Latest

ನಿಜಲಿಂಗಪ್ಪ ಬಳಿಕ ಕನ್ನಡಿಗ ಖರ್ಗೆ AICC ಅಧ್ಯಕ್ಷರಾಗಿ ಆಯ್ಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಐಸಿಸಿ ನೂತನ ಅಧ್ಯಕ್ಷರಾಗಿ ಕರ್ನಾಟಕದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದು ಸಂತಸದ ವಿಚಾರ. ಖರ್ಗೆ ಅವರಿಗೆ ಮತ ನೀಡಿದ ಎಲ್ಲಾ ನಾಯಕರಿಗೂ ಧನ್ಯವಾದಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದು ಕರ್ನಾಟಕದ ಹೆಮ್ಮೆ. ಖರ್ಗೆ ಆಯ್ಕೆಯಿಂದ ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಗೆ ಮತ್ತಷ್ಟು ಬಲ ಬಂದಂತಾಗಿದೆ. ನಿಜಲಿಂಗಪ್ಪ ಅವರ ಬಳಿಕ ಕನ್ನಡಿಗ ಖರ್ಗೆ ಅವರಿಗೆ ಎಐಸಿಸಿ ಪಟ್ಟ ಸಿಕ್ಕಿರುವುದು ಖುಷಿಯ ವಿಚಾರ. ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು ಎಂದರು.

ಮಲ್ಲಿಕಾರ್ಜುನ ಖರ್ಗೆ 50 ವರ್ಷಗಳ ಕಾಲ ಸುದೀರ್ಘವಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷ ನಿಷ್ಠೆ, ತ್ಯಾಗ, ಹೋರಾಟದ ಛಲ ಇದ್ದರೆ ಒಳ್ಳೆ ಅವಕಾಶ ಸಿಗುತ್ತೆ ಎಂಬುದಕ್ಕೆ ಖರ್ಗೆ ಅವರೇ ಸಾಕ್ಷಿ ಎಂದು ಹೇಳಿದರು.

ಕಾಂಗ್ರೆಸ್ ಸ್ವಾತಂತ್ರ್ಯ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ. ಪ್ರಜಾಪ್ರಭುತ್ವ ಉಳಿಸಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. 24 ವರ್ಷಗಳ ನಂತರ ಚುನಾವಣೆ ನಡೆದಿದೆ. ಗಾಂಧಿ ಕುಟುಂಬ ಹೊರತಾಗಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಚುನಾವಣೆ ನಡೆಸಲಾಗಿದೆ. 78 ಲಕ್ಷ ಸದಸ್ಯರನ್ನು ನೋಂದಾವಣೆ ಮಾಡಿ ಕಾಂಗ್ರೆಸ್ ದಾಖಲೆ ಬರೆದಿದೆ ಎಂದರು.

ಎಐಸಿಸಿಗೆ ನೂತನ ಅಧ್ಯಕ್ಷರ ಆಯ್ಕೆ ಮೂಲಕ ಇಡೀ ದೇಶಕ್ಕೆ ಕಾಂಗ್ರೆಸ್ ಒಂದು ಸಂದೇಶ ರವಾನೆ ಮಾಡಿದೆ. ಬಿಜೆಪಿ ನಾಯಕರು ಸೇರಿದಂತೆ ವಿಪಕ್ಷದ ಹಲವರು ಟೀಕಿಸುತ್ತಿದ್ದರು. ಆದರೆ ಇಂದು ಕರ್ನಾಟಕಕ್ಕೆ ಶಕ್ತಿ ಬಂದಿದೆ ಮಾತ್ರವಲ್ಲ ಇಡೀ ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದೇವೆ. ಅನಗತ್ಯವಾಗಿ ಮಾತನಾಡುತ್ತಾ ನಮ್ಮ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ಆರೋಗ್ಯವಂತ ವಿಚಾರಗಳ ಬಗ್ಗೆ ಮಾತನಾಡಲಿ? ಬಿಜೆಪಿಯವರು ಖರ್ಗೆ ಬಗ್ಗೆ ಮಾತನಾಡುವುದಾದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಯಾರ ರಿಮೋಟ್ ಕಂಟ್ರೋಲ್ ಎಂದು ಕರೆಯೋಣ? ಎಂದು ತಿರುಗೇಟು ನೀಡಿದರು.

* ಮಾಧ್ಯಮಗೋಷ್ಠಿ ಮುಖ್ಯಾಂಶಗಳು:*

ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಪ್ರಜಾಪ್ರಭುತ್ವ ಉಳಿಸಲು ಶ್ರಮಿಸಿದೆ. ಇದಕ್ಕೆ ಈಗ ಪಕ್ಷದ ಆಂತರಿಕ ಚುನಾವಣೆ ಸಾಕ್ಷಿ. ನಾವು ದೇಶ ಹಾಗೂ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಕೊಂಡಿದ್ದೇವೆ.

24 ವರ್ಷಗಳ ನಂತರ ಪಕ್ಷದಲ್ಲಿ ಚುನಾವಣೆ ನಡೆದಿದೆ. ನಾನು ಈ ಸಂದರ್ಭದಲ್ಲಿ ಮೊದಲು ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ರಾಜ್ಯದ ಜನತೆ ಪರವಾಗಿ, ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಬಹಳ ಕಷ್ಟಕಾಲದಲ್ಲಿ ಅವರು ಪಕ್ಷದ ಜವಾಬ್ದಾರಿ ವಹಿಸಿಕೊಂಡು, ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿ, 10 ವರ್ಷಗಳ ಆಳ್ವಿಕೆಗೆ ಕಾರಣರಾಗಿದ್ದರು. ಆ ಮೂಲಕ ದೇಶಕ್ಕೆ ಶಕ್ತಿ ತುಂಬಿ ಬದಲಾವಣೆ ತಂದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದಾಗ ರಾಹುಲ್ ಗಾಂಧಿ ಅವರು ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನ ತ್ಯಜಿಸಿದರು. ಆಗ ನಮ್ಮ ಕಾರ್ಯಕಾರಿ ಸಮಿತಿ ಸದಸ್ಯರು ಒತ್ತಾಯ ಮಾಡಿದಾಗ ಅವರಿಗೆ ಎಷ್ಟೇ ಸಮಸ್ಯೆ ಇದ್ದರೂ ಸೋನಿಯಾ ಗಾಂಧಿ ಅವರು ಮತ್ತೆ ಪಕ್ಷದ ಜವಾಬ್ದಾರಿ ವಹಿಸಿಕೊಂಡು, ಈಗ ಈ ಚುನಾವಣೆ ನಡೆಸಿದ್ದಾರೆ.

ಗಾಂಧಿ ಕುಟುಂಬವೇ ಪಕ್ಷದ ನೇತೃತ್ವ ವಹಿಸಬೇಕು ಎಂದು ನಾವು ಒತ್ತಾಯಿಸಿದರೂ ಅವರು ಗಾಂಧಿ ಕುಟುಂಬ ಹೊರತಾಗಿ ಬೇರೆಯವರು ನೇತೃತ್ವ ವಹಿಸಬೇಕು ಎಂದು ಸದಸ್ಯತ್ವ ಅಭಿಯಾನ ಹಾಗೂ ಚುನಾವಣೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ 78 ಲಕ್ಷ ಸದಸ್ಯರನ್ನು ಮಾಡಲಾಗಿದೆ. ಇನ್ನು ರಾಜ್ಯದಿಂದ 503 ಮಂದಿ ಪ್ರತಿನಿಧಿಗಳು, ಈ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಪಕ್ಷದ ಶಾಸಕರು ಬೇರೆ ಕಾರ್ಯಕರ್ತರಿಗೆ ಮತದಾನದ ಹಕ್ಕನ್ನು ನೀಡಿರುವ ದಾಖಲೆಗಳು ನಮ್ಮ ರಾಜ್ಯದಲ್ಲಿ ಇದೆ. ಸೋನಿಯಾ ಗಾಂಧಿ ಅವರು ಈ ಚುನಾವಣೆ ನಡೆಸಿದ್ದಾರೆ. ನಾನು ಹಾಗೂ ಸುರೇಶ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ನಿಮ್ಮ ಕುಟುಂಬದವರೇ ಅಧ್ಯಕ್ಷರಾಗಬೇಕು ಎಂದು ಕೇಳಿದಾಗ ಅವರು ನಗುತ್ತಾ, ನಾವು ಈಗಾಗಲೇ ನಿರ್ಧರಿಸಿಯಾಗಿದೆ. ನಿನ್ನೆಯಷ್ಟೇ ಶಶಿತರೂರ್ ಅವರು ಬಂದಿದ್ದರು, ಅವರು ಸ್ಪರ್ಧಿಸುತ್ತಿದ್ದಾರೆ. ನೀವು ನಿಲ್ಲುತ್ತೀರಾ ಎಂದು ತಮಾಷೆ ಮಾಡಿದರು. ನಾನು ಅದಕ್ಕೆ ಈಗಾಗಲೇ ಕೊಟ್ಟಿರುವ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದೆ. ಹೀಗೆ ಪಾರದರ್ಶಕವಾಗಿ ಅವರು ಯಾರ ಪರವೂ ಪ್ರಚಾರ ಮಾಡದೇ ಚುನಾವಣೆ ನಡೆಸಿದ್ದಾರೆ.

ನಿಜಲಿಂಗಪ್ಪನವರ ನಂತರ ದೇಶದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರು ಆಯ್ಕೆಯಾಗಿರುವುದು ನಮ್ಮ ಪಾಲಿಗೆ ಭಾಗ್ಯ. ದೇಶಾದ್ಯಂತ ಮಲ್ಲಿಕಾರ್ಜುನ ಖರ್ಗೆ ಅವರಿಗೆ 7897 ಮತಗಳು ಸಿಕ್ಕಿದ್ದು, ಶಶಿ ತರೂರ್ ಅವರಿಗೆ 1072 ಮತಗಳು ಸಿಕ್ಕಿವೆ. 472 ಮತಗಳು ಅಮಾನ್ಯವಾಗಿವೆ.

ರಾಜ್ಯದ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸುವುದರ ಜತೆಗೆ ಶಶಿತರೂರ್ ಅವರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಕಾರಣ, ಅವರು ಸ್ಪರ್ಧೆ ಮಾಡಿ, ಆರೋಗ್ಯಕರ ಚುನಾವಣೆ, ಪ್ರಜಾಪ್ರಭುತ್ವ ಮೌಲ್ಯ ರಕ್ಷಣೆಯಾಗಿದೆ.

ಖರ್ಗೆ ಅವರು ಸುಮಾರು 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಶಾಸಕರಿಂದ ಹಿಡಿದು ಮಂತ್ರಿಯಾಗಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಾಗಿ, ಲೋಕಸಭೆಗೆ ಆಯ್ಕೆಯಾಗಿ, ಸಚಿವರಾಗಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿ ಶ್ರಮಿಸಿದರೆ ಯಾವ ಹಂತದವರೆಗೂ ಬೇಕಾದರೂ ಬೆಳೆಯಬಹುದು ಎಂಬುದಕ್ಕೆ ಖರ್ಗೆ ಅವರೇ ಸಾಕ್ಷಿ.

ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವ ಮುನ್ನ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದು ಈ ಪಕ್ಷದ ಆಂತರಿಕ ಪ್ರಜಾಪ್ರಭುತ್ವ. ದೇಶದಲ್ಲಿ ಬೇರೆ ಯಾವುದೇ ಪಕ್ಷದಲ್ಲಿ ಇಂತಹ ಚುನಾವಣೆ ನಡೆಯಲು ಸಾಧ್ಯವಿಲ್ಲ. ರಾಜಕೀಯ ವಿರೋಧಿಗಳು ಸಾಕಷ್ಟು ಟೀಕೆ ಮಾಡಿದ್ದಾರೆ. ಬಿಜೆಪಿಯವರು ಗಾಂಧಿ ಕುಟುಂಬ ಎಂದು ಮಾತನಾಡುತ್ತಾರೆ. ಆದರೆ ಬಿಜೆಪಿಯವರು ಒಂದೇ ರಾಜ್ಯಕ್ಕೆ ಎಲ್ಲ ಸ್ಥಾನಗಳನ್ನು ನೀಡಿದ್ದಾರೆ. ಅವರು ಅವರ ಪಕ್ಷದಲ್ಲಿ ಏನಾದರೂ ಮಾಡಿಕೊಳ್ಳಲಿ. ಅವರು ನಮ್ಮ ಬಗ್ಗೆ ಆರೋಗ್ಯಕರ ಟೀಕೆ ಮಾಡುವುದನ್ನು ಬಿಟ್ಟು ಹಳದಿ ಕಣ್ಣಲ್ಲಿ ನೋಡಿಕೊಂಡು ಬರುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇವಲ ಕರ್ನಾಟಕ ರಾಜ್ಯದ ನಾಯಕರು ಎಂದು ಬಿಂಬಿಸುವುದಿಲ್ಲ. ಅವರು ರಾಷ್ಟ್ರೀಯ ನಾಯಕರು. ಅವರು ಅಧ್ಯಕ್ಷರಾಗಿರುವುದರಿಂದ ನಮ್ಮ ರಾಜ್ಯಕ್ಕೆ ದೊಡ್ಡ ಶಕ್ತಿ ಬರುತ್ತದೆ. ಜತೆಗೆ ರಾಷ್ಟ್ರಕ್ಕೆ ದೊಡ್ಡ ಸಂದೇಶ ರವಾನೆಯಾಗಿದೆ.

135 ವರ್ಷಗಳ ಇತಿಹಾಸವುಳ್ಳ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಹಾದಿಯನ್ನು ಎಲ್ಲರೂ ಗಮನಿಸಿದ್ದಾರೆ. ರಾಹುಲ್ ಗಾಂಧಿ ಅವರು ಪಾದಯಾತ್ರೆ ಸಮಯದಲ್ಲೇ ಮತ ಚಲಾಯಿಸಿದ್ದಾರೆ. ದೇಶದ ಎಲ್ಲ ಪಕ್ಷದಲ್ಲಿ ಈ ವ್ಯವಸ್ಥೆ ಇರಬೇಕು. ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಲ್ಲರ ಪರವಾಗಿ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯಕ್ಕೆ ಉತ್ತಮ ಶಕ್ತಿ ದೊರೆಯಲಿದೆ.

ಖರ್ಗೆ ಅವರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗಿರುತ್ತಾರೆ ಎಂಬ ಬಿಜೆಪಿ ಟೀಕೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ‘ಬಿಜೆಪಿಯಲ್ಲಿ ನಡ್ಡಾ ಅವರನ್ನು ಏನೆಂದು ಕರೆಯಬೇಕು. ಅವರು ಚುನಾವಣೆಯಲ್ಲಿ ಗೆದ್ದಿದ್ದರಾ? ಅಮಿತ್ ಶಾ ಯಾವ ರಾಜ್ಯದವರು? ಹೇಗೆ ಆಯ್ಕೆಯಾದರು? ಖರ್ಗೆ ಅವರಿಗೆ ಅವರದೇ ಆದ ಅನುಭವವಿದೆ. ನಾನು ಅಧ್ಯಕ್ಷನಾದ ನಂತರ ಎಲ್ಲ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಪಕ್ಷಬೇಧ ಮರೆತು ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿದರು. ಪಕ್ಷದ ಕಷ್ಟ ಕಾಲದಲ್ಲಿ ಗಾಂಧಿ ಕುಟುಂಬ ಅಧ್ಯಕ್ಷ ಸ್ಥಾನ ವಹಿಸಿಕೊಂಡು 20 ವರ್ಷಗಳ ಕಾಲ ನಿಭಾಯಿಸಿದೆ. ಅವರ ಅನುಭವಗಳನ್ನು ನಿರಾಕರಿಸಲು ಸಾಧ್ಯವೇ? ಕೆಲವು ಸಂದರ್ಭದಲ್ಲಿ ಸಲಹೆ ಪಡೆಯಬೇಕಾಗುತ್ತದೆ. ನಾನು ಕೂಡ ಕೆಲವು ಸಂದರ್ಭಗಳಲ್ಲಿ ಅಲ್ಲಂ ವೀರಭದ್ರಪ್ಪ, ದೇಶಪಾಂಡೆ, ವೀರಪ್ಪ ಮೋಯ್ಲಿ, ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರ ಅಭಿಪ್ರಾಯ ಪಡೆಯುತ್ತೇನೆ. ನೀವು ನಿಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿಯನ್ನು ಹೊರಹಾಕುತ್ತೀರಾ? ಅದೇ ರೀತಿ ಕಾಂಗ್ರೆಸ್ ಕುಟುಂಬದಲ್ಲೂ ನಾವು ಹಿರಿಯರ ಸಲಹೆ ಪಡೆದು ನಮ್ಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದರು

ಖರ್ಗೆ ಅವರ ಆಯ್ಕೆ ಕರ್ನಾಟಕದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗೆ, ‘ನಿಷ್ಠೆ, ಸಮಾಜ, ಹಿರಿತನ, ಪ್ರಜಾಪ್ರಭುತ್ವ ವ್ಯವಸ್ಥೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ರಾಜ್ಯಕ್ಕೆ ಸಿಕ್ಕಿರುವುದು ಶಕ್ತಿಯಲ್ಲವೇ? ಕೇವಲ ರಾಜ್ಯ ಅಥವಾ ದಕ್ಷಿಣ ಭಾರತಕ್ಕೆ ಮಾತ್ರವಲ್ಲ ಅಖಂಡ ಭಾರತಕ್ಕೆ ಖರ್ಗೆಯವರ ಆಯ್ಕೆಯಿಂದ ಶಕ್ತಿ ಬರುತ್ತದೆ’ ಎಂದರು.

ಖರ್ಗೆ ಅವರು ರಾಜ್ಯದಲ್ಲಿ ಮೂರನೇ ಶಕ್ತಿ ಕೇಂದ್ರ ಆಗುತ್ತಾರಾ ಎಂಬ ಪ್ರಶ್ನೆಗೆ, ‘ಮೂರನೇ ಶಕ್ತಿ ಕೇಂದ್ರ ಯಾಕೆ? ಎಐಸಿಸಿ ಅಧ್ಯಕ್ಷರು ಎಂದರೆ ಅದು ಒಂದೇ ಶಕ್ತಿ ಕೇಂದ್ರ’ ಎಂದರು.

ಖರ್ಗೆ ಅವರು ಅಧ್ಯಕ್ಷರಾದ ನಂತರ ಶಿವಕುಮಾರ್ ಶಕ್ತಿಶಾಲಿಯಾಗಿದ್ದಾರಾ ಎಂಬ ಪ್ರಶ್ನೆಗೆ, ‘ಡಿ.ಕೆ. ಶಿವಕುಮಾರ್ ಮಾತ್ರವಲ್ಲ ಪಕ್ಷದ ಎಲ್ಲ ಕಾರ್ಯಕರ್ತರೂ ಹೆಚ್ಚು ಶಕ್ತಿಶಾಲಿ ಆಗಿದ್ದಾರೆ’ ಎಂದರು.

ಟಿಕೆಟ್ ಹಂಚಿಕೆ ವಿಚಾರದಲ್ಲಿ ಖರ್ಗೆ ಅವರಿಗೆ ಹೆಚ್ಚಿನ ಶಕ್ತಿ ಇರಲಿದೆಯೇ ಎಂಬ ವಿಚಾರವಾಗಿ ಕೇಳಿದಾಗ, ‘ಅವರು ವಿರೋಧ ಪಕ್ಷದ ನಾಯಕರಾಗಿದ್ದ ಹಿನ್ನೆಲೆಯಲ್ಲಿ ಅವರು ಪಕ್ಷದ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದಿದ್ದರು. ಈಗ ಉನ್ನತ ಸ್ಥಾನ ಪಡೆದಿದ್ದಾರೆ. ಹೀಗಾಗಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಈ ಹಿಂದೆಯೂ ಅವರ ಅಭಿಪ್ರಾಯಕ್ಕೆ ಅವಕಾಶ ಇತ್ತು. ಈಗಲೂ ಇದೆ’ ಎಂದರು.

ಬಿಜೆಪಿ ಎದುರಿಸುವ ಸವಾಲಿನ ಬಗ್ಗೆ ಕೇಳಿದಾಗ, ‘ಚುನಾವಣೆ ಬರುತ್ತಲೇ ಇರುತ್ತದೆ. ರಾಜಕಾರಣ ಎಂದ ಮೇಲೆ ಎಲ್ಲವನ್ನೂ ಎದುರಿಸಬೇಕು. ಆದರೆ ಬಿಜೆಪಿ ಅವರು ಪಾಲಿಕೆ ಚುನಾವಣೆ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಎದುರಿಸುತ್ತಿಲ್ಲ’ ಎಂದರು.

ರಾಯಚೂರಿನ ಭಾರತ ಜೋಡೋ ಯಾತ್ರೆಗೆ ಪ್ರಿಯಾಂಕಾ ಗಾಂಧಿ ಅವರು ಆಗಮಿಸುತ್ತಾರಾ ಎಂಬ ಪ್ರಶ್ನೆಗೆ, ‘ಭಾರತ ಜೋಡೋ ಯಾತ್ರೆಗಾಗಿ ಸೋನಿಯಾ ಗಾಂಧಿ ಅವರು ಮೂರು ದಿನಗಳ ಕಾಲ ರಾಜ್ಯದಲ್ಲಿ ವಾಸ್ತವ್ಯ ಹೂಡಿ ಇಲ್ಲೇ ದಸರಾ ಹಬ್ಬ ಆಚರಿಸಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದು, ಇನ್ನು ಎರಡು ದಿನಗಳ ಕಾಲ ಹೆಜ್ಜೆ ಹಾಕಲಿದ್ದಾರೆ. ಅವರ ಜತೆಗೆ ಪ್ರಿಯಾಂಕ ಗಾಂಧಿ ಅವರು ಕೂಡ ಹೆಜ್ಜೆ ಹಾಕಲಿದ್ದಾರೆ ಎಂಬ ವಿಶ್ವಾಸ ನನಗಿದೆ’ ಎಂದರು.

2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಖರ್ಗೆ ಅವರಿಗಿದೆಯೇ ಎಂಬ ಪ್ರಶ್ನೆಗೆ, ‘ಕೇವಲ ನಮ್ಮ ರಾಜ್ಯ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಇದೆ. ಕರ್ನಾಟಕ ಕೂಡ ದೇಶದ ಭಾಗ’ ಎಂದರು.

ಕಾಂಗ್ರೆಸ್ ಸರ್ಕಾರದ ಅಕ್ರಮಗಳ ದಾಖಲೆಯನ್ನು ರಾಹುಲ್ ಗಾಂಧಿ ಅವರಿಗೆ ನೀಡುವ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಕೇಳಿದಾಗ, ‘ವಿದ್ಯುತ್ ಇಲಾಖೆ ನಡೆದಿದೆ ಎನ್ನಲಾಗಿರುವ ಅಕ್ರಮದ ಮಾಹಿತಿ ಸಾಕ್ಷಿಗಳನ್ನು ಸಿಬಿಐಗೆ ನೀಡಿ ಎಂದು ನಾನು ಈಗಾಗಲೇ ಘೋಷಿಸಿದ್ದೇನೆ’ ಎಂದು ಉತ್ತರಿಸಿದರು.

AICC ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

https://pragati.taskdun.com/politics/aicc-presidentmallikarjuna-khargeselect/

ವಾಹನ ಚಾಲಕರೇ ಗಮನಿಸಿ; ಇದಿನಿಂದ ಜಾರಿಯಾಗಿದೆ ಹೊಸ ನಿಯಮ

https://pragati.taskdun.com/latest/seat-belt-mandatorydg-igp-praveen-sood/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button