*ಕನಕಪುರ ಜನರ ಅಹವಾಲು ಆಲಿಸಿ, 1500 ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಮಾಡಿದ ಡಿಸಿಎಂ ಡಿ ಕೆ ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಕನಕಪುರ: ಹಾರೋಹಳ್ಳಿವರೆಗೂ ಬರುತ್ತಿರುವ ಬಿಎಂಟಿಸಿ ಬಸ್ ಅನ್ನು ಕನಕಪುರದವರೆಗೂ ವಿಸ್ತರಿಸಿ.., ನಮ್ಮ ಜಮೀನಿಗೆ ದಾರಿ ಬುಡ್ತಿಲ್ಲ ನೋಡಿ.., ನಮ್ಮ ಜಮೀನಲ್ಲಿ ಉಳುಮೆ ಮಾಡಲು ಫಾರೆಸ್ಟ್ ಅಧಿಕಾರಿಗಳು ತೊಂದರೆ ಕೊಡ್ತಾ ಅವ್ರೆ.., ಕುರಿ-ಮೇಕೆ ಸಾಕೋಕೆ ಸಾಲ ಕೊಡ್ಸಿ.., ನಂದು ಒಂದು ಕಾಲಿಲ್ಲ, ಮೂರು ಚಕ್ರದ ಗಾಡಿ ಕೊಡ್ಸಿ…ಕನಕಪುರ ಜನಸಂಪರ್ಕ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಜನರಿಂದ ಬಂದ ದೂರುಗಳ ಸ್ಯಾಂಪಲ್ ಇದು.
ಎಲ್ಲ ದೂರುಗಳನ್ನು ಸಾವಧಾನವಾಗಿ ಆಲಿಸಿದ ಡಿಸಿಎಂ ಅವರು ದೂರು/ ಅರ್ಜಿಗಳ ಮೇಲೆ ಸೂಚನೆ ಬರೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರ ಕಲ್ಪಿಸಲು ಸ್ಥಳದಲ್ಲೇ ಸೂಚನೆ ನೀಡಿದರು.
ಬಹುತೇಕ ದೂರುಗಳು ಖಾತೆ ಬದಲಾವಣೆ, ಉದ್ಯೋಗ, ಮನೆ, ಬ್ಯಾಂಕ್ ಸಾಲ, ಆಸ್ತಿ ದಾಖಲೆ ಪತ್ರಗಳ ಬದಲಾವಣೆ, ಪೋಡಿ, ಪೌತಿ ಖಾತೆಗೆ ಸಂಬಂಧಪಟ್ಟದ್ದು ಆಗಿತ್ತು.
ಡಿಸಿಎಂ ಅವರು ಬೆಳಗಿನಿಂದ ಸಂಜೆವರೆಗೂ ಇಡೀ ದಿನ ಕನಕಪುರದ ಅಂಬೇಡ್ಕರ್ ಭವನದಲ್ಲಿ ಕುಳಿತು ಸುಮಾರು 1500 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದರು.
ಸಂಸದ ಡಿ ಕೆ ಸುರೇಶ್ ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಜನಸಂಪರ್ಕ ಸಭೆಗಳನ್ನು ಮಾಡಿ ಪರಿಹಾರ ಒದಗಿಸಿರುವುದರಿಂದ ಬಹುತೇಕ ಸಮಸ್ಯೆಗಳು ಬಗೆಹರಿದಿವೆ ಎಂದೂ ಹಲವರು ಹೇಳಿದರು.
ಶ್ರೀರಕ್ಷಾ ಎಂಬ ಯುವತಿ, ಕೆಲಸ ಮತ್ತು ವಿದ್ಯಾಭ್ಯಾಸ ನಿಮಿತ್ತ ಬಹಳಷ್ಟು ಮಂದಿ ನಿತ್ಯ ಬೆಂಗಳೂರಿಗೆ ಓಡಾಡುತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಅಡಿ ಬರುವ ದುಡ್ಡು, ಮೆಟ್ರೋ ರೈಲಿಗೆ ಖರ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿಂದ ಹಾರೋಹಳ್ಳಿವರೆಗೆ ಇರುವ ಬಿಎಂಟಿಸಿ ಬಸ್ ಸೌಲಭ್ಯವನ್ನು ಕನಕಪುರದವರೆಗೆ ವಿಸ್ತರಿಸಿ. ಬೆಳಗ್ಗೆ ಮತ್ತು ಸಂಜೆ 20 ಬಸ್ ಗಳ ಸಂಚಾರ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು.
ಡಿಸಿಎಂ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡುವುದಾಗಿ ಭರವಸೆ ನೀಡಿದರು.
ನಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಲು ಅರಣ್ಯ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ಬಹಳ ವರ್ಷಗಳಿಂದ ಉಳುಮೆ ಮಾಡಿತಿದ್ದೀವಿ. ಆದರೆ ಈಗ ತೊಂದರೆ ಆಗುತ್ತಿದೆ ಎಂದು ದೂರಿದವರು ನಿಡಗಲ್ಲು ಗ್ರಾಮದ ಪಾಪಣ್ಣ. ಡಿಸಿಎಂ ಅವರು ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಅವರಿಗೆ ಅರಣ್ಯಧಿಕಾರಿಗಳ ಜತೆ ಮಾತಾಡಿ ಸಮಸ್ಯೆ ಪರಿಹರಿಸಲು ನಿರ್ದೇಶನ ನೀಡಿದರು.
ಟಿ ಬೇಕುಪ್ಪೆಯ ಹೊನ್ನೇಗೌಡ, ಸಂಬೇಗೌಡನ ದೊಡ್ಡಿಯ ಮರೀಗೌಡ ತಾವು ಅಂಗವಿಕಲರಾಗಿದ್ದು, ತ್ರಿಚಕ್ರ ವಾಹನ ಕೊಡಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಡಿಸಿಎಂ ಅವರು ಸೌಲಭ್ಯ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕನಕಪುರದ 25 ಮಂದಿ ಪೌರಾಕಾರ್ಮಿಕರು ತಮಗೊಂದು ಮನೆ ಬೇಕೆಂದು ಮನವಿ ಮಾಡಿದಾಗ ಸಕರಾತ್ಮಕವಾಗಿ ಸ್ಪಂದಿಸಿದರು. ಮತ್ತೊಂದು ಸುತ್ತು ಸಮಾಲೋಚನೆ ನಡೆಸಿ ಮನೆ ಸ್ವರೂಪ ತೀರ್ಮಾನಿಸುವ ಭರವಸೆ ನೀಡಿದರು.
ವೆಂಕಟರಾಯನದೊಡ್ಡಿ ಕೊತಗೊಂಡನಹಳ್ಳಿಯ ಕಾವೇರಿಶೆಟ್ಟಿ ತಮ್ಮ ಜಮೀನಿಗೆ ದಾರಿ ಬಿಡ್ತಿಲ್ಲ ಎಂದು ದೂರಿದಾಗ ಈ ಸಮಸ್ಯೆ ಬಗೆಹರಿಸಿ ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ರಾಮಕೃಷ್ಣಪ್ಪ ಖಾತೆ ಮಾಡಿಕೊಡಲು ಹಣ ಕೇಳ್ತಾರೆ ಅಂದಾಗ, ಹಣ ಕೇಳಿದವನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಹೀಗೆ ಪೌತಿ ಖಾತೆ, ಮನೆ, ಆಸ್ತಿ ದಾಖಲೆ, ಉದ್ಯೋಗ ಸೇರಿದಂತೆ ಹತ್ತು ಹಲವು ಸಮಸ್ಯೆ ಹೊತ್ತು ಬಂದವರಿಗೆ ಪರಿಹಾರ ಸೂಚಿಸಿ ಕಳುಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ