
ಡೈಮಂಡ್ ಬಳೆ ನಾಪತ್ತೆ ಪ್ರಕರಣಕ್ಕೆ ವಿಚಿತ್ರ ತಿರುವು: ಪಕ್ಕದ ರೂಂ ಕೊಡುವ ಬದಲು ಮಹಿಳೆಯ ರೂಂ ಕೊಟ್ಟ ಹೊಟೆಲ್ ಸಿಬ್ಬಂದಿ!
A strange twist to the case of a diamond bangle: a hotel staff who gave a woman's room instead of a side room!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಮ್ಯಾರಿಯೆಟ್ ಹೊಟೆಲ್ ನಲ್ಲಿ ಮಹಿಳೆಯೋರ್ವಳ ವಜ್ರದ ಬಳೆಗಳು ನಾಪತ್ತೆಯಾಗಿರುವ ಪ್ರಕರಣಕ್ಕೆ ವಿಚಿತ್ರ ತಿರುವು ಸಿಕ್ಕಿದೆ.
ಪ್ರವಾಸಕ್ಕೆ ಬಂದಿದ್ದ ಬೇರೆ ಜೋಡಿಗೆ ಪಕ್ಕದ ರೂಂ ಕೊಡುವ ಬದಲು ಮಹಿಳೆಗೆ ನೀಡಿದ್ದ ರೂಂನ್ನೇ ನೀಡಿದ್ದೇ ಈ ಅವಾಂತರಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಬೆಳಗಾವಿಯ ಕಾಕತಿಯಲ್ಲಿರುವ ಮ್ಯಾರಿಯೆಟ್ ಹೊಟೇಲ್ನಲ್ಲಿ ತಂಗಿದ್ದ ಮಹಿಳೆಯೊಬ್ಬರ ಲಕ್ಷಾಂತರ ರೂ. ಮೌಲ್ಯದ ವಜ್ರದ ಬಳೆ ಕಳುವಾಗಿದೆ. ಅವರು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ.
ಹರಿಯಾಣಾ ಗುರಗಾಂವ್ ಮೂಲದ ಶಿಪ್ರಾ ಬಿಜಾವತ್ ಅವರು ಸಕ್ಕರೆ ಕಾರ್ಖಾನೆಗಳ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ಕೆಲಸದ ನಿಮಿತ್ತ ಬೆಳಗಾವಿಗೆ ಮಂಗಳವಾರ ಬೆಳಗ್ಗೆ ಬಂದಿದ್ದರು. ಮ್ಯಾರಿಯೇಟ್ ಹೊಟೇಲ್ನಲ್ಲಿ ರೂಂ ಪಡೆದ ಅವರು ರೂಮಿನಲ್ಲಿ ತಮ್ಮ ಲಗೇಜ್ ಇಟ್ಟು ಕೆಲಸದ ನಿಮಿತ್ತ ಹೊರಗೆ ತೆರಳಿದ್ದರು.
ಬೆಳಗ್ಗೆ ೧೧ ಗಂಟೆಯ ಸುಮಾರಿಗೆ ರೂಮಿನಿಂದ ಹೊರಗೆ ಹೋಗಿದ್ದ ಅವರು ರಾತ್ರಿ ೧೦.೩೦ರ ಸುಮಾರಿಗೆ ವಾಪಸ್ ರೂಮಿಗೆ ಬಂದಾಗ ಶಿಪ್ರಾ ಅವರ ಬ್ಯಾಗ್ ತೆರೆದ ಸ್ಥಿತಿಯಲ್ಲಿತ್ತು. ಅಲ್ಲದೇ ಬೆಡ್ಶೀಟ್ ಮುದುಡಿರುವುದು ಮತ್ತು ಟವೆಲ್ ಸಹ ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಶಿಪ್ರಾ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ವಜ್ರದ ಹರಳಿನ ಬಳೆ ಕಾಣೆಯಾಗಿರುವ ಸಂಗತಿ ಗೊತ್ತಾಗಿದೆ.
ಕೂಡಲೇ ಹೊಟೇಲ್ ಸಿಬ್ಬಂದಿಯನ್ನು ವಿಚಾರಿಸಲಾಗಿ ಅವರು ಈ ರೀತಿ ಆಗಲು ಸಾಧ್ಯವಿಲ್ಲ ಎಂದು ವಾದ ಮಾಡಿದ್ದಾರೆ. ಆದರೆ ಶಿಪ್ರಾ ಅವರು ಹೊಟೇಲ್ ಸಿಸಿ ಟಿವಿ ಫುಟೇಜ್ ಪರಿಶೀಲಿಸುವಂತೆ ಒತ್ತಾಯಿಸಿದಾಗ ಸಿಸಿಟಿವಿ ಪೂಟೇಜ್ ವೀಕ್ಷಿಸಲಾಗಿ ಅದರಲ್ಲಿ ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಶಿಪ್ರಾ ಅವರ ರೂಮಿಗೆ ಪ್ರವೇಶಿಸಿದ್ದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಶಿಪ್ರಾ ಅವರು ಕಾಕತಿ ಪೊಲೀಸ್ ಠಾಣೆಯಲ್ಲಿ ಹೊಟೇಲ್ ವಿರುದ್ಧ ದೂರು ನೀಡಿದ್ದಾರೆ.
ಮೇಕ್ ಮೈ ಟ್ರಿಪ್ ಮೂಲಕ ಪ್ರವಾಸಕ್ಕೆ ಬಂದಿದ್ದ ಬೇರೆ ಪ್ರವಾಸಿಗರಿಗೆ ಹೊಟೆಲ್ ಸಿಬ್ಬಂದಿ ಶಿಪ್ರಾ ಅವರಿಗೆ ನೀಡಿದ್ದ ರೂಂ ನ್ನೇ ಕೀ ತೆರೆದು ಕೊಟ್ಟಿದ್ದಾರೆ. ಅವರು 3 ಗಂಟೆ ಹೊಟೆಲ್ ನಲ್ಲಿದ್ದು ತೆರಳಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಘಟನೆ ತೀವ್ರ ಕುತೂಹಲ ಮೂಡಿಸಿದೆ. ನಿಜವಾಗಿ ಬಳೆಗಳು ನಾಪತ್ತೆಯಾಗಿವೆಯೇ? 3 ಗಂಟೆ ರೂಂ ನಲ್ಲಿದ್ದು ತೆರಳಿದವರು ಬಳೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ? ಎನ್ನುವ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ಸ್ನೇಹಾ ಪಿವಿ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ.
ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ಗ್ರುಪ್ ಸೇರಲು NEWS ಎಂದು ಟೈಪ್ ಮಾಡಿ 8197712235 ನಂಬರ್ ಗೆ ವಾಟ್ಸಪ್ ಮಾಡಿ.
ದಯವಿಟ್ಟು ನಮ್ಮ YouTube ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ