ ರಾತ್ರಿ ಕರ್ಫೂ ವಿಸ್ತರಣೆ ಮಾಡಿದೆ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಇಂದಿನ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಯಾಣಿಕರಿಗೆ ತಪಾಸಣೆ
ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ rtpcr ಟೆಸ್ಟ್ ಕಡ್ಡಾಯ ಮಾಡಬೇಕಾದ ಅಗತ್ಯವಿದೆ. ಅದರ ಜತೆ ಥರ್ಮಲ್ ಟೆಸ್ಟಿಂಗ್ ಮಾಡಬೇಕು. ಈ ಬಗ್ಗೆ ಆರೋಗ್ಯ ಸಚಿವರ ಜೊತೆಗೆ ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು

ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯದಲ್ಲಿ 30 ಜನ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಪೊಲೀಸ್ ಕುಟುಂಬದ 450 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಇವರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಪೊಲೀಸ್ ಸಿಬ್ಬಂದಿಗೆ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವ ಉದ್ದೇಶದಿಂದಾಗಿ ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರನ್ನು ಸಮನ್ವಯ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅಗ್ನಿ ಶಾಮಕ, ಹೋಂಗಾರ್ಡ್, ಜೈಲು ಸಿಬ್ಬಂದಿ ಸೇರಿದಂತೆ ಎಲ್ಲ ಪೊಲೀಸರಿಗೂ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ಎಲ್ಲಾ ಕೆಲಸಗಳಿಗೆ ನಮ್ಮ ಇಲಾಖೆ ಸಜ್ಜಾಗಿದೆ. ಮುಖ್ಯಮಂತ್ರಿಗಳು ಕೈಗೊಳ್ಳುವ ತೀರ್ಮಾನದ ಆಧಾರದ ಮೇಲೆ ಎಲ್ಲ ರೀತಿಯ ಸಹಕಾರ ನೀಡಲು ಗೃಹ ಇಲಾಖೆ ಸಿದ್ಧವಿದೆ. ಪೊಲೀಸ್ ಸಿಬ್ಬಂದಿಗೆ ಕೊರೋನಾ ದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಮತ್ತು ಶೀಲ್ಡ್ ಗಳನ್ನು ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

Related Articles

Back to top button