ಭಾಸ್ಕರ್ ರಾವ್ ಅವರನ್ನು ರಾಜ್ಯ ಗೃಹ ಇಲಾಖೆ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಕೊರೋನಾ ನಿಯಂತ್ರಣ ಉಸ್ತುವಾರಿ ಅಧಿಕಾರಿಯನ್ನಾಗಿ ನೇಮಕ ಮಾಡಿದೆ.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಮಾಜದಲ್ಲಿ ಆರೋಗ್ಯಕರ ಬೆಳವಣಿಗೆ ತರುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಕೋವಿಡ್ ನಿಯಮ ಪಾಲನೆ ಮಾಡುವುದರ ಜೊತೆಗೆ ಇತರರಿಗೂ ಕೊವಿಡ್ ನಿಯಮದ ಕುರಿತು ಜಾಗೃತಿ ಮೂಡಿಸಿ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಭಾಸ್ಕರ್ ರಾವ್ ಅವರು ತಿಳಿಸಿದರು.
ಕೋವಿಡ್ ನಿಯಮ ಪಾಲನೆ ಕುರಿತು ನಗರದ ಅಂಜುಮನ್ ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ (ಏ.೨೩) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಕೋವಿಡ್ ನಿಯಮ ಪಾಲನೆಗೆ ಪ್ರತಿ ಹಂತದಲ್ಲಿ ನಾವು ಸಹಕಾರ ನೀಡಬೇಕು ಮತ್ತು ಇತರರಿಗೂ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷ ಲಾಕ್ ಡೌನ್ ಜಾರಿಯಿಂದ ಜನರು ಈಗಾಗಲೇ ತೊಂದರೆ ಅನುಭವಿಸಿದ್ದು, ಸದ್ಯದ ಪರಿಸ್ಥಿತಿ ಸುಧಾರಿಸಲು ಕೋವಿಡ್ ನಿಯಮ ಪಾಲನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸರ್ಕಾರದ ಆದೇಶದಂತೆ ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ನಮ್ಮ ಕುಟುಂಬ, ಸಮಾಜ ಹಾಗೂ ದೇಶದ ರಕ್ಷಣೆ ನಮ್ಮೆಲ್ಲರ ಕರ್ತ್ಯವಾಗಿದೆ. ಆರೋಗ್ಯಕರ ಬೆಳವಣಿಗೆ ತರುವಲ್ಲಿ ಸಾರ್ವಜನಿಕರು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕೋವಿಡ್ ಹೆಚ್ಚಾಗಿ ಹರಡುತ್ತಿದ್ದು, ಸಾರ್ವಜನಿಕರು ಜಾಗೃತಿ ವಹಿಸಬೇಕಾಗಿದೆ. ರಂಜಾನ್ ಹಬ್ಬದ ಆಚರಣೆಯ ಜೊತೆಗೆ ಕಡ್ಡಾಯವಾಗಿ ಕೊವಿಡ್ ನಿಯಮ ಪಾಲನೆ ಮಾಡಬೇಕು ಎಂದು ಸೂಚಿಸಿದರು.
ಕೋವಿಡ್ ವಿರುದ್ಧ ಹೋರಾಡುವ ಸಂಕಷ್ಟದ ಸಂದರ್ಭಲ್ಲಿ ಸಾಮಾಜಿಕ ಜಾತಾಣಗಳಲ್ಲಿ ಬರುವ ಕೋಮು ಗಲಭೆ ಸೃಷ್ಟಿಸುವಂತಹ ಪೋಸ್ಟ್ ಗಳಿಗೆ ಜನರು ಗಮನ ಹರಿಸಬಾರದು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆವಹಿಸಬೇಕು ಎಂದು ಭಾಸ್ಕರ್ ರಾವ್ ಅವರು ತಿಳಿಸಿದರು.
ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ನಿಯೋಜನೆ ಮಾಡಲಾಗಿದ್ದು, ಬರುವಂತಹ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ಮಾಡಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು. ಅನಧಿಕೃತವಾಗಿ ಗಡಿ ಪ್ರವೇಶ ಮಾಡದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಾಗರಿಕ ನಾಯಕತ್ವ ಕುರಿತು ಜನರು ನಂಬಿಕೆ ಹೊಂದಿದ್ದು, ಸಮುದಾಯ ಹಾಗೂ ಸಮಾಜದ ಮುಖಂಡರು ಜನಕ್ಕೆ ಕೋವಿಡ್ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಬೇಕು. ಸದ್ಯದಲ್ಲೇ ವಿವಿಧ ಸ್ವಾಮೀಜಿಗಳು ಹಾಗೂ ಮುಖಂಡರನ್ನು ಭೇಟಿ ಮಾಡಿ ಜಾಗೃತಿ ಕುರಿತು ಕರೆ ನೀಡಲು ತಿಳಿಸಲಾಗುವುದು ಎಂದು ಹೇಳಿದರು.
ಸರ್ಕಾರದಿಂದ ಕೋವಿಡ್ ಲಸಿಕೆ ಸೌಲಭ್ಯ ನೀಡಿದ್ದು, ಸಾರ್ವಜನಿಕರು ಲಸಿಕೆ ಪಡೆಯಲು ಆತಂಕ ಪಡುವ ಅವಶ್ಯಕತೆ ಇಲ್ಲ. ವಯೋಮಿತಿ ಆಧಾರದ ಮೇಲೆ ಲಸಿಕೆ ಪಡೆಯುವುದರ ಮೂಲಕ ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬೆಂಗಳೂರು ನಗರದಿಂದ ೧೦೦೦ ರಿಂದ ೧೫೦೦ ಮಾಸ್ಕ್ ಗಳನ್ನು ದಾನಿಗಳು ನೀಡಿದ್ದು, ಬೆಳಗಾವಿಯಲ್ಲಿ ಕೂಡ ದಾನಿಗಳು ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿ ಕೋವಿಡ್ ರೋಗಾಣು ವಿರುದ್ಧ ಹೋರಾಡಲು ಸಹಕಾರ ನೀಡಬೇಕು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಮಾಸ್ಕ್ ಹಂಚಿಕೆ ಮಾಡಿ ಕೋವಿಡ್ ನಿಯಮ ಪಾಲನೆ ಕುರಿತು ತಿಳಿಸಬೇಕು ಎಂದು ಹೇಳಿದರು.
ಕರ್ಫ್ಯೂ ಜಾರಿ: ಅನಾವಶ್ಯಕ ಚಟುವಟಿಕೆಗಳು ನಿಷೇಧ:
ರಾತ್ರಿ ಕರ್ಫ್ಯೂ ಹಾಗೂ ವಾರಂತ್ಯ ಕರ್ಫ್ಯೂ ಜಾರಿಯಲ್ಲಿದ್ದು, ಅನಾವಶ್ಯಕ ಚಟುವಟಿಕೆಗಳು, ಓಡಾಡುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಕ್ರಮಕೈಗೊಳ್ಳಲು ತಿಳಿಸಲಾಗಿದೆ.
ಕರ್ಫ್ಯೂ ಜಾರಿ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ಬಾಕ್ಸ್ ರಚನೆ ಮಾಡಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ವ್ಯಾಪಾರಿಗಳು ಗ್ರಾಹಕರಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಲು ತಿಳಿಸಬೇಕು. ಮಾಸ್ಕ್ ಧರಿಸದೆ ಬಂದ ಗ್ರಾಹಕರಿಗೆ ವ್ಯಾಪಾರಿಗಳು ಸ್ಪಂದಿಸಬಾರದು ಎಂದು ಸೂಚನೆ ನೀಡಿದರು.
ಕರ್ಫ್ಯೂ ಜಾರಿ ಸಮಯದಲ್ಲಿ ಅಂಬುಲೆನ್ಸ್ ಹಾಗೂ ಸಾರ್ವಜನಿಕ ಸಾರಿಗೆಗೆ ಮಾತ್ರ ಸುಗಮ ಸಂಚಾರಕ್ಕೆ ಅವಕಾಶವಿದ್ದು, ಅನಾವಶ್ಯಕವಾಗಿ ಸುತ್ತಾಡಲು ಅವಕಾಶ ಇರುವುದಿಲ್ಲ ಹಾಗೂ ದಿನದಲ್ಲಿ ೩ ರಿಂದ ೪ ಬಾರಿ ಮೈಕ್ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಭಾಸ್ಕರ್ ರಾವ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ