ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ನಾಡಿನಲ್ಲಿ ಸಾಂಸ್ಕೃತಿ ಚಟುವಟಿಕೆ ನಶಿಸುತ್ತಿದೆ. ಯುವಕರು ಶಿಕ್ಷಣದ ಜತೆಗೆ ಕ್ರೀಡೆ, ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆ ಬೆಳೆಸಿಕೊಳ್ಳಬೇಕು ಎಂದು ಡಾ.ಸಂಗಮನಾಥ ಲೋಕಾಪೂರ ಹೇಳಿದರು.
ಇಲ್ಲಿನ ಮೆಥೋಡಿಸ್ಟ್ ಚರ್ಚ್ ಇನ್ ಇಂಡಿಯಾ, ಬೆನನ್-ಸ್ಮಿಥ್ ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ, ಸಂಸ್ಕೃತಿ ಅಗತ್ಯವಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುತ್ತದೆ. ಸರ್ವ ಧರ್ಮದ ವಿದ್ಯಾರ್ಥಿಗಳಿಗೆ ಸಮಾನತೆಯ ಶಿಕ್ಷಣ, ನಾಡಿನ ಸಂಸ್ಕೃತಿಯ ಅರಿವು ಮೂಡಿಸುತ್ತಿರುವ ಬೆನನ್ ಸ್ಮಿಥ್ ಮೆಥೋಡಿಸ್ಟ್ ಕಾರ್ಯ ಶ್ಲಾಘನೀಯ.
ಪಟ್ಟಣದ ನಿವಾಸಿಗಳಾಗಿರುವವರಿಗೆ ಗ್ರಾಮೀಣ ಪ್ರದೇಶದ ಕಾರ್ಯಚಟುವಟಿಕೆ ಕಾಣುವುದು ಗಗನ ಕುಸುಮವಾಗಿದೆ. ಇವುಗಳನ್ನು ಮರುಕಳಿಸಿದ ವಿದ್ಯಾರ್ಥಿಗಳ ಪಾತ್ರ ವಿಭಿನ್ನ.
ಮಣ್ಣಿನಲ್ಲಿ ಹುಟ್ಟಿ ಬೆಳೆದ ನಾವು ಹಳ್ಳಿಯ ಸೊಗಡನ್ನು ಮರೆಯುತ್ತಿದ್ದೇವೆ, ಅದನ್ನು ಬೆಳೆಸಿಕೊಂಡು ನಾಡಿನ ಸಂಸ್ಕೃತಿಗೆ ಉತ್ತೇಜನ ನೀಡುವ ಕಾರ‍್ಯವಾಗಬೇಕು. ಅದಕ್ಕಾಗಿ, ಯುವಕರು ಕೈಜೋಡಿಸಬೇಕಾಗಿದೆ ಎಂದರು.
ವಿದ್ಯಾರ್ಥಿಗಳನ್ನು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸುವುದು ಅವರಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಹೆಚ್ಚಿಸಲಿದೆ. ಈ ಮೂಲಕ ವಿಶ್ವವಿದ್ಯಾಲಯ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜರುಗುವ ಯುವಜನೋತ್ಸವ ಹಾಗೂ ಇನ್ನಿತರ ಸಾಂಸ್ಕೃತಿಕ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಉದ್ಧೇಶ ಸಾಕಾರಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು. ಅಮರಕುಮಾರ ಬೈಬಲ್ ಪಠಿಸಿದರು. ಜಾನ್ ಶಿಖಾಮಣಿ ಪ್ರಾರ್ಥಿಸಿದರು. ರಾಹುಲ್ ಪಾಟೀಲ ಹಾಗೂ ಸಂಗಡಿಗರು ಸ್ವಾಗತಿಸಿ, ಪರಿಚಯಿಸಿದರು. ಅಕ್ಷಯ ಚಂದ್ರಶೇಖರ ಉದ್ಘಾಟಕರ ಹಿತನುಡಿಗಳಾಡಿದರು. ಗೌರವ ಅತಿಥಿ ವಿಜಯ ಎಲೀಷ್, ನಂದಕುಮಾರ ಜೆ. ಆಶೀರ್ವಚನ ನಂದಕುಮಾರ ಜೆ. ಪ್ರೋ ಪಾರ್ವತಿದೇವಿ ಪಾಟೀಲ ನಿರೂಪಿಸಿದರು. ಪ್ರೋ. ಶಿವಲೀಲಾ ಮೂಗಿ ವಂದಿಸಿದರು.
ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ, ಕೋಲಾಟ
ನಗರದ ಬೆನನ್-ಸ್ಮಿಥ್ ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಜಾನಪದ ಕಲೆಗಳು, ಜಾನಪದ ದಿಗ್ಗಜರ ಬದುಕು, ಸಾಧಕರ ಅಧ್ಯಯನ ಕುರಿತು ಹಾಗೂ ವಿವಿಧ ಸಾಂಸ್ಕೃತಿಕ ಭವ್ಯ ಸಂಭ್ರಮೋತ್ಸವ ಮೆರವಣಿಗೆ ನಾಗರಿಕರ ಕಣ್ಮನ ಸೆಳೆದವು.
ಕಾಲೇಜ್ ರೋಡ್ ಖಾಸಗಿ ಹೊಟೇಲದಿಂದ ಬೋಗಾರ ವೃತ್ತದಲ್ಲಿರುವ ಬೆನನ್ ಸ್ಮಿಥ್ ಕಾಲೇಜಿನವರೆಗೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ಜಾನಪದ ಕಲಾ ಪ್ರಕಾರಗಳಾದ ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ನಂದಿಕೋಲು, ಪಟ್ಟ ಕುಣಿತ, ಗೊರವರ ಕುಣಿತ, ಬಯಲಾಟ, ದೊಡ್ಡಾಟ, ಗೀತ ಪ್ರಕಾರಗಳಾದ ಲಾವಣಿ, ಗೀಗಿಪದ, ಸೋಬಾನೆಪದ, ಬೀಸುವಕಲ್ಲಿನ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ