ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿ ಎಸ್ ಆರ್ ಸೌಲಭ್ಯದ ಸಮಗ್ರ ಆನ್ ಲೈನ್ ವೇದಿಕೆ ‘ಆಕಾಂಕ್ಷಾ’ ಪೋರ್ಟಲ್ ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯ ಮಟ್ಟದಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಗಳನ್ನು ಸುಗಮವಾಗಿ ಮುಂದುವರೆಸಲು ಸರ್ಕಾರ ಮತ್ತು ದಾನಿಗಳ ನಡುವೆ ಒಂದು ಪಾರದರ್ಶಕ ಸೇತುವೆಯಾಗಿ ಈ ಪೋರ್ಟಲ್ ಕಾರ್ಯನಿರ್ವಹಿಸಲಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯು ಎನ್ ಡಿ ಪಿ ಯು ಈ ಪೋರ್ಟಲ್ ಸೃಜನೆಯಲ್ಲಿ ನೆರವು ನೀಡಿದ್ದು, ಈ ಪೋರ್ಟಲ್ ನಲ್ಲಿ ಸುಲಭವಾಗಿ ಹಾಗೂ ಪಾರದರ್ಶಕವಾಗಿ ಸಿ ಎಸ್ ಆರ್ ಅನುದಾನ ಬಳಕೆಗೆ ಅನುವು ಮಾಡಿ ಕೊಡಲಾಗಿದೆ ಎಂದರು.
ದೇಶದಲ್ಲಿ ಪ್ರಥಮ ಬಾರಿಗೆ ಇಂತಹ ಪೋರ್ಟಲನ್ನು ಸಿದ್ಧಪಡಿಸಲಾಗಿದ್ದು, ಕೋವಿಡ್ ನಿರ್ವಹಣೆ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಇದು ಪೂರಕವಾಗಿದೆ. ವಿಶ್ವಸಂಸ್ಥೆಯು ನಿಗದಿ ಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ವಿಷನ್ 2030 ನ್ನು ತಯಾರಿಸಲಾಗಿದೆ. ಇದಕ್ಕಾಗಿ ಬೇಡಿಕೆ ಇರುವ 75 ಸಾವಿರ ಕೋಟಿ ರೂ. ಅನುದಾನದ ಪೈಕಿ 61,000 ಕೋಟಿ ರೂ. ಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು..
ಕಳೆದ ಸಾಲಿನಲ್ಲಿ ಆರೋಗ್ಯ ವಲಯದ ಚಟುವಟಿಕೆಗಳಿಗೆ 11,527 ಕೋಟಿ ರೂ. ವೆಚ್ಚ ಮಾಡಿದ್ದು, ಪ್ರಸಕ್ತ ಸಾಲಿಗೆ 11,650 ಕೋಟಿ ರೂ. ಒದಗಿಸಲಾಗಿದೆ. ಕೋವಿಡ್ 19ರ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನಿರ್ಬಂಧದಿಂದ ಬಾಧಿತರಾದವರಿಗೆ 1250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಿಸಲಾಗಿದೆ. ಅಲ್ಲದೆ, 2.06 ಲಕ್ಷ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, 956 ಕೋಟಿ ರೂ. ವೆಚ್ಚ ಭರಿಸಲಾಗುತ್ತಿದೆ. ಕರೋನಾ ಸಂಕಷ್ಟಕ್ಕೆ ನೆರವಾಗಲು ಬಯಸುವವರು ಹಾಗೂ ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು ನೀಡಲು ಬಯಸುವ ದಾನಿಗಳು ಆಕಾಂಕ್ಷಾ ಪೋರ್ಟಲ್ ಮೂಲಕ ನೆರವು ನೀಡಬಹುದಾಗಿದೆ ಎಂದು ತಿಳಿಸಿದರು.
ತಾಲ್ಲೂಕು / ಜಿಲ್ಲಾಮಟ್ಟದ ಆಸ್ಪತ್ರೆಗಳ ಅಭಿವೃದ್ಧಿ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ, ಕೇಂದ್ರ ಸರ್ಕಾರದ ಗುರುತಿಸಿರುವ 2 ಮಹತ್ವಾಕಾಂಕ್ಷೆ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಹಾಗೂ 114 ಹಿಂದುಳಿದ ತಾಲ್ಲೂಕುಗಳಿಗೆ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಜನೋಪಯೋಗಿ ಕಾರ್ಯಗಳಿಗೆ ಬೇಕಾದ ಅಗತ್ಯತೆಗಳನ್ನು ಈಗಾಗಲೇ ವಿವಿಧ ಇಲಾಖೆಯವರು ಆಕಾಂಕ್ಷ ಪೋರ್ಟಲ್‍ನಲ್ಲಿ ಅಳವಡಿಸಿರುತ್ತಾರೆ. ಆದ್ದರಿಂದ ಈ ಪೋರ್ಟಲ್ ಮೂಲಕ ದಾನಿಗಳು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಹಾಗೂ ದರ್ಪನ್ ಪೋರ್ಟಲ್‍ನಲ್ಲಿ ನೋಂದಾಯಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ಆನ್‍ಲೈನ್ ಸಂಪರ್ಕವನ್ನು ಸಾಧಿಸಿ, ತ್ವರಿತವಾಗಿ, ನಾಡಿನ ಜನರಿಗೆ ಈ ಸಂಕಷ್ಟದಲ್ಲಿ ಸಹಕಾರ ನೀಡಬಹುದಾಗಿದೆ ಎಂದು ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ವಿಧಿವಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ