Karnataka NewsLatestPolitics

*ಪ್ರಾಧಿಕಾರದ ಆದೇಶ ಪ್ರಕಾರ ನೀರು ಕೊಡಲೇಬೇಕಾಗುತ್ತದೆ; ಸುಪ್ರೀಂ ಕೋರ್ಟ್ ಗೆ ಹೋಗುವುದರಿಂದ ಪ್ರಯೋಜನ ಆಗದು: ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸರ್ವಪಕ್ಷ ನಾಯಕರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು….

ಮಳೆ ಕೈ ಕೊಟ್ಟ ಸಂದರ್ಭದಲ್ಲಿ ಕಾವೇರಿ ನದಿ ನೀರಿನ ವಿಚಾರದಲ್ಲಿ ಸಭೆ ಕರೆಯುವ ವಾಡಿಕೆ ಇದೆ. 76 ವರ್ಷಗಳಲ್ಲಿ 25 ಬಾರಿ ಸಭೆ ಕರೆದು ಚರ್ಚೆ ಮಾಡಲಾಗಿದೆ.‌ ನಾನು ಸಿಎಂ ಆಗಿದ್ದ ಅವಧಿಯಲ್ಲಿ ಎರಡು ಬಾರಿ ಸಭೆ ನಡೆದಿದೆ.

ಪ್ರಸ್ತುತ ಕೊಡಗು ಹಾಗೂ ವಯನಾಡ್ ಭಾಗದಲ್ಲಿ ಮಳೆ ಆಗುತ್ತಿದ್ದು ಕಬಿನಿ, ಹಾರಂಗಿ ಜಲಾಶಯ ಭರ್ತಿ ಆಗಿದೆ. ಕೆಆರ್ ಎಸ್ ಅಣೆಕಟ್ಟೆಯಲ್ಲಿ 19 TMC ನೀರಿದೆ. ಎಲ್ ನೀನೋ ಪರಿಣಾಮ ಬರ ಪರಿಸ್ಥಿತಿ ಉಂಟಾಗಿದೆ.

ಕುಡಿಯುವ ನೀರಿಗಾಗಿ ನಾವು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ 39 tmc ಬೇಕಿದೆ.‌ ಹವಾಮಾನ ವರದಿ ಪ್ರಕಾರ ಮಳೆ ಕೊರತೆ ಇದೆ. ಹೀಗಾಗಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಬಾರದು. 40 tmc ಕಾಯ್ದಿರಿಸಬೇಕು.

ಜೊತೆಗೆ ಬೆಳೆಗಳಿಗೆ ಕೂಡಲೇ ನೀರು ಒದಗಿಸುವ ಕೆಲಸ ಆಗಬೇಕು. ನೀರಿನ ಸಂಗ್ರಹಣೆ ಬಗ್ಗೆ ಕೇಂದ್ರ ಸರ್ಕಾರ, ನದಿ ನೀರು ಪ್ರಾಧಿಕಾರ ಹಾಗೂ ತಮಿಳುನಾಡಿಗೆ ಮಾಹಿತಿ ಇದೆ. ಆದರೂ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂಬ ಆರೋಪ ಬಂದಿದೆ. ಇದು ಸುಳ್ಳು.

ಇದ್ದಾಗ ಮಾತ್ರ ತಮಿಳುನಾಡಿಗೆ ಕೊಡಲು ಸಾಧ್ಯ. ಆದರೂ ಪ್ರಾಧಿಕಾರದ ಆದೇಶ ಪ್ರಕಾರ ನೀರು ಕೊಡಲೇಬೇಕಾಗುತ್ತದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವುದರಿಂದ ಪ್ರಯೋಜನ ಆಗದು. ಹಿಂದೆ ಅರ್ಜಿ ವಜಾ ಆಗಿದೆ.

ಸಂಕಷ್ಟ ಪರಿಹಾರ ಸೂತ್ರ ಆಗಲೇಬೇಕು. ಇಲ್ಲದಿದ್ದರೆ ರಾಜ್ಯ ಮತ್ತು ರಾಜ್ಯದ ರೈತರ ಹಿತ ಕಾಯುವುದು ಕಷ್ಟ. ಆಗ ಸರ್ಕಾರ ಸಂಕಷ್ಟಕ್ಕೆ ಗುರಿ ಆಗಬೇಕಾಗುತ್ತದೆ.

ಇದು ಭಾವಾವೇಶದ ವಿಚಾರ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ರೈತರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯ. ಕೇಂದ್ರ ಸರ್ಕಾರ ಅಥವಾ ಸುಪ್ರೀಂ ಕೋರ್ಟ್ ಸಂಕಷ್ಟ ಪರಿಹಾರ ಸೂತ್ರ ರಚನೆ ಮಾಡುವುದು ಅಗತ್ಯ.

ಕೊರತೆ ಸಂದರ್ಭದಲ್ಲಿ ನೀರನ್ನು ನಾಲ್ಕು ರಾಜ್ಯಗಳು ಯಾವ ರೀತಿ ಹಂಚಿಕೊಳ್ಳಬೇಕೆಂಬ ಸೂತ್ರ ಅಗತ್ಯ.

ನಾವು ಸಂಕಷ್ಟ ಪರಿಹಾರ ಸೂತ್ರಕ್ಕೆ ಒತ್ತಾಯಿಸಬೇಕು. ಬೆಳೆಗಳಿಗೆ ನೀರು ಹರಿಸುವುದಿಲ್ಲ ಎಂದಿರುವ ಕಾರಣ ರೈತರಿಗೆ ಪರಿಹಾರ ವಿತರಿಸಬೇಕಿದೆ. ಕಬಿನಿ, ಹಾರಂಗಿ ಜಲಾಶಯ ತುಂಬಿರುವುದರಿಂದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಆದ್ದರಿಂದ ರೈತರ ಬೆಳೆಗಳಿಗೆ ಕೂಡಲೇ ನೀರು ಒದಗಿಸಬೇಕು.

ಈ ವಿವಾದ ಆಗಾಗ ಎದುರಾಗುವುದರಿಂದ ಸರ್ಕಾರಕ್ಕೆ ತಲೆನೋವು ತಪ್ಪಿದ್ದಲ್ಲ. ಹೀಗಾಗಿ ಶಾಶ್ವತ ಹಾಗೂ ವೈಜ್ಞಾನಿಕವಾದ ಪರಿಹಾರ ಸೂತ್ರ ಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button