Kannada NewsKarnataka NewsLatest
*ಸಿಲಿಂಡರ್ ಸ್ಫೋಟ: ಚಿನ್ನಾಭರಣ, ವಸ್ತುಗಳು ಸೇರಿ ಸಂಪೂರ್ಣ ಮನೆಯೇ ಬೆಂಕಿಗಾಹುತಿ*

ಪ್ರಗತಿವಾಹಿನಿ ಸುದ್ದಿ: ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡು ಇಡೀ ಮನೆ ಬೆಂಕಿಗಾಹುತಿಯಾಗಿದ್ದು, ಮನೆಯಲ್ಲಿದ್ದ ಚಿನ್ನಾಭರಣ, ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಶಿವಮೊಗ್ಗದ ಸಿದ್ದೇಶ್ವರ ನಗರದ ಮನೆಯಲ್ಲಿ ಈ ಘಟನೆ ನಡೆದಿದೆ. ಮಹೇಶ್ ಹಾಗೂ ಮೋಹಿನಿ ದಂಪತಿಯ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಘಟನೆ ವೇಳೆ ದಂಪತಿ ಮನೆಯಲ್ಲಿ ಇರಲಿಲ್ಲ.
ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿದ್ದ 80 ಗ್ರಾಂ ಚಿನ್ನಾಭರಣ, ಧವಸ-ಧಾನ್ಯ, ಬಟ್ಟೆ, ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್, ಪೀಠೋಪಕರಣಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಕ್ಕಪಕ್ಕದ ಮನೆಗಳಿಗೂ ಬೆಂಕಿ ಆವರಿಸಿದ್ದು, ಹಾನಿಯಾಗಿದೆ.


