ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಂಗ್ರೆಸ್ ಏನು ಮಾಡುತ್ತೋ ಅದನ್ನೇ ಬಿಜೆಪಿ ಫಾಲೋ ಮಾಡುತ್ತಿದೆ ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿಎ ಬಸವರಾಜ್ ಬೊಮ್ಮಾಯಿ ಅವರು ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಟೀಕಿಸುತ್ತಿದ್ದಾರೆ. ಮಾತನಾಡಲಿ ಬಿಡಿ. ಬಿಜೆಪಿಯವರು ಕಾಂಗ್ರೆಸ್ ಯೋಜನೆಗಳನ್ನೇ ಫಾಲೋ ಮಾಡುತ್ತಿದ್ದಾರೆ ಎಂದು ಹೇಳಿದರು.
ಉರಿಗೌಡ, ನಂಜೇಗೌಡ ಸಿನಿಮಾ ಮಾಡಲು ಹೊರಟ ಬಿಜೆಪಿ ನಾಯಕರ ವಿಚಾರವಾಗಿ ಕಿಡಿಕಾರಿದ ಅವರು, ಬಿಜೆಪಿಯವರು ಇತಿಹಾಸ ತಿರುಚಲು ಹೊರಟಿದ್ದಾರೆ. ವಾಟ್ಸಪ್ ಯುನಿವರ್ಸಿಟಿ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಒಕ್ಕಲಿಗರ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಉರಿಗೌಡ, ನಂಜೇಗೌಡ ಹೆಸರೇ ನಾವು ಕೇಳಿಲ್ಲ, ಇತಿಹಾಸದಲ್ಲಿ ಇರದಿರುವುದನ್ನು ಇದೆ ಎಂದು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಉರಿಗೌಡ, ನಂಜೇಗೌಡ ಇತಿಹಾಸ ಇದೆ ಎನ್ನುತ್ತಿದ್ದಾರೆ. ಅವರಿಬ್ಬರೂ ಒಕ್ಕಲಿಗ ಸಮುದಾಯದ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.
ಇತಿಹಾಸ ತಿರುಚುವಲ್ಲಿ ಬಿಜೆಪಿಯವರದು ಎತ್ತಿದ ಕೈ.
ಬಸವಣ್ಣ, ಕುವೆಂಪು, ನಾರಾಯಣ ಗುರು, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಇತಿಹಾಸ ತಿರಿಚಿದ್ದ ಬಿಜೆಪಿ, ಈಗ ಉರಿಗೌಡ ನಂಜೇಗೌಡ ಎಂಬ ಹೆಸರಲ್ಲಿ ಒಕ್ಕಲಿಗರ ಇತಿಹಾಸ ತಿರುಚುತ್ತಿದ್ದಾರೆ.
ಜಾತಿ, ಕೋಮುಗಳ ನಡುವೆ ದ್ವೇಷ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಟಿಪ್ಪು ಸುಲ್ತಾನ್ ಸತ್ತು ಎರಡು ಶತಮಾನಗಳೇ ಕಳೆದಿವೆ. ಈಗ ಊರಿಗೌಡ, ನಂಜೇಗೌಡರನ್ನು ಬಿಜೆಪಿ ಸೃಷ್ಟಿಸಿದೆ.
ಮಂಡ್ಯ ಜಿಲ್ಲೆಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಾ. ದೇ. ಜವರೇಗೌಡ ಅವರ ಸಂಪಾದಕತ್ವದಲ್ಲಿ ‘ಸುವರ್ಣ ಮಂಡ್ಯ ‘ ಎಂಬ ಸಂಚಿಕೆ ತರಲಾಗಿತ್ತು.
ಅದರ ಪರಿಸ್ಕೃತ ಸಂಚಿಕೆಯಲ್ಲಿ ಸಂಶೋಧಕ ಹ.ಕ. ರಾಜೇಗೌಡರು ಮಂಡ್ಯ ಐವತ್ತು; ಒಂದು ಪಕ್ಷಿ ನೋಟ ಎಂಬ ಲೇಖನ ಬರೆದಿದ್ದರು.
ಅದರಲ್ಲಿ ದೊಡ್ಡನಂಜೆಗೌಡ, ಉರಿಗೌಡ ಎಂಬುವರು ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತಿದ್ದರು ಎಂದು ಉಲ್ಲೇಖಿಸಿದ್ದರು.
ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖ ಮಾಡಿರುವ ಬಗ್ಗೆ ಕೆಲವರು ರಾಜೇಗೌಡರನ್ನು ಪ್ರಶ್ನೆ ಮಾಡಿದಾಗ ಒಕ್ಕಲಿಗರಿಗೆ ಪ್ರಾಮುಖ್ಯತೆ ಸಿಗಲಿ ಎಂದು ಹೀಗೆ ಬರೆದಿದ್ದೇನೆ, ಇರಲಿ ಬಿಡಿ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಸ್ಪಷ್ಟನೆ ನೀಡಲು ಈಗ ಹ.ಕ. ರಾಜೇಗೌಡರು ಜೀವಂತವಾಗಿ ಇಲ್ಲ.
ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿ ಹೊಸ ಇತಿಹಾಸ ಸೃಷ್ಟಿಸಲು ಹೊರಟಿದೆ.
ಅನೇಕ ಇತಿಹಾಸ ತಜ್ಞರು, ಸಂಶೋಧಕರು ಉರಿಗೌಡ, ನಂಜೇಗೌಡ ಕೇವಲ ಕಾಲ್ಪನಿಕ ಪಾತ್ರ ಎಂದು ಹೇಳುತ್ತಿದ್ದರೂ ಬಿಜೆಪಿಯವರು ಮಾತ್ರ ಇದನ್ನು ಬಿಡಲು ರೆಡಿ ಇಲ್ಲ.
ಇತಿಹಾಸದ ಯಾವ ದಾಖಲೆಯಲ್ಲಿ ಉರಿಗೌಡ ನಂಜೇಗೌಡ ಟಿಪ್ಪು ಸುಲ್ತಾನ್ ಕೊಂದರು ಎಂಬುದು ಇದೆ ನೀವೇ ಹೇಳಿ ನೋಡೋಣ.
ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನನನ್ನು ಒಕ್ಕಲಿಗರು ಕೊಂದರು, ಆ ಮೂಲಕ ಒಕ್ಕಲಿಗರು ದೇಶವಿರೋಧಿಗಳು, ಕೊಲೆಗಡುಕರು ಎಂದು ಅವರ ಗೌರವ, ಸ್ವಾಭಿಮಾನಕ್ಕೆ ಮಸಿ ಬಳಿಯಲಾಗುತ್ತಿದೆ.
ಬಿಜೆಪಿಯವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾರನ್ನು ಬೇಕಾದರೂ ಸೃಷ್ಟಿಸುತ್ತಾರೆ, ಯಾರ ಮನೆಯನ್ನು ಬೇಕಾದರೂ ಹಾಳು ಮಾಡುತ್ತಾರೆ.
ಸಿ.ಟಿ ರವಿ ಹಾಗೂ ಅಶ್ವತ್ ನಾರಾಯಣ್ ಎಂಬ ಅವಿವೇಕಿಗಳು ಈ ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಒಕ್ಕಲಿಗ ಸಮುದಾಯದ ವಿರುದ್ಧ ಬೇರೆಯವರನ್ನು ಎತ್ತಿ ಕಟ್ಟುತ್ತಿದ್ದಾರೆ.
ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ಸಚಿವ ಅಶ್ವತ್ ನಾರಾಯಣ ಅವರು ಚಿತ್ರಕತೆ ಬರೆಯುತ್ತಾರಂತೆ.
ಇವರಿಗೆ ಪಾಠ ಮಾಡಿದ ಶಿಕ್ಷಕರೇ ನಾವು ಇವರಿಗೆ ಈ ವಿಚಾರ ಹೇಳುಕೊಟ್ಟಿಲ್ಲದ ಇತಿಹಾಸದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಡಿಸಿದ್ದಾರೆ.
ಟಿಪ್ಪು ಇತಿಹಾಸದ ಬಗ್ಗೆ ರಾಷ್ಟ್ರಪತಿಗಳು ರಾಜ್ಯ ವಿಧಾನಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಟಿಪ್ಪು ಬದುಕು, ಸಾವು, ಸಾಧನೆ ಬಗ್ಗೆ ಹಲವು ಇತಿಹಾಸ ಪುಸ್ತಕಗಳಿವೆ. ಅವುಗಳಲ್ಲಿ ಇಲ್ಲದ ವಿಚಾರವನ್ನು ಇವರು ಸೃಷ್ಟಿಸಿದ್ದಾರೆ.
ಒಕ್ಕಲಿಗ ಸಮುದಾಯದ ಹೆಸರನ್ನು ಬಳಸಿಕೊಂಡು ರಾಜಕೀಯವಾಗಿ ಬೆಳೆಯುತ್ತಿರುವ ಇವರು ಈಗ ಅದೇ ಸಮಾಜದ ಸ್ವಾಭಿಮಾನ ಹಾಗೂ ಘನತೆಗೆ ಮಸಿ ಬಳಿಯುತ್ತಿದ್ದಾರೆ.
ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಹಲವು ಸಂಘಟನೆಗಳು ನನಗೆ ಒತ್ತಡ ಹೇರುತ್ತಿದ್ದು, ಇತಿಹಾಸ ತಿರುಚುವ ಈ ಷಡ್ಯಂತ್ರ ಖಂಡಿಸಿ, ಅದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ.
ಈ ಹೋರಾಟಕ್ಕೆ ಒಕ್ಕಲಿಗ ಸಮುದಾಯದ ಮಾರ್ಗದರ್ಶಕರು, ತಿಲಕಪ್ರಾಯರಾದ ಆದಿಚುಂಚನಗಿರಿಯ ಶ್ರೀಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡುತ್ತೇನೆ.
ಸ್ವಾಮೀಜಿಗಳು ಈ ಹೋರಾಟದ ನೇತೃತ್ವ ವಹಿಸಬೇಕು.
ಒಕ್ಕಲಿಗ ಸಮುದಾಯದ ಮುಖಂಡರ ಸಭೆ ಕರೆದು ಹೋರಾಟದ ರೂಪುರೇಷೆ ಬಗ್ಗೆ ಮಾರ್ಗದರ್ಶನ ಮಾಡಬೇಕು.
ಸ್ವಾಮೀಜಿಗಳು ಈ ವಿಚಾರದಲ್ಲಿ ಯಾರ ಜತೆಗೂ ಸಂದಾನ ಮಾಡಿಕೊಳ್ಳಬಾರದು. ಅವರು ಸಂದಾನಕ್ಕೆ ಕರೆದರೂ ಅದಕ್ಕೆ ಹೋಗಬಾರದು. ಒಂದು ವೇಳೆ ಸಂದಾನಕ್ಕೆ ಮುಂದಾದರೆ ಈ ಒಕ್ಕಲಿಗ ಸಮಾಜಕ್ಕೆ ಅಗೌರವ ಮಾಡಿದಂತೆ ಆಗುತ್ತದೆ.
ಬಿಜೆಪಿ ಅಪಪ್ರಚಾರದ ವಿರುದ್ಧ ಹೋರಾಟ ಮಾಡಿ ಸಮಾಜದ ಸ್ವಾಭಿಮಾನ ಉಳಿಸಿಕೊಳ್ಳಬೇಕು.
ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿಯು ಇತಿಹಾಸ ತಿರುಚಿ, ಜಾತಿ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಪ್ರಯತ್ನದ ವಿರುದ್ಧ ಹೋರಾಟ ಮಾಡಬೇಕು. ಇದು ನಿರ್ಮಲಾನಂದ ಶ್ರೀಗಳು, ನಂಜಾವಧೂತ ಸ್ವಾಮೀಜಿಗಳು ಸೇರಿದಂತೆ ಎಲ್ಲ ಧರ್ಮದ ಶ್ರೀಗಳ ಜವಾಬ್ದಾರಿ.
ಸಿ.ಟಿ ರವಿ ಅವರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಅಪಮಾನ ಮಾಡಿಲ್ಲ. ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿಲ್ಲ ಎಂದು ಹೇಳಿ ಅಪಮಾನ ಮಾಡಿದ್ದಾರೆ. ಈ ವಿಚಾರವಾಗಿ ಮುಂದೆ ಇನ್ನೊಂದು ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲೂ ಆಪರೇಶನ್ ಕಮಲಕ್ಕೆ ಯತ್ನ
ಈ ಸರ್ಕಾರ ತಮ್ಮ ಅನುಕೂಲಕ್ಕಾಗಿ ಎಷ್ಟು ದಿನ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುತ್ತಾರೆ? ಬಳ್ಳಾರಿಯಲ್ಲಿ ಅಧ್ಯಕ್ಷರ ಚುನಾವಣೆ ಮಾಡಲು ಅಧಿಕಾರಿಗಳ ಕೊರತೆ ಇದೆಯಂತೆ. ಇನ್ನು ಬಿಜೆಪಿ ಎಂಎಲ್ಸಿಗೆ ಮತದಾನ ಕ್ಷೇತ್ರ ಬದಲಿಸಿಕೊಳ್ಳುವ ಅವಕಾಶವಿಲ್ಲವಂತೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇದ್ದರೂ ಬಿಜೆಪಿ ಮೇಯರ್ ಆಯ್ಕೆ ಮಾಡಲು ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಏನು ಮಾಡಲು ಹೊರಟಿದ್ದೀರಿ? ಡಿಸಿ ಯಾವ ಕಾರಣಕ್ಕೆ ಇದನ್ನು ಮುಂದೂಡಿದ್ದಾರೆ? ಪ್ರಜಾಪ್ರಭುತ್ವದಲ್ಲಿ ಗೆಲವು ಸಿಗದಿದ್ದಾಗ ಈ ರೀತಿ ಅಧಿಕಾರಿಗಳ ದುರುಪಯೋಗ ಮಾಡಿಕೊಳ್ಳುವುದು ಸರಿಯೇ? ಮಂತ್ರಿಗಳು, ಸರ್ಕಾರದ ಒತ್ತಡಕ್ಕೆ ಮಣಿದು ಆಪರೇಶನ್ ಕಮಲಕ್ಕೆ ಅವಕಾಶ ನೀಡಲು ಪ್ರಯತ್ನಿಸುತ್ತಿರುವ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೊಣೆ ಹೊರಬೇಕಾಗುತ್ತದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಿದೆ.
ಯುವಕ್ರಾಂತಿ:
ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ನಂತರ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಬೆಳಗಾವಿಯಲ್ಲಿ ನಡೆಯುತ್ತಿರುವ ಯುವಕ್ರಾಂತಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.
ರಾಜ್ಯ ಹಾಗೂ ದೇಶದಲ್ಲಿ ಬದಲಾವಣೆ ತರಬೇಕು ಎಂದು ರಾಹುಲ್ ಗಾಂಧಿ ಅವರು ಯುವಕರಿಗೆ ಕರೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜಾತಿ ಧರ್ಮ ಇಲ್ಲದೆ ಯುವಕರು ಹಾಗೂ ಮಹಿಳೆಯರಿಗೆ ಆದ್ಯತೆ ನೀಡಿದೆ. ಈ ಎರಡು ವರ್ಗ ತೀರ್ಮಾನ ಮಾಡಿದರೆ ಬದಲಾವಣೆ ತರಲು ಸಾಧ್ಯವಿದೆ.
ನಾವು ಮಹಿಳಾ ಸಮಾವೇಶ ಮಾಡಿ ನಮ್ಮ ಕಾರ್ಯಕ್ರಮ ಘೋಷಿಸಿದ ನಂತರ ಮುಖ್ಯಮಂತ್ರಿಗಳು ಮಹಿಳೆಯರಿಗೆ ಯೋಜನೆ ಘೋಷಣೆ ಮಾಡಿದರು. ಈಗ ನಾವು ಯುವಕ್ರಾಂತಿ ಕಾರ್ಯಕ್ರಮ ಘೋಷಣೆ ಮಾಡಿದ ನಂತರ ಯುವಕರ ಬಗ್ಗೆ ಯೋಜನೆ ರೂಪಿಸಲು ಮುಂದಾಗಿದೆ.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಕುರಿತು ಬಿಜೆಪಿ ಟೀಕೆ ಮಾಡುತ್ತಿದೆ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಸುಮಾರು 4 ವರ್ಷಗಳ ಕಾಲ ಆಡಳಿತ ನಡೆಸಿರುವ ಬಿಜೆಪಿ ಕಳೆದ ಚುನಾವಣೆ ಸಮಯದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳಲ್ಲಿ ಕೇವಲ 50 ಭರವಸೆ ಈಡೇರಿಸಿದೆ. ಮಹಿಳೆಯರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಯುವಕರಿಗೆ 18 ಭರವಸೆ ನೀಡಿ 17 ಭರವಸೆ ಈಡೇರಿಸಿಲ್ಲ. ಬಿಜೆಪಿ ಸರ್ಕಾರ ಕಳೆದ ಬಜೆಟ್ ನಲ್ಲೂ ಯುವಕರ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ.
ಈಗ ಮುಖ್ಯಮಂತ್ರಿಗಳು ಸ್ತ್ರೀ ಶಕ್ತಿ ಮಾದರಿಯಲ್ಲಿ ಯುವ ಶಕ್ತಿ ಯೋಜನೆಗೆ ಚಾಲನೆ ನೀಡುವುದಾಗಿ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಕಾರ್ಮಿಕರಿಗೆ ಉಚಿತ ಸಾರಿಗೆ, ಸಾಂಪ್ರದಾಯಿಕ ವೃತ್ತಿಪರರಿಗೆ ಪರಿಹಾರ, ಸರ್ವಪಕ್ಷ ಸಭೆ ಸೇರಿದಂತೆ ಎಲ್ಲ ಹಂತದಲ್ಲೂ ಕಾಂಗ್ರೆಸ್ ಆಲೋಚನೆ, ವಿಚಾರಗಳನ್ನು ಬಿಜೆಪಿ ಸರ್ಕಾರ ಅನುಕರಣೆ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಜನಪರ ಕಾರ್ಯಕ್ರಮಗಳ ಬಗ್ಗೆ ಗಮನಹರಿಸಿದರೆ, ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಗಮನಹರಿಸಿದೆ.
ಈ ಸರ್ಕಾರಕ್ಕೆ ಯುವಕರು ಮತ್ತು ಮಹಿಳೆಯರ ಬಗ್ಗೆ ಕಾಳಜಿ ಇಲ್ಲ. ನೇಮಕಾತಿ ಅಕ್ರಮದಲ್ಲಿ ಶಾಸಕರು, ಸಚಿವರು, ಅಧಿಕಾರಿಗಳು ಭಾಗಿಯಾಗುವ ಮೂಲಕ ಸರ್ಕಾರ ಯುವ ಸಮುದಾಯಕ್ಕೆ ದ್ರೋಹ ಬಗೆದಿದೆ. ಇವರು ಭ್ರಷ್ಟಾಚಾರದಲ್ಲಿ ಸಾಕ್ಷಿ ಕೇಳುವಾಗ ಅಗತ್ಯ ಸಾಕ್ಷಿಯನ್ನು ಲೋಕಾಯುಕ್ತ ಸಂಸ್ಥೆ ನೀಡಿದೆ.
ಅಧಿಕಾರ ಇದ್ದಾಗ ಯಾವುದೇ ಕಾರ್ಯಕ್ರಮ ರೂಪಿಸದೆ ಅಧಿಕಾರ ಹೋಗುವ ಸಮಯದಲ್ಲಿ ಕಾರ್ಯಕ್ರಮ ರೂಪಿಸಲು ಮುಂದಾಗುವುದರಿಂದ ಪ್ರಯೋಜನವಿಲ್ಲ.
ಪ್ರಶ್ನೋತ್ತರ:
ಮಂಡ್ಯ ಐವತ್ತು; ಒಂದು ಪಕ್ಷಿ ನೋಟ ಸಂಚಿಕೆಯಲ್ಲಿ ಈ ಇಬ್ಬರ ಹೆಸರು ಪ್ರಸ್ತಾಪವಾಗುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ರಾಮಾಯಣವನ್ನು ಐದಾರು ಆಯಾಮದಲ್ಲಿ ಬರೆಯಲಾಗಿದೆ. ಇತಿಹಾಸ ಎಂದರೆ ನಡೆದಿರುವುದನ್ನು ಸಾಕ್ಷಿ ಸಮೇತ ಬರೆಯುವುದು. ಆದರೆ ಯಾರೋ ಒಬ್ಬರು ತಮ್ಮ ಅನಿಸಿಕೆಯನ್ನು ಪುಸ್ತಕದಲ್ಲಿ ಬರೆದ ಮಾತ್ರಕ್ಕೆ ಅದು ಸತ್ಯ, ಅದೇ ಇತಿಹಾಸ ಎಂದು ಪರಿಣಿಸಲಾಗುವುದಿಲ್ಲ. ಸಂಶೋಧನಾಕಾರರು ಸಂಶೋಧನೆ ಮಾಡಿ ಬರೆಯುವುದು ಇತಿಹಾಸ. ಇತಿಹಾಸ ತಿರುಚುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇದೆ ಕಾರಣಕ್ಕೆ ನಾವು ಡಿಜಿವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದೇವೆ. ಸರ್ಕಾರ ರೈತನನ್ನು ಬದುಕಿಸುವ ಬಗ್ಗೆ ಯೋಚಿಸಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ ಮಾಡುತ್ತಿದ್ದಾರೆ’ ಎಂದರು.
ಉರಿಗೌಡ ನಂಜೇಗೌಡ ವಿರೋಧಿಸುವವರು ದೇಶದ್ರೋಹಿಗಳು ಎಂಬ ಸಿ. ಟಿ ರವಿ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವ ಶೋಭಾ ಕರಂದ್ಲಾಜೆ, ಸಿ.ಟಿ ರವಿ, ಅಶ್ವತ್ ನಾರಾಯಣ ಅವರು ದೇಶ, ರಾಜ್ಯ, ಒಕ್ಕಲಿಗ ಹಾಗೂ ಹಿಂದೂ ವಿರೋಧಿಗಳು’ ಎಂದು ಹರಿಹಾಯ್ದರು.
ಬಿಜೆಪಿಯವರು ನಿಮಗೆ ಪುಸ್ತಕ ಕಳುಹಿಸಿಕೊದುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, ‘ನಾನು ಮಂತ್ರಿಯಾದ ನಂತರ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನನಗೂ ದೇಶ ಹಾಗೂ ರಾಜ್ಯದ ಇತಿಹಾಸ ಗೊತ್ತಿದೆ. ರಾಜ್ಯಕ್ಕಾಗಿ ಮಹಾರಾಜರು, ಟಿಪ್ಪು ಅವರ ತ್ಯಾಗದ ಬಗ್ಗೆ ತಿಳಿದಿದೆ. ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿಗಳು, ರಾಜ್ಯದ ಧರ್ಮಪೀಠಗಳ ತ್ಯಾಗದ ಬಗ್ಗೆ ಗೊತ್ತಿದೆ. ಅವರು ಎಲ್ಲ ವಿಚಾರದಲ್ಲಿ ವಿಫಲವಾಗಿದ್ದು, ಜನರ ಗಮನ ಬೇರೆಡೆ ಸೆಳೆಯಲು ಭಾವನೆಗಳ ಜತೆ ಆಟವಾಡುತ್ತಿದ್ದಾರೆ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಸ್ಪರ್ಧೆಯ ಕ್ಷೇತ್ರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಪಕ್ಷಕ್ಕೆ ಅರ್ಜಿ ಹಾಕಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ಧ ಎಂದು ಹೇಳಿದ್ದಾರೆ. ಉಳಿದ ವಿಚಾರ ಅವರ ಬಳಿ ಕೇಳಬೇಕು ‘ ಎಂದು ತಿಳಿಸಿದರು.
ಮುಖ್ಯಮಂತ್ರಿ ಹುದ್ದೆಗಾಗಿ ನಿಮ್ಮ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಸ್ಪರ್ಧೆ ಇದೆ ಎಂಬ ಪ್ರಶ್ನೆ ಕೇಳಿದಾಗ, ‘ ನಮ್ಮಲ್ಲಿ ಯಾವುದೇ ಸಂಘರ್ಷವಿಲ್ಲ. ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಮುಂದೆ ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ಧವಾಗಿ ನಾವು ನಡೆದುಕೊಳ್ಳುತ್ತೇವೆ ‘ ಎಂದರು.
ನೀವು ಎರಡು ಕಡೆ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ, ‘ ಇಲ್ಲ ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ‘ ಎಂದರು.
ರಮೇಶ್ ಜಾರಕಿಹೊಳಿ ಅವರು ಕನಕಪುರಕ್ಕೆ ಆಗಮಿಸುತ್ತಾರೆ ಎಂದು ಕೇಳಿದಾಗ, ‘ ಅವರಿಗೆ ಶುಭ ಕೋರುತ್ತೇನೆ ‘ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ