ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ. ಅವರಿಗೆ ಶುಭ ಕೋರುತ್ತೇನೆ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಕ್ಷದ ಸಿದ್ಧಾಂತ, ಅಭ್ಯರ್ಥಿ ಆಧರಿಸಿ ಮತ ಕೇಳುತ್ತೇವೆ, ಬೇರೆಯವರ ಸುದ್ದಿ ನಮಗೆ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಸಿದ್ಧಾಂತ, ಅಭ್ಯರ್ಥಿಯನ್ನು ಮುಂದಿಟ್ಟು ಮತ ಕೇಳುತ್ತೇವೆ. ಬೇರೆ ಪಕ್ಷಗಳು ಏನು ಮಾಡುತ್ತಿವೆ ಎಂಬುದು ನಮಗೆ ಬೇಕಾಗಿಲ್ಲ ಎಂದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ಪಡೆಯಲಿದೆ ಎಂಬ ಬಿಜೆಪಿ ನಾಯಕ ವಿಜಯೇಂದ್ರ ಅವರ ಹೇಳಿಕೆಗೆ ಸಂಬಂಧಿಸಿದಂತೆ, ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ. ಅವರಿಗೆ ಶುಭ ಕೋರುತ್ತೇನೆ ಎಂದು ತಿಳಿಸಿದರು.
ಯಾರು ಯಾರ ಜತೆಯಾದರೂ ನೆಂಟಸ್ಥನ, ಸಂಬಂಧ ಬೆಳೆಸಲಿ. ಯಾವುದೇ ಮೈತ್ರಿ ಬೇಕಾದರೂ ಮಾಡಿಕೊಳ್ಳಲಿ. ನಾವು ಅದರ ಬಗ್ಗೆ ಚಿಂತಿಸುವುದಿಲ್ಲ. ನಮ್ಮ ಪಕ್ಷದ ಸಿದ್ಧಾಂತ ಮುಂದಿಟ್ಟು ಅಭ್ಯರ್ಥಿಗೆ ಮತ ಕೇಳುತ್ತೇವೆ ಎಂದರು.
ಇದೇ ವೇಳೆ ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬಿಬಿಎಂಪಿ ಆಯುಕ್ತರು, ಇಲಾಖೆಗಳ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಚಿವರನ್ನು ಬದಲಿಸುವ ಮೂಲಕ ಮುಖ್ಯಮಂತ್ರಿಗಳು ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರದ ಅಸಮರ್ಥತೆಯಿಂದ ರಾಜ್ಯದ ಜನ ನರಳುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ