
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಸಿಕೆಗಳ ಪ್ರಯೋಗ ಆರಂಭವಾಗಿದ್ದು, ಇದೀಗ ಚಿತ್ರದುರ್ಗದ ಕಾದಂಬರಿಕಾರ ಡಿ.ಸಿ.ಪಾಣಿ ಅವರಿಗೆ ವ್ಯಾಕ್ಸಿನ್ ಪ್ರಯೋಗ ಮಾಡಲಾಗಿದೆ.
ಹೌದು. ಕೋವಿಡ್-19 ಲಸಿಕೆಯನ್ನು ಹಿರಿಯೂರು ಪಟ್ಟಣದ ಕಾದಂಬರಿಕಾರ ಡಿ.ಸಿ.ಪಾಣಿ ಅವರ ಮೇಲೆ ಪ್ರಯೋಗ ಮಾಡಲಾಗಿದೆ. ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಮೊದಲನೇ ಹಂತದ ಪ್ರಾಯೋಗಿಕ ಲಸಿಕೆಯನ್ನು ಪಡೆದಿರುವ ಪಾಣಿಯವರು ಸ್ವಯಂ ಪ್ರೇರಿತರಾಗಿ ಈ ಲಸಿಕೆ ಪಡೆದಿದ್ದಾರೆ. ಇವರಿಗೆ ಡಾ.ಪಾರಿತೋಷ್.ವಿ.ದೇಸಾಯಿ ಅವರು ವಿಶೇಷ ಫಾರ್ಮಜೆಟ್ ಮೆಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಪಾಣಿ, ನಮ್ಮ ದೇಶದಲ್ಲೇ ಲಸಿಕೆ ಉತ್ಪಾದನೆಯಾಗುವ ಮೂಲಕ ಶೀಘ್ರದಲ್ಲೇ ಕೋವಿಡ್ ಅಂತ್ಯವಾಗಲಿ ಎಂಬ ಸದುದ್ದೇಶದಿಂದ ಈ ಪ್ರಯೋಗಕ್ಕೆ ಒಳಗಾಗಿದ್ದೇನೆ. ಲಸಿಕೆ ಪಡೆಯುವಾಗ ನನಗೆ ಯಾವುದೇ ಭಯವಾಗಲಿಲ್ಲ. ಅಲ್ಲದೆ ಈ ಪ್ರಾಯೋಗಿಕ ಲಸಿಕೆ ಯಶಸ್ವಿಯಾದರೆ ನಮ್ಮ ದೇಶಕ್ಕೆ ಬಂದಿರುವ ಕಂಟಕ ದೂರವಾಗಲಿದೆ ಎಂಬ ಆಶಾಭಾವದಿಂದ ಈ ಪ್ರಯೋಗಕ್ಕೆ ಒಳಗಾದೆ. ಪ್ರಯೋಗ ಯಶಸ್ವಿಯಾದರೆ ನನ್ನ ಜನ್ಮಸಾರ್ಥಕ ಎನಿಸಲಿದೆ ಎಂದರು.
ಹೈದರಾಬಾದ್‍ನ ಭಾರತ ಬಯೋಟೆಕ್ ಕೋವ್ಯಾಕ್ಸಿನ್ ಸಂಸ್ಥೆ ಈ ಲಸಿಕೆ ಸಿದ್ಧಪಡಿಸಿದ್ದು, ದೇಶದ ವಿವಿಧ ಭಾಗಗಳಲ್ಲಿ ಪ್ರಯೋಗ ನಡೆಸುತ್ತಿದೆ. ಇದರ ಭಾಗದಲ್ಲಿ ರಾಜ್ಯದಲ್ಲಿ ಸಹ ಪ್ರಯೋಗ ನಡೆಸಿದೆ.