ಪ್ರಗತಿವಾಹಿನಿ ಸುದ್ದಿ: ಕೂಡ್ಲಿಗಿಯಲ್ಲಿ ನಡೆದ ಪ್ರಜಾಧ್ವನಿ- 2 ಯಾತ್ರೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಬಳ್ಳಾರಿಯ ಚುನಾವಣೆ ಹೊಸ ಬಿರುಗಾಳಿ ಎಬ್ಬಿಸುತ್ತದೆ. ನಮ್ಮ ಅಭ್ಯರ್ಥಿ ತುಕಾರಾಂ ಅವರಿಗೆ ಒಂದು ಸ್ಥಾನ ಇದೆ. ನಾನು ಖಾಲಿ ಕೂತಿದ್ದೇನೆ. ನನಗೊಂದು ಸ್ಥಾನ ಕೊಡಿ ಎಂದು ಶ್ರೀರಾಮುಲು ಅವರು ಕೇಳಿಕೊಂಡಿದ್ದಾರೆ. ಶ್ರೀರಾಮುಲು ಅವರು ಶಾಸಕರಾಗಿದ್ದಾಗ ಯಾಕೆ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದರು? ಎಂದು ನಾನು ಶ್ರೀರಾಮುಲು ಅವರಿಗೆ ಕೇಳಬಯಸುತ್ತೇನೆ. ನೀನು ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ ಕಾರಣಕ್ಕೆ ತಾನೇ ಬಳ್ಳಾರಿ ಗ್ರಾಮಾಂತರದಲ್ಲಿ ಉಪ ಚುನಾವಣೆ ನಡೆದಿತ್ತು , ನೀನು ಮಾತ್ರ ನಿನ್ನ ಅನುಕೂಲಕ್ಕೆ ರಾಜಕಾರಣ ಮಾಡಬಹುದಾ? ಎಂದು ಪ್ರಶ್ನಿಸಿದ್ದಾರೆ.
ಈ ಜಿಲ್ಲೆಯಲ್ಲಿ ಬಿಜೆಪಿಯಿಂದ ಯಾರೇ ಸಂಸದರಾದರೂ ಅವರು ಸಂಸತ್ತಿನಲ್ಲಿ ಜಿಲ್ಲೆ ಪರವಾಗಿ ಧ್ವನಿ ಎತ್ತಲಿಲ್ಲ. ಶಾಂತ ಅವರು, ಶ್ರೀರಾಮುಲು, ದೇವೇಂದ್ರಪ್ಪ ಅವರೂ ಯಾರೂ ಬಾಯಿ ಬಿಡಲೇ ಇಲ್ಲ. ಹೀಗಾಗಿ ನಾವು ವಿದ್ಯಾವಂತ, ಸಭ್ಯ, ಸೌಮ್ಯ ಹಾಗೂ ಶುದ್ಧಹಸ್ತದ ಮಾಜಿ ಸಚಿವರಾಗಿದ್ದ ಅಭ್ಯರ್ಥಿಯನ್ನು ನಾವು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿದ್ದೇವೆ. ಸರಳತೆಗೆ ಮತ್ತೊಂದು ಹೆಸರು ತುಕಾರಾಂ ಎಂದರು.
ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ ಸರ್ಕಾರ ಅಧಿಕಾರದಲ್ಲಿದ್ದಾಗ, ರಾಮುಲು ಮಂತ್ರಿಯಾಗಿದ್ದರು. ಅಧಿಕಾರ ಇದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಡಬಲ್ ಇಂಜಿನ ಸರ್ಕಾರದಲ್ಲಿ ಎಷ್ಟು ಅನುದಾನ ತಂದು? ಎಷ್ಟು ಅಭಿವೃದ್ಧಿ ಮಾಡಿದರು? ರೈತರ ಬದುಕಿನಲ್ಲಿ ಬದಲಾವಣೆ ಆಯ್ತಾ? ಅಚ್ಛೇದಿನ ಬಂತಾ? ನಿಮ್ಮ ಖಾತೆಗೆ 15 ಲಕ್ಷ ಬಂತಾ? ಬಿಜೆಪಿ ನುಡಿದಂತೆ ನಡೆದಿದ್ದಾರಾ? ಎಂದು ಆಲೋಚಿಸಿ. ಕೋವಿಡ್ ಸಮಯದಲ್ಲಿ ನಾವು ಯಡಿಯೂರಪ್ಪ ಅವರ ಬಳಿ ಹೋಗಿ ಇಲ್ಲಿನ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ 10 ಸಾವಿರ ಪರಿಹಾರ ನೀಡಿ ಎಂದು ಬೇಡಿದೆವು. ಇಲ್ಲಿ ಯಾರಿಗಾದರೂ ಒಂದು ರೂಪಾಯಿ ಅವರು ಪರಿಹಾರ ಕೊಟ್ಟಿದ್ದಾರಾ? ನಿರ್ಮಲಾ ಸೀತರಾಮನ್ ಅವರು ಕೋವಿಡ್ ಪ್ಯಾಕೇಜ್ ನಲ್ಲಿ 20 ಲಕ್ಷ ಕೋಟಿ ಘೋಷಣೆ ಮಾಡಿದರು. ನಿಮಗೆ ಅದರಿಂದ ಪ್ರಯೋಜನವಾಯಿತಾ?
ನಿಮ್ಮ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಖನಿಜ ಸಂಪನ್ಮೂಲ ಅಭಿವೃದ್ಧಿ, ಕಾರ್ಮಿಕ ಅಭಿವೃದ್ಧಿ ನಿಧಿ ಅನುದಾನ ಇದೆ. ಅದರಿಂದಾದಾರೂ ಜನರಿಗೆ ಅನುಕೂಲ ಮಾಡಿಕೊಟ್ಟರಾ? ಮಲ್ಲಿಕಾರ್ಜುನ ಖರ್ಗೆ ಅವರು ಈ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಟ್ಟಿರುವ ಕೊಡುಗೆ ಮರೆಯಲು ಸಾಧ್ಯವಿಲ್ಲ. ಕೇಂದ್ರದಲ್ಲಿ ವಾಜಪೇಯಿ ಅವರ ಸರ್ಕಾರದಲ್ಲಿ ಉಪ ಪ್ರಧಾನಿಯಾಗಿದ್ದ ಆಡ್ವಾಣಿ ಅವರು ಕಲ್ಯಾಣ ಕರ್ನಾಟಕಕ್ಕೆ 371 ಜೆ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟದ ಪರಿಣಾಮ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿ ಈ ಭಾಗದ ಮಕ್ಕಳ ಭವಿಷ್ಯ ರೂಪಿಸಲು ನೆರವಾದರು.
371ಜೆ ಮೂಲಕ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ನೀಡಿ ನಿಮಗೆ ಶಕ್ತಿ ತುಂಬಲಾಯಿತು. ಇಡೀ ಭಾರತದಲ್ಲಿ ಯಾರೂ ಮಾಡಲಾಗದ ತೀರ್ಮಾನವನ್ನು ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ನೀಡಿದ್ದಾರೆ. ಇದರಿಂದ ಬಳ್ಳಾರಿ, ಕೊಪ್ಪಳ, ಕಲಬುರ್ಗಿ, ರಾಯಚೂರು, ಯಾದಗಿರಿಗೆ ಶಕ್ತಿ ತುಂಬಿದರು. ಈ ಕಾರ್ಯಕ್ಕೆ ಈ ಭಾಗದ ಜನ ಪಕ್ಷಬೇಧ ಮರೆತು, ಜಾತಿ, ಧರ್ಮ ಬೇಧ ಮರೆತು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು.
ಈ ಮೀಸಲಾತಿಯಿಂದ ಕಲ್ಯಾಣ ಕರ್ನಾಟಕದ ಜನರಿಗೆ ಸಾವಿರಾರು ವೈದ್ಯರು, ಇಂಜಿನಿಯರ್ ಗಳನ್ನು ಮಾಡಲಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಲಾಗುತ್ತಿದೆ. ನಾಗೇಂದ್ರ, ತುಕಾರಾಂ ಸೇರಿದಂತೆ ಎಲ್ಲಾ ಶಾಸಕರು ನಿಮ್ಮ ವಿಚಾರವಾಗಿ ಚರ್ಚೆ ಮಾಡುತ್ತಾರೆ. ಇದಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಲಾಗುತ್ತಿದೆ.
ಇನ್ನು ತುಂಗಭದ್ರಾ ನದಿ ನೀರು ಬಳಸಲು ನವಿಲೆಯಲ್ಲಿ ಅಣೆಕಟ್ಟು ಕಟ್ಟಲು ನಾವು ಮುಂದಾಗಿದ್ದೇವೆ. ಇದಕ್ಕಾಗಿ ನಮ್ಮ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿದ್ದು, ಚುನಾವಣೆ ನಂತರ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಜತೆ ಚರ್ಚೆ ಮಾಡಿ ರೈತರ ಬದುಕು ರಕ್ಷಣೆಗೆ ಈ ನೀರನ್ನು ಬಳಸಲಾಗುವುದು.
ಬಡವರಿಗಾಗಿ ಕಾರ್ಯಕ್ರಮ ರೂಪಿಸಲಿದ್ದರೆ ಅದು ಕಾಂಗ್ರೆಸ್ ಪಕ್ಷ. ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಮೋದಿ ಗ್ಯಾರಂಟಿಯಿಂದ ನಿಮ್ಮ ಹೊಟ್ಟೆ ತುಂಬುತ್ತಿದೆಯೇ? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ನಮ್ಮ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಿದೆವು. ಗೃಹಜ್ಯೋತಿ ಯೋಜನೆ ಮೂಲಕ ನಿಮ್ಮ ಮನೆಗೆ 200 ಯೂನಿಟ್ ವರೆಗೂ ವಿದ್ಯುತ್ ಉಚಿತವಾಗಿ ಸಿಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮಹಿಳೆಯಗೆ ಪ್ರತಿ ತಿಂಗಳು 2 ಸಾವಿರ ಹಣ ನೀಡಲಾಗುತ್ತಿದೆ. ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆ ಮೂಲಕ 5 ಕೆ.ಜಿ ಅಕ್ಕಿ. ಉಳಿದ 5 ಕೆ.ಜಿ ಅಕ್ಕಿಯ ಮೊತ್ತ ನೀಡಲಾಗುತ್ತಿದೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ.
ಯಡಿಯೂರಪ್ಪ, ಬೊಮ್ಮಾಯಿ ಅವರು ಇಂತಹ ಯಾವುದಾದರೂ ಒಂದು ಯೋಜನೆ ನೀಡಿದ್ದಾರಾ? ಆಹಾರ ಭದ್ರತಾ ಕಾಯ್ದೆ, ಉಳುವವನೇ ಭೂಮಿಯ ಒಡೆಯ, ಬ್ಯಾಂಕುಗಳ ರಾಷ್ಟ್ರೀಕರಣ, 371ಜೆಯಂತಹ ಕ್ರಾಂತಿಕಾರಿ ಯೋಜನೆ ತಂದವರು ಕಾಂಗ್ರೆಸ್. ಕಾಂಗ್ರೆಸ್ ಶಾಸಕರು ಆಯ್ಕೆಯಾದ ನಂತರ ಈ ಭಾಗದಲ್ಲಿ ಶಾಂತಿ ನೆಲೆಸಿದೆ, ದಬ್ಬಾಳಿಕೆ, ಲೂಟಿ ನಿಂತಿದೆ. ಹೀಗಾಗಿ ನೀವು ಎಚ್ಚರಿಕೆಯಿಂದ ಇರಬೇಕು. ಈ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ಸೋನಿಯಾ ಗಾಂಧಿ ಅವರಿಗೆ ರಾಜಕೀಯವಾಗಿ ಆಶ್ರಯ ನೀಡಿದ ಕೋಟೆ. ತುಕಾರಾಂ ನಮ್ಮ ಪಕ್ಷದ ಆಸ್ತಿ. ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ. ಇಡೀ ಸರ್ಕಾರ ಅವರ ಬೆನ್ನೆಲುಬಾಗಿ ನಿಲ್ಲುತ್ತದೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಗ್ಯಾರಂಟಿ ಕಾರ್ಡಿಗೆ ಸಹಿ ಹಾಕಿದ್ದಾರೆ. ಐದು ನ್ಯಾಯ ಯೋಜನೆಯಲ್ಲಿ 25 ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವಾರ್ಷಿಕ 1 ಲಕ್ಷ ಹಾಗು ತರಬೇತಿ, 25 ಲಕ್ಷದ ವರೆಗೆ ಆರೋಗ್ಯ ವಿಮೆ, ರೈತರ ಸಾಲಮನ್ನಾ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವ ಗ್ಯಾರಂಟಿ ನೀಡಿದ್ದೇವೆ. ನಾವು ನುಡಿದಂತೆ ನಡೆಯುತ್ತೇವೆ. ವಿಜಯೇಂದ್ರ ಅವರು ಈ ಗ್ಯಾರಂಟಿ ತಾತ್ಕಾಲಿಕ ಎಂದಿದ್ದಾರೆ. ಈ ಗ್ಯಾರಂಟಿ ಯೋಜನೆ ನಿಲ್ಲಿಸಲು ವಿಜಯೇಂದ್ರನ ಹಣೆಯಲ್ಲಿ ಬರೆದಿಲ್ಲ. ನೀವು ನಮಗೆ ಆಶೀರ್ವಾದ ಮಾಡಿ. ಇಲ್ಲಿ ತುಕಾರಾಂ ಅವರಿಗಿಂತ ನೀವೇ ಇಲ್ಲಿ ಅಭ್ಯರ್ಥಿಯಾಗಿದ್ದೀರಿ. ನೀವು ಹೋರಾಟ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ