LatestUncategorized

*ಕನಕಪುರದಲ್ಲಿ ಈ ಚುನಾವಣೆಯ ಮೊದಲ ಮತ್ತು ಕೊನೆಯ ಸಭೆ ನಡೆಸಿದ ಡಿ.ಕೆ.ಶಿವಕುಮಾರ್; ಇದು ಐತಿಹಾಸಿಕ ಸಭೆ ಎಂದು ಬಣ್ಣನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಮಪತ್ರ ಸಲ್ಲಿಸಿದ ನಂತರ ಕನಕಪುರ ಕ್ಷೇತ್ರದಲ್ಲಿ ಮೊದಲ ಮತ್ತು ಕೊನೆಯ ಸಭೆ ನಡೆಸಿದ ಡಿ.ಕೆ.ಶಿವಕುಮಾರ. ಒಂದು ದಿನವೂ ಕ್ಷೇತ್ರದ ಪ್ರಚಾರಕ್ಕೇ ಹೋಗದ ಶಿವಕುಮಾರ ಬಹಿರಂಗ ಪ್ರಚಾರ ಅಂತ್ಯವಾಗುವ ವೇಳೆ ಭಾರಿ ಬಹಿರಂಗ ಸಭೆ ನಡೆಸಿದರು.

ಈ ಬಹಿರಂಗ ಸಭೆ ನನ್ನ ರಾಜಕೀಯ ಜೀವನದ ಐತಿಹಾಸಿಕ ಸಭೆ. ಚುನಾವಣಾ ಪ್ರಚಾರಕ್ಕಾಗಿ ನಾನು ನಿಮ್ಮ ಹಳ್ಳಿಗೆ ಬರಲು ಸಾಧ್ಯವಾಗಿಲ್ಲ. ಕಳೆದ ನಾಲ್ಕು ವರ್ಷಗಳಿಂದ ನಾನು ಕ್ಷೇತ್ರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ನೀವೆಲ್ಲರೂ ನನಗೆ ನೀಡಿದ ಶಕ್ತಿ ನನ್ನನ್ನು ಒಬ್ಬ ಹೋರಾಟಗಾರ ಎಂದು ಗುರುತಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕನಕಪುರದಲ್ಲಿ ಬೃಹತ್ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಅಂಬೆಡ್ಕರ್ ಅವರು ಒಂದು ಮಾತು ಹೇಳಿದ್ದಾರೆ. ನೀನು ಹೋರಾಟ ಮಾಡದಿದ್ದರೂ ಚಿಂತೆಯಿಲ್ಲ. ಆದರೆ ಮಾರಾಟವಾಗಬೇಡ ಎಂದು. ಹೋರಾಟ ಮಾಡುವವನಿಗೆ ಸೋಲಿನ ಭಯ ಇರಲ್ಲ, ಆತ ಗೆದ್ದೇ ಗೆಲ್ಲುತ್ತಾನೆ ಎಂಬ ನಂಬಿಕೆ ನನಗಿದೆ. ನಿವೆಲ್ಲರೂ ಕೊಟ್ಟ ಶಕ್ತಿ ಇಂದು ಇಡೀ ರಾಜ್ಯ ನನ್ನ ಗುರುತಿಸುತ್ತಿದೆ. ನಿಮ್ಮ ಆಶಿರ್ವಾದ ಇಡೀ ರಾಜ್ಯಕ್ಕೆ ಒಂದು ಸಂದೇಶ ನೀಡುತ್ತಿದೆ. ಮೇಕೆದಾಟು ಹೋರಾಟದಲ್ಲಿ ನೀರಿಗಾಗಿ ನಡೆದೆವು. ಬಡವರಿಗೆ ಸಹಾಯ ಮಾಡಲು 5 ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಘೋಷಿಸಿದೆ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ 5 ಯೋಜನೆಗಳನ್ನು ಜಾರಿಗೆ ತರಲಿದೆ ಎಂಬ ಭರವಸೆಯನ್ನು ನೀಡುತ್ತಿದ್ದೇನೆ ಎಂದರು.

ನನಗೆ ಬಿಜೆಪಿಯವರು ಬೇಕಾದಷ್ಟು ಕಿರುಕುಳ ನೀಡಿದರು. ನನ್ನ ಮೇಲೆ ಐಟಿ, ಇಡಿ ಕೇಸ್ಗಳನ್ನು ಹಾಕಿದರು. ಆದರೆ ನಿಮ್ಮ ಆಶಿರ್ವಾದದಿಂದ ಎಲ್ಲವನ್ನೂ ಗೆದ್ದು ಬಂದಿದ್ದೇನೆ. ಎಲ್ಲರೂ ನನ್ನನ್ನು ಕನಕಪುರದ ಬಂಡೆ ಎಂದು ಕರೆಯುತ್ತಾರೆ. ಈ ಬಂಡೆಯನ್ನು ವಿಧಾನಸೌಧದ ಮೆಟ್ಟಿಲನ್ನಾದರೂ ಮಾಡಿ, ಮೂರ್ತಿಯನ್ನಾದರೂ ಮಾಡಿ. ಮೇ 10ರಂದು ಇಲ್ಲಿಂದ ಇಡೀ ದೇಶಕ್ಕೆ ಒಂದು ಸಂದೇಶ ರವಾನೆಯಾಗಬೇಕು. ಭ್ರಷ್ಟ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ ಕಾಂಗ್ರೆಸ್ ಗೆ ಮತ ನೀಡಿ ಎಂದು ಹೇಳಿದರು.

 *ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಚಾರ ಭಾಷಣದ ಮುಖ್ಯಾಂಶಗಳು*

ನನ್ನ ರಾಜಕೀಯ ಜೀವನದಲ್ಲಿ ಇದೊಂದು ಐತಿಹಾಸಿಕ ಸಭೆ. ನಾನು ಕಳೆದ ನಾಲ್ಕು ವರ್ಷಗಳಿಂದ ಹೆಚ್ಚಾಗಿ ನಿಮ್ಮ ಬಳಿ ಬರಲು ಸಾಧ್ಯವಾಗಿಲ್ಲ. ನೀವೆಲ್ಲರೂ ನನ್ನನ್ನು ಸಾಕಿ ಬೆಳೆಸಿದ್ದೀರಿ. ಇಡೀ ರಾಷ್ಟ್ರಕ್ಕೆ ನನ್ನನ್ನು ಹೋರಾಟಗಾರ, ಛಲಗಾರನಾಗಿ ಪರಿಚಯಿಸಿದ್ದೀರಿ.

ನೀನು ಹೋರಾಟ ಮಾಡದಿದ್ದರೂ ಪರವಾಗಿಲ್ಲ, ಆದರೆ ಮಾರಾಟವಾಗಬೇಡ ಎಂದು ಬಾಬಾ ಸಾಹೇಬ ಅಂಬೇಡ್ಕರ್ ಅವರು ಹೇಳಿದ್ದಾರೆ. ಹೋರಾಟ ಮಾಡುವವನು ಗೆದ್ದೆ ಗೆಲ್ಲುತ್ತಾನೆ. ಆತನಿಗೆ ಸೋಲಿನ ಭಯವಿರುವುದಿಲ್ಲ. ನೀವು ನನಗೆ ಕೊಟ್ಟಿರುವ ಶಕ್ತಿಯಿಂದ ಇಡೀ ರಾಜ್ಯ ನನ್ನನ್ನು ಇಂದು ಗುರುತಿಸುತ್ತಿದೆ.

ಮೇಕೆದಾಟು ಯೋಜನೆ ಸಂದರ್ಭದಲ್ಲಿ ನಾವು ನೀರಿಗಾಗಿ ಹೆಜ್ಜೆ ಹಾಕಿದೆವು. ರಾಜ್ಯದ ನಾಯಕರೆಲ್ಲರೂ ಆಗಮಿಸಿದ್ದರು. ಆಗ ಈ ಕ್ಷೇತ್ರದ ಮಹಾಜನತೆ ಕೊಟ್ಟ ಸ್ವಾಗತ, ಗೌರವವನ್ನು ನಮ್ಮ ನಾಯಕರು ಸ್ಮರಿಸುತ್ತಾರೆ. ಅದಕ್ಕಾಗಿ ನಿಮಗೆ ಕೋಟಿ ನಮನ ಸಲ್ಲಿಸುತ್ತೇನೆ.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ. ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ನನ್ನ ನಂಬಿಕೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಮುಖ್ಯ. ನಿಮ್ಮ ಈ ನಂಬಿಕೆಯನ್ನು ನಾನು ಉಳಿಸಿಕೊಂಡು ಹೋಗುತ್ತೇನೆ.

ನಾನು ಇಲ್ಲಿ ಕೇವಲ ಕನಕಪುರದ ಜನರ ಜತೆ ಮಾತ್ರ ಮಾತನಾಡುತ್ತಿಲ್ಲ. ಇಡೀ ರಾಜ್ಯದ ಜನರ ಜತೆ ಮಾತನಾಡುತ್ತಿದ್ದೇನೆ. ಇಂದು ಬೊಮ್ಮಾಯಿ ಅವರು ಬಂದು ಇಲ್ಲಿ ಪ್ರಚಾರ ಭಾಷಣ ಮಾಡಿ ಹೋಗಿದ್ದಾರೆ. ನಾನು ಇಲ್ಲಿ ಕುಮಾರಸ್ವಾಮಿ ಅವರ ವಿರುದ್ಧವಾಗಲಿ, ಬೊಮ್ಮಾಯಿ ಅವರ ವಿರುದ್ಧ ಮಾತನಾಡಲು ಬಯಸುವುದಿಲ್ಲ. ಇಲ್ಲಿ ರಾಜ್ಯದ ಜನರ ಗೆಲ್ಲುವುದಷ್ಟೇ ನನ್ನ ಗುರಿ. ಅಧಿಕಾರ ಸಿಕ್ಕಾಗ ಏನು ಮಾಡಲಿದ್ದೇನೆ ಎಂಬುದು ಮುಖ್ಯ. 

ನನ್ನನ್ನು ಶಾಸಕನಾಗಿ ನೀವು ಆಯ್ಕೆ ಮಾಡಿದಾಗ, ನರೇಗಾ ಕಾರ್ಯಕ್ರಮ ಮೂಲಕ ಅತಿ ಹೆಚ್ಚು ಅನುದಾನ ತಂದು ಪರಿಣಾಮಕಾರಿಯಾಗಿ ಜಾರಿ ಮಾಡಿದ ಕ್ಷೇತ್ರಗಳ ಪೈಕಿ ಅಗ್ರಸ್ಥಾನ ಪಡೆದಿತ್ತು. ನಾನು ಇಂಧನ ಸಚಿವನಾಗಿದ್ದಾಗ ರೈತರಿಗೆ ಉಚಿತ ಟ್ರಾನ್ಸ್ ಫಾರಮ್ ಅಳವಡಿಕೆ ಮಾಡಲಾಗಿತ್ತು. ಕನಕಪುರದ ಅಭಿವೃದ್ಧಿ ಮಾಡೆಲ್ ರಾಜ್ಯಕ್ಕೆ ಮಾದರಿಯಾಗಿತ್ತು. ಈ ಕ್ಷೇತ್ರದ ಜನರ ಬದುಕು ನನಗೆ ಬಹಳ ಮುಖ್ಯ. ರೈತನನ್ನು ಬದುಕಿಸಲು ಕೆರೆ ತುಂಬಿಸುವ ಕೆಲಸ ಮಾಡಿದ್ದೇವೆ, ಶುದ್ಧ ಕುಡಿಯುವ ನೀರಿನ ಯೋಜನೆ ರೂಪಿಸಿದೆವು. ನಂತರ ಇದು ಇಡೀ ರಾಜ್ಯಕ್ಕೆ ಯೋಜನೆಯಾಗಿ ವಿಸ್ತರಣೆಯಾಯಿತು. 

ಈ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂದು ಮಂಜೂರು ಮಾಡಿಸಿದೆ. ಆದರೆ ಬಿಜೆಪಿ ಸರ್ಕಾರ ಅದನ್ನು ಕಸಿದುಕೊಂಡಿತು. ಈ ವಿಚಾರವಾಗಿ ಈ ಕ್ಷೇತ್ರದ ಕಾರ್ಯಕರ್ತನೊಬ್ಬ ಅಶೋಕ್ ಅವರಿಗೆ ನೇರವಾಗಿ ಪ್ರಶ್ನೆ ಮಾಡಿದ್ದನ್ನು ನೋಡಿ ಸಂತೋಷವಾಯಿತು. ಅದಕ್ಕೆ ಅಶೋಕ್ ಉತ್ತರ ನೀಡಲು ಆಗಲಿಲ್ಲ. ಇಲ್ಲಿ ನಾನು ಮಾತ್ರ ಅಭ್ಯರ್ಥಿಯಲ್ಲ. ನಿವೆಲ್ಲರೂ ಅಭ್ಯರ್ಥಿ.

ಕರ್ನಾಟಕ ರಾಜ್ಯ ಅಭಿವೃದ್ಧಿಶೀಲ ರಾಜ್ಯವಾಗಬೇಕು. ರಾಜ್ಯದ ಜನರು ಅನುಭವಿಸುತ್ತಿರುವ ನೋವಿಗೆ ಪರಿಹಾರ ನೀಡಬೇಕು. ರೈತರಿಗೆ ಸರಿಯಾಗಿ ನೀರು ಸೌಲಭ್ಯವಿಲ್ಲ, ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಇದಕ್ಕಾಗಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಮೇಕೆದಾಟು ಯೋಜನೆ ಕೇವಲ ಕನಕಪುರಕ್ಕೆ ಮಾತ್ರವಲ್ಲ. ಇಡೀ ಕಾವೇರಿ ಜಲಾನಯನ ಪ್ರದೇಶಕ್ಕಾಗಿದೆ. ಇಲ್ಲಿ ಸಮುದ್ರ ಸೇರುವ ನೀರನ್ನು ಹಿಡಿದಿಟ್ಟು ಬಳಕೆ ಮಾಡುವುದು ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿಗಳು 1 ಸಾವಿರ ಕೋಟಿ ಬಜೆಟ್ ನಲ್ಲಿ ಘೋಷಿಸಿದರೂ ಒಂದು ರೂಪಾಯಿ ಖರ್ಚು ಮಾಡಿಲ್ಲ. ಡಬಲ್ ಇಂಜಿನ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. 

ಆದರೆ ನೀವು ನನಗೆ ನೀಡುವ ಅವಕಾಶದಲ್ಲಿ ಈ ಯೋಜನೆ ಪ್ರಾರಂಭ ಮಾಡುವ ಶಪಥ ಮಾಡುತ್ತಿದ್ದೇನೆ. ಇನ್ನು ನಿಮ್ಮ ಮಕ್ಕಳು ಶಿಕ್ಷಣಕ್ಕಾಗಿ ಸಾವಿರಾರು ಗ್ರಾಮೀಣ ಪ್ರದೇಶದ ಮಕ್ಕಳು ಬೆಂಗಳೂರಿಗೆ ವಲಸೆ ಹೋಗಿ ಅಲ್ಲಿ ಬಾಡಿಗೆ ಮನೆ, ಪಿಜಿಗಳಲ್ಲಿ ಉಳಿಯುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಇದಕ್ಕಾಗಿ ಒಂದು ವಿಶೇಷವಾದ ಯೋಜನೆ ಇಟ್ಟುಕೊಂಡಿದ್ದು, ಪ್ರತಿ ಪಂಚಾಯ್ತಿ ಕೇಂದ್ರದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡುವಂತೆ ಮಾಡಲು ಸಂಕಲ್ಪ ಮಾಡಿದ್ದೇನೆ.

ಇನ್ನು ಆರೋಗ್ಯದ ವಿಚಾರ. ಸರ್ಕಾರ ನಮ್ಮ ಮೆಡಿಕಲ್ ಕಾಲೇಜು ಕಸಿದುಕೊಂಡಿದೆ. ನನ್ನ ಸ್ನೇಹಿತ ಪ್ರೇಮಚಂದ್ರ ಸಾಗರ್ ಅವರಿಗೆ ಮನವಿ ಮಾಡಿ ಒಂದು ಆಸ್ಪತ್ರೆ ಸ್ಥಾಪಿಸಿದ್ದೇವೆ. ಕೋವಿಡ್ ಸಮಯದಲ್ಲಿ ನಿಮಗೆ ಇದರಿಂದ ಸಹಾಯವಾಗಿದೆ. ಕೋವಿಡ್ ಸಮಯದಲ್ಲಿ ಪ್ರತಿ ಮನೆಗೂ ನಾವು ನೆರವಾಗಿದ್ದೇವೆ. ಕೋವಿಡ್ ಸಮಯದಲ್ಲಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಬೆಡ್ ಹಗರಣ ನಡೆಯಿತು. ಸರ್ಕಾರ ಸತ್ತವರಿಗೆ, ಕೋವಿಡ್ ಚಿಕಿತ್ಸೆ ಪಡೆದವರಿಗೆ, ಅಸಂಘಟಿತ ಕಾರ್ಮಿಕರಿಗೆ, ವ್ಯಾಪಾರಿಗಳಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದೆವು. ಆದರೆ ಸರ್ಕಾರ ಯಾರಿಗೂ ಸಹಾಯ ಮಾಡಲಿಲ್ಲ.

ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ರಾಜ್ಯ ಪ್ರವಾಸ ಮಾಡಿದೆ. ಕೋವಿಡ್ ಸಮಯದಲ್ಲಿ ಕಾರ್ಮಿಕರಿಂದ ಮೂರುಪಟ್ಟು ಟಿಕೆಟ್ ದರ ಮೂಲಕ ಸುಲಿಗೆಗೆ ಮುಂದಾದರು. ಆಗ ನಾನು 1 ಕೋಟಿ ಚೆಕ್ ಅನ್ನು ಪಕ್ಷದ ವತಿಯಿಂದ ನೀಡಿದೆ. ಆಗ ಸರ್ಕಾರ ಎಲ್ಲರಿಗೂ ಉಚಿತ ಸಂಚಾರ ಸೇವೆ ನೀಡಿತು. ಇದು ನೀವು ಕೊಟ್ಟ ಶಕ್ತಿಯಿಂದ ಸಾಕಾರವಾಯಿತು. ಕೋವಿಡ್ ಸಮಯದಲ್ಲಿ ರೈತರ ಜಮೀನಿನಿಂದ ತರಕಾರಿ ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ್ದೇವೆ. 

ಸರ್ಕಾರ ಈ ಕ್ಷೇತ್ರದಿಂದ ಆಸ್ಪತ್ರೆ ಕಿತ್ತುಕೊಂಡ ಹಿನ್ನೆಲೆಯಲ್ಲಿ ಸುರೇಶ್ ಅವರು ಇನ್ಫೋಸಿಸ್ ಜತೆ ಮಾತನಾಡಿ ಇಲ್ಲಿ 50 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಾಯಿ ಮಗು ಆಸ್ಪತ್ರೆ ಸಿದ್ಧವಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದೆಲ್ಲೆಡೆ ಪ್ರತಿ ತಾಲೂಕಿನಲ್ಲಿ ತಾಯಿ ಮಗುವಿನ ಆಸ್ಪತ್ರೆ ಆರಂಭಿಸುವ ಸಂಕಲ್ಪ ಮಾಡಿದ್ದೇವೆ. 

ಇನ್ನು ಉದ್ಯೋಗದ ವಿಚಾರ. ರಾಜ್ಯದ ಎಲ್ಲಾ ಭಾಗದ ಜನರು ಉದ್ಯೋಗಕ್ಕಾಗಿ ಬೇರೆ ಊರಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ಪ್ರತ್ಯೇಕ ನೀತಿ ರೂಪಿಸಲಾಗುವುದು. ನಮ್ಮ ಪ್ರಣಾಳಿಕೆ ಇಡೀ ದೇಶಕ್ಕೆ ಮಾದರಿಯಾಗಿದೆ. ಮೂಲಭೂತ ಸೌಕರ್ಯ ರಸ್ತೆ, ಕುಡಿಯುವ ನೀರಿನ ಸೌಕರ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ರಾಜ್ಯದ ಜನ ನಿಮ್ಮ ತೀರ್ಪಿಗಾಗಿ ಎದುರು ನೋಡುತ್ತಿದೆ. ನೀವು ಎಷ್ಟು ಅಂತರದಿಂದ ನನ್ನನ್ನು ಗೆಲ್ಲಿಸುತ್ತೀರಿ ಎಂದು ರಾಜ್ಯ ಎದುರು ನೋಡುತ್ತಿದ. ಕಳೆದ ಬಾರಿ 79 ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ನನ್ನ ವಿರುದ್ಧ ಈ ಹಿಂದೆ ಸ್ಪರ್ಧಿಸಿದ್ದ ನಾರಾಯಣ ಗೌಡರು, ವಿಶ್ವನಾಥ್, ಹಿರಿಯ ನಾಯಕರು ಪಿಜಿಆರ್ ಸಿಂಧ್ಯಾ ಅವರು ನಮ್ಮ ಜತೆ ಇದ್ದಾರೆ. ಕನಕಪುರ ತಾಲೂಕಿನ ಮಗನಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಆತನಿಗೆ, ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡಬೇಕು ಎಂದು ನಮ್ಮ ಜತೆ ಸೇರಿದ್ದಾರೆ. ನಿಮ್ಮ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ.

ನಿಮ್ಮ ಆಶೀರ್ವಾದ, ನಾನು ನಂಬಿದ ಶಕ್ತಿಯ ಆಶೀರ್ವಾದದಿಂದ ಭ್ರಷ್ಟ ರಹಿತ ಅಧಿಕಾರದ ಮೂಲಕ ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದೇನೆ. ದೇವರು ವರವನ್ನು ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಈ ಅವಕಾಶ ಮೇ 10ರಂದು ನಡೆಯುವ ಮತದಾನದ ಮೂಲಕ ಬರುತ್ತಿದೆ. ಆ ದಿನ ಕೇವಲ ನನಗೆ ಮತ ನೀಡುವುದು ಮಾತ್ರವಲ್ಲ. ಈ ರಾಜ್ಯದ ಭವಿಷ್ಯ ಬದಲಿಸುವ ದಿನ, ನಿಮ್ಮ ಭವಿಷ್ಯ ನೀವೇ ಬರೆಯುವ ದಿನ, ಭ್ರಷ್ಟ ಸರ್ಕಾರವನ್ನು ಬಡಿದೋಡಿಸುವ ದಿನ, ಇಡೀ ದೇಶಕ್ಕ ದೊಡ್ಡ ಸಂದೇಶ ನೀಡುವ ಪವಿತ್ರವಾದ ದಿನ. ಈ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳಬೇಕು.

ಬಿಜೆಪಿಯವರು ನನಗೆ ಕೊಟ್ಟಿರುವ ತೊಂದರೆಗಳನ್ನು ನೀವು ನೋಡಿದ್ದೀರಿ. ನಾನು ಎಂದಾದರೂ ನಿಮ್ಮಿಂದ ಲಂಚ ಪಡೆದಿದ್ದೀನಾ? ಸಾವಿರಾರು ಜನರಿಗೆ ಕೆಲಸ ಕೊಟ್ಟಿದ್ದು, ಯಾರ ಮುಂದೆಯಾದರೂ ಹಣಕ್ಕೆ ಕೈ ಚಾಚಿದ್ದೇನಾ? ಗುತ್ತಿಗೆದಾರರಿಂದ ಹಣ ಪಡೆದಿದ್ದೀನಾ? ನಾನು ಹಣ ಪಡೆದಿದ್ದರೆ ರಾಜಕೀಯ ನೀವೃತ್ತಿ ಪಡೆಯುತ್ತೇನೆ. ನಮ್ಮ ಪಕ್ಷ ಮುಖಂಡನಿಗೆ ರಾಜ್ಯಸಭೆ ಚುನಾವಣೆಯಲ್ಲಿ ಸಹಾಯ ಮಾಡಲು ಹೋದ ಸಂದರ್ಭದಲ್ಲಿ ಐಟಿ ದಾಳಿ ನಡೆಸಿದರು, ಇಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರು. ಆಗ ನೀವು ತೋರಿದ ಪ್ರೀತಿ ವಿಶ್ವಾಸ ನನಗೆ ಶಕ್ತಿ ನೀಡಿದೆ. ಈ ಋಣವನ್ನು ನಾನು ಮರೆಯುವುದಿಲ್ಲ. 

ನಾನು ಅಧ್ಯಕ್ಷ ಅಧಿಕಾರಕ್ಕೆ ತೆಗೆದುಕೊಂಡ ದಿನವೇ ಒಂದು ಮಾತು ಹೇಳಿದ್ದೆ. ನನ್ನನ್ನು ಎಲ್ಲರೂ ಬಂಡೆ ಎಂದು ಕರೆಯುತ್ತೀರಿ. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಬಂಡೆಯನ್ನು ಒಡೆದು ಚಪ್ಪಡಿಕಲ್ಲಾಗಿಯಾದರೂ ಬಳಸಿಕೊಳ್ಳಿ, ಮರಳಾಗಿಯಾದರೂ ಉಪಯೋಗಿಸಿಕೊಳ್ಳಿ, ಜಲ್ಲಿಯಾಗಿಯಾದರೂ ಬಳಸಿಕೊಳ್ಳಿ ಅಥವಾ ವಿಧಾನಸೌಧದ ಮೆಟ್ಟಿಲಾಗಿಯಾದರೂ ಬಳಸಿಕೊಳ್ಳಿ. ಇಲ್ಲಿ ನಾನು ಬಂಡೆಯಲ್ಲ, ಕನಕರಪುರದ ಮಹಾಜನತೆ ನಿಜವಾದ ಬಂಡೆ. ಈ ವಿಚಾರವನ್ನು ನೀವು ಮೋದಿ ಅವರಿಗೆ ತಿಳಿಸಬೇಕು. ಕುಮಾರಸ್ವಾಮಿ ಅವರಿಗೆ ತಿಳಿಸಬೇಕು.

ಕರ್ನಾಟಕ ರಾಜ್ಯ ಅತಿ ಹೆಚ್ಚು ಇಂಜಿನಿಯರ್, ಡಾಕ್ಟರ್ ಗಳನ್ನು ತಯಾರು ಮಾಡುವ ರಾಜ್ಯ. ಐಟಿ ಬಿಟಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ರಾಜ್ಯ. ಅತಿ ಹೆಚ್ಚು ಮೆಡಿಕಲ್ ಕಾಲೇಜು ಇರುವ ರಾಜ್ಯ ನಮ್ಮದು. ಇಡೀ ವಿಶ್ವ ನಮ್ಮ ರಾಜ್ಯದತ್ತ ನೋಡುತ್ತಿದೆ. ನಾನು ರಾಜ್ಯ ಪ್ರವಾಸ ಮಾಡಿದಾಗ ಜನರ ಸಮಸ್ಯೆ ಆಲಿಸಿದೆ. ಅವರ ಸಮಸ್ಯೆಗಳಿಗೆ ಪರಿಹಾರ ನೀಡಲು 5 ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. 

ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯೂನಿಟ್ ಉಚಿತವಾಗಿ ನೀಡಲಾಗುವುದು. ಆಮೂಲಕ ಕನಕಪುರದ ಜನ 200 ಯುನಿಟ್ ವರೆಗೂ ಯಾರೂ ಕರೆಂಟ್ ಬಿಲ್ ಪಾವತಿಸುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ಯುವನಿಧಿ ಕಾರ್ಯಕ್ರಮದ ಮೂಲಕ ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು 2 ವರ್ಷದವರೆಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುವುದು. ಇನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು 5 ರೂ.ನಿಂದ 7 ರೂ.ಗೆ ಏರಿಕೆ ಮಾಡಲಿದ್ದೇವೆ.

ಇಂತಹ ಯೋಜನೆ ಬೊಮ್ಮಾಯಿ ಅವರು, ಅಶೋಕಣ್ಮ, ಕುಮಾರಣ್ಣ ಕೊಟ್ಟಿದ್ದಾರಾ? ಈ ಯೋಜನೆ ಕೊಟ್ಟಿರುವುದು ನೀವು ಸಾಕಿ ಬೆಳಎಸಿರುವ ನಿಮ್ಮ ಮನೆ ಮಗ. ನೀರಾವರಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲಭೂತ ಸೌಕರ್ಯದಲ್ಲಿ ಕಾಂಗ್ರೆಸ್ ಅನೇಕ ಕಾರ್ಯಕ್ರಮ ರೂಪಿಸಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನನಗೆ ನಿಮ್ಮ ಬೆಂಬಲ ಹೆಚ್ಚಿನ ಪ್ರಮಾಣದಲ್ಲಿ ಬೇಕು. ಕಳೆದ ಬಾರಿಗಿಂತ ಹೆಚ್ಚು ಮತ ಹಾಕಬೇಕು. ನೀವೆಲ್ಲರೂ ಕ್ರಮಸಂಖ್ಯೆ 5, ಹಸ್ತದ ಗುರುತಿಗೆ ಮತ ಹಾಕಿ. ಇದು ನನ್ನ ಗೆಲುವಲ್ಲ, ಇದು ನಿಮ್ಮ, ನಿಮ್ಮ ಕ್ಷೇತ್ರದ ಸ್ವಾಭಿಮಾನ, ನಿಮ್ಮ ಮನೆ ಮಗನ ಗೆಲುವಾಗಿದೆ.

*ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರ ಪ್ರಚಾರ ಭಾಷಣದ ಮುಖ್ಯಾಂಶಗಳು*

ಈ ಚುನಾವಣೆ ಕನಕಪುರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆ. ನೀವು ಸಾಕಿ ಬೆಳೆಸಿದ ಮನೆ ಮಗ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ನಿಮ್ಮ ಆಶೀರ್ವಾದದಿಂದ ಪಕ್ಷ ಸಂಘಟನೆ ಮಾಡಿ, ಕೊನೆಯದಾಗಿ ನಿಮ್ಮ ಮುಂದೆ ಬಂದಿದ್ದಾರೆ. ಈ ಚುನಾವಣೆಯನ್ನು ರಾಜ್ಯದ ಮತದಾರರು ನೋಡುತ್ತಿದ್ದಾರೆ. ನಿಮ್ಮ ಮನೆ ಮಗನ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ನೋಡುತ್ತಿದ್ದಾರೆ. ಅವರಿಗೆ ಕನಕಪುರದಿಂದ ಸಂದೇಶ ನೀಡಬೇಕಾಗಿದೆ. 

ಬಿಜೆಪಿಯವರು ವಕ್ರದೃಷ್ಟಿ ಇಟ್ಟುಕೊಂಡು ಕನಕಪುರಕ್ಕೆ ಬಂದಿದ್ದು, ಇವರಿಗೆ ತಕ್ಕ ಪಾಠ ಕಲಿಸಬೇಕಾದರೆ, ಮುಂದಿನ ಚುನಾವಣೆಯಲ್ಲಿ ಶಿವಕುಮಾರ್ ಅವರಿಗೆ ಹೆಚ್ಚಿನ ಬೆಂಬಲ ನೀಡಬೇಕು. ಡಿ.ಕೆ. ಶಿವಕುಮಾರ್ ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಈ ಶಕ್ತಿ ಪ್ರತಿ ಕುಟುಂಬದಲ್ಲೂ ಒಬ್ಬೊಬ್ಬ ಶಿವಕುಮಾರ್ ಇದ್ದಾರೆ ಎಂಬ ಸಂದೇಶವನ್ನು ನೀವು ನೀಡಬೇಕು. ನಿಮ್ಮ ಮನೆ ಮಗ ರಾಜ್ಯದ ಅತ್ಯುನ್ನತ ಸ್ಥಾನಕ್ಕೆ ಹೋಗುವ ಅವಕಾಶವಿದ್ದು, ನೀವೆಲ್ಲರೂ ಆಶೀರ್ವಾದ ಮಾಡಬೇಕು. ನಮ್ಮಿಂದ ಯಾವುದಾದರೂ ತಪ್ಪಾಗಿದ್ದರೆ, ಕ್ಷಮಿಸಿ. ಈ ತಾಲೂಕು ಹಾಗೂ ರಾಜ್ಯವನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ ನಮ್ಮ, ನಿಮ್ಮ ಮೇಲಿದೆ. ಈ ಚುನಾವಣೆ ರಾಜ್ಯದ ಭವಿಷ್ಯದ ಚುನಾವಣೆಯಾಗಿದ್ದು, ನೀವೆಲ್ಲರೂ ಕ್ರಮಸಂಖ್ಯೆ 5, ಹಸ್ತದ ಗುರುತಿಗೆ ಮತ ಹಾಕಬೇಕು. ಆಮೂಲಕ ಬಿಜಪಿ ಹಾಗೂ ಪ್ರಧಾನಿ ಅವರಿಗೆ ಸಂದೇಶ ರವಾನಿಸಬೇಕು.

https://pragati.taskdun.com/vidhanasabha-electionend-of-open-campaigningdc-nitesh-patil/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button