2020ರ ಡಿಸೆಂಬರ್ ನಿಂದ 2021ರ ಮೇ ವರೆಗೆ 3,175 ವಂಚನೆ ಪ್ರಕರಣ ದಾಖಲಾಗಿದ್ದು ಈ ಪೈಕಿ 1312 ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿ ವಂಚಕರ ಕೈ ಸೇರುತ್ತಿದ್ದ 48.24 ಕೋಟಿ ರೂಗಳನ್ನು ವಾಪಸ್ ಪಡೆಯಲಾಗಿದೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಸೈಬರ್ ಅಪರಾಧ ತಡೆಗೆ ಮುಂದಾದ ಬೆಂಗಳೂರು ಪೊಲೀಸರು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕನ್ನಾ ಹಾಕುತ್ತಿದ್ದ ಖದೀಮರಿಗೆ ಬ್ರೇಕ್ ಹಾಕಿ ಬರೋಬ್ಬರಿ 48 ಕೋಟಿ ರೂಪಾಯಿಗಳನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ ಸಿಸ್ಟಂ ಮೂಲಕ ಸೈಬರ್ ಕಳ್ಳರ ಮಾಯಾಜಾಲಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು, ಮೊಬೈಲ್ ಸಿಮ್ ಕಂಪನಿ, ಲಕ್ಕಿ ಡ್ರಾ ಹೆಸರಲ್ಲಿ ಸೈಬರ್ ಕಳ್ಳರು ಕರೆ ಮಾಡಿ ಬ್ಯಾಂಕ್ ಖಾತೆ ವಿವರ, ಕ್ರೆಡಿಟ್, ಡೆಬಿಟ್ ಕಾರ್ಡ್ ವಿವರ ಅಥವಾ ವ್ಯಾಲೆಟ್ ಮಾಹಿತಿ ಪಡೆದು ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಗಳಿಗೆ ಕನ್ನಾ ಹಾಕುತ್ತಿದ್ದಾರೆ.
ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಮಾಂಡ್ ಸೆಂಟರ್ ನಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ ಸಿಸ್ಟಂ ಮೂಲಕ ಸೈಬರ್ ಕಳ್ಳರು, ಗ್ರಾಹಕರ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿಕೊಂಡ ಹಣ ವಾಪಸ್ ಪಡೆಯಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸೈಬರ್ ಕಳ್ಳರಿಂದ ವಂಚನೆಗೊಳಗಾದ ಗ್ರಾಹಕರು ತಕ್ಷಣ 112 ಅಥವಾ 100 ಸಂಖ್ಯೆಗೆ ಕರೆ ಮಾಡಬೇಕು. ಕೃತ್ಯ ನಡೆದ ಕೆಲ ಸಮಯ ಅಂದರೆ ಗೋಲ್ಡನ್ ಅವರ್ ಬಳಸಿಕೊಂಡು ಕಮಾಂಡ್ ಸೆಂಟರ್ ಸಿಬ್ಬಂದಿ ಕಳ್ಳರ ಬ್ಯಾಂಕ್ ಖಾತೆ ಬ್ಲಾಕ್ ಮಾಡಿ, ಸೂಕ್ತ ದಾಖಲೆಗಳನ್ನು ಒದಗಿಸಿ ಬ್ಯಾಂಕ್ ನಿಂದ ಹಣ ವಾಪಸ್ ಪಡೆದು ಸಂಬಂಧಪಟ್ಟವರಿಗೆ ಹಿಂತಿರುಗಿಸಲಾಗುತ್ತದೆ.
2020ರ ಡಿಸೆಂಬರ್ ನಿಂದ 2021ರ ಮೇ ವರೆಗೆ 3,175 ವಂಚನೆ ಪ್ರಕರಣ ದಾಖಲಾಗಿದ್ದು ಈ ಪೈಕಿ 1312 ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿ ವಂಚಕರ ಕೈ ಸೇರುತ್ತಿದ್ದ 48.24 ಕೋಟಿ ರೂಗಳನ್ನು ವಾಪಸ್ ಪಡೆಯಲಾಗಿದೆ ಎಂದು ವಿವರಿಸಿದರು.
ಅನಾಥ ಮಕ್ಕಳೊಂದಿಗೆ ಸಚಿವೆ ಜೊಲ್ಲೆ ಸಂವಾದ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ