*ದೈಹಿಕ ಶಿಕ್ಷಣ ಶಿಕ್ಷಕರ ಭರ್ತಿ ಮಾಡಿ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ*

ಪ್ರಗತಿವಾಹಿನಿ ಸುದ್ದಿ: ದೈಹಿಕ ಶಿಕ್ಷಣ ಶಿಕ್ಷಕರ ಭರ್ತಿ ಮಾಡಿ, ಹೆಚ್ಚುವರಿ 1 ಲಕ್ಷ ಹುದ್ದೆಗಳು ಸೇರಿದಂತೆ ಒಂದೇ ಬಾರಿಗೆ 1.56 ಲಕ್ಷ ಹುದ್ದೆಗಳ ನೇಮಕ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿದಂತೆ ವಿವಿಧ ಸಂಘಟನೆಗಳು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದವು.
ಕರ್ನಾಟಕ ನಿರುದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳು ಸಿಎಂ ಅವರನ್ನು ಸೋಮವಾರ ಭೇಟಿ ಮಾಡಿ, “ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲೆಗಳಲ್ಲಿ ಖಾಲಿ ಇರುವ ಕ್ರಮವಾಗಿ 3,361, 1,861 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಅನುಮೋದನೆಯಾಗಿರುವ 700 ಹುದ್ದೆಗಳನ್ನೂ ಭರ್ತಿ ಮಾಡಬೇಕು” ಎನ್ನುವ ಬೇಡಿಕೆ ಸೇರಿದಂತೆ 10 ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ನೀಡಿದರು.
ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ, ದೈಹಿಕ ಶಿಕ್ಷಣ ಸಮಗ್ರ ನಿಯಮ, ನೇಮಕಾತಿ ವೇಳೆ ಅಂಕಗಳ ಪರಿಗಣನೆ, ಹಾಸ್ಟಲ್ ವಾರ್ಡನ್ ಹುದ್ದೆಗೆ ಪರಿಗಣನೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಹೆಚ್ಚುವರಿ 1 ಲಕ್ಷ ಹುದ್ದೆಗಳನ್ನು ಭರ್ತಿಗೊಳಿಸಲು ಮನವಿ
ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿ ಭೇಟಿ ಮಾಡಿ, “ಸರ್ಕಾರ ಈಗಾಗಲೇ 56 ಸಾವಿರ ಖಾಲಿ ಹುದ್ದೆಗಳ ನೇಮಕಕ್ಕೆ ಮುಂದಾಗಿದೆ. ಇದರ ಜೊತೆಗೆ ಹೆಚ್ಚುವರಿ 1 ಲಕ್ಷ ಹುದ್ದೆಗಳನ್ನು ಸೇರಿಸಿ ಈ ವರ್ಷ ಡಿಸೆಂಬರ್ ವೇಳೆಗೆ 1.56 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು, ಕೆಪಿಎಸ್ ಸಿ ಭ್ರಷ್ಟಾಚಾರ ಸಂಸ್ಥೆಯಾಗಿದ್ದು ಎಲ್ಲಾ ಸದಸ್ಯರ ತನಿಖೆ ನಡೆಸಬೇಕು ಮತ್ತು ಪಿಡಿಓ ನೇಮಕಾತಿ ಅಕ್ರಮ ತನಿಖೆ ಹಾಗೂ ಮರುಪರೀಕ್ಷೆ ನಡೆಸಬೇಕು” ಎಂದು ಮನವಿ ನೀಡಿದ್ದಾರೆ.
“ವಿದ್ಯುತ್ ಸರಬರಾಜು ಕಂಪೆನಿಗಳನ್ನು ಖಾಸಗಿಯವರ ಕೈಗೆ ಒಪ್ಪಿಸದಂತೆ” ಶಶಿಕಾಂತ್ ಗುರೂಜಿ ಮನವಿ ಮಾಡಿದ್ದಾರೆ.




