*ಕಚೇರಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ; ಪ್ರೈವೇಟ್ ಕ್ಲಬ್, ರೇವು ಪಾರ್ಟಿಗೆ ಬ್ರೇಕ್; ಎಂಎಲ್ಎ, ಎಂಪಿ ಗ್ರ್ಯಾಂಟ್ ಬಗ್ಗೆಯೂ ವಿವರ ದಾಖಲು; ಅಧಿಕಾರಿಗಳಿಗೆ ಡಿಸಿಎಂ ಖಡಕ್ ಸೂಚನೆ*
ಮೂರು ಪಂಚಾಯಿತಿಗೆ ಒಂದು ನವೋದಯ ಸ್ಕೂಲ್
ಪ್ರಗತಿವಾಹಿನಿ ಸುದ್ದಿ; ರಾಮನಗರ: ನಮ್ಮನ್ನು ಜನ ಆಯ್ಕೆಮಾಡಿದ್ದಾರೆ. ಜನರ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಸರ್ಕಾರದ ಸೇವೆ ಮಾಡಲು ನೀವಿದ್ದಿರಿ. ರಾಜಕಾರಣಿಗಳು ಅಧಿಕಾರಿಗಳ ಬಳಿ ಜನ ಬರೋದು ಸಮಸ್ಯೆ ಬಗೆಹರಿಯದೇ ಇದ್ದಾಗ. ಆ ಸಮಸ್ಯೆ ಬಗೆಹರಿಸಬೇಕಾದ್ದು ನಮ್ಮ ಕರ್ತವ್ಯ. ಕಾನೂನು ಚೌಕಟ್ಟಿನೊಳಗೆ ಪರಿಹರಿಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು .
ರಾಮನಗರ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರವನ್ನು ಜನತೆ ಸುಮ್ಮನೆ ಆಯ್ಕೆ ಮಾಡಿಲ್ಲ. ಉತ್ತಮ ಆಡಳಿತ ಕೊಡ್ತೀವಿ ಅಂತ ಆಯ್ಕೆ ಮಾಡಿದ್ದಾರೆ. ಬಿಜೆಪಿ ಆಡಳಿತ ವೈಖರಿಯನ್ನು ನೋಡಿದ್ದಾರೆ. ಅದು ಜನರಿಗೆ ಹತ್ತಿರವಾಗುವ ಆಡಳಿತವಲ್ಲ, ಕರೆಪ್ಷನ್ ಕ್ಯಾಪಿಟಲ್ ಎಂಬ ಕಾರಣಕ್ಕೆ ಬಿಜೆಪಿ ಬದಲಾಯಿಸಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ ಎಂದರು.
ಎಷ್ಟು ಮಂದಿ ಹೆಡ್ ಕ್ವಾರ್ಟರ್ಸ್ ನಲ್ಲಿ ಮನೆ ಮಾಡಿದ್ದೀರಿ, ಕೈ ಎತ್ತಿ. ನಿಮಗೆ ಒಂದು ತಿಂಗಳು ಅವಕಾಶ ಕೊಡ್ತೀನಿ. ಹೆಡ್ ಕ್ವಾರ್ಟರ್ಸ್ ನಲ್ಲೇ ಇದ್ದು ಕೆಲಸ ಮಾಡಬೇಕು. ಹೆಡ್ ಕ್ವಾರ್ಟರ್ಸ್ ಬಿಟ್ಟು ಹೋದರೆ ಡಿಸಿ ಅವರು ನಮಗೆ ಮಾಹಿತಿ ಕೊಡಬೇಕು. ಗ್ರಾಪಂ ನಿಂದ ಜಿಲ್ಲಾಮಟ್ಟದ ಅಧಿಕಾರಿವರೆಗೆ ಎಲ್ಲರೂ ಕೇಂದ್ರಸ್ಥಾನದಲ್ಲೇ ಉಳಿದುಕೊಂಡು ಕೆಲಸ ಮಾಡಬೇಕು.
ನೀವು ಯಾರಿಗೂ ಲಂಚ ಕೊಡಬೇಡಿ. ನೀವೂ ಲಂಚ ತಗೋ ಬೇಡಿ. ನಾನು ಯಾರನ್ನು ವರ್ಗಾವಣೆ ಮಾಡಿಸೋಲ್ಲ. ನಿಮ್ಮತ್ರ ಯಾವ ರೀತಿ ಕೆಲಸ ಮಾಡಿಸಬೇಕು ಎಂದು ಗೊತ್ತಿದೆ. ಔಟ್ ಆಫ್ ದಿ ವೇ ಹೋಗಬೇಡಿ ಎಂದು ತಾಕೀತು ಮಾಡಿದರು.
ಎಲ್ಲಾ ಅಧಿಕಾರಿಗಳ ಫೋನ್ ನಂಬರ್, ವಿಳಾಸದ ಡೈರಿ ಮಾಡಿ, ಅವರ ಫೋಟೋ ಸಮೇತ ಪುಸ್ತಕ ಮಾಡಿ. ಒಂದು ಡಿಸ್ಟ್ರಿಕ್ಟ್ ಗ್ರೂಪ್ ಮಾಡಿ. ಕಚೇರಿಗೆ ಬಂದು ಹೋಗುವವರ ಬಗ್ಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ. ನಾನೇ ಬಯೋಮೆಟ್ರಿಕ್ ಮಷೀನ್ ಕೊಡಿಸ್ತೀನಿ. ಸರ್ಕಾರಿ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸಿ. ಭ್ರಷ್ಟಾಚಾರದ ವಿರುದ್ಧ ಮಾಹಿತಿ ನೀಡಲು ಬೋರ್ಡ್ ಹಾಕಿಸಿ. ಕೆಲವರು ಆರ್ಟಿಇ ಕಾರ್ಯಕರ್ತರ ಹೆಸರಲ್ಲಿ ವಂಚಕರು ಸೇರಿದ್ದಾರೆ. ಅವರಿಗೆ ಹೆದರುವ ಅವಶ್ಯಕತೆ ಇಲ್ಲ ಎಂದರು.
ಯಾವುದೇ ಪ್ರೈವೇಟ್ ಕ್ಲಬ್ ಇರಬಾರದು. ಗಾಂಜಾ, ರೇವಾ ಪಾರ್ಟಿ ಯಾವುದಕ್ಕೂ ಜಿಲ್ಲೆಯಲ್ಲಿ ಅವಕಾಶವಿಲ್ಲ. ಕಾನೂನು ಸುವ್ಯವಸ್ಥೆ ಕಡೆ ಪೊಲೀಸರು ಗಮನಹರಿಸಬೇಕು.
ಬೆಂಗಳೂರಿಂದ ತ್ಯಾಜ್ಯ ತಂದು ರಸ್ತೆಗಳ ಪಕ್ಕ ಸುರಿಯುತ್ತಿದ್ದಾರೆ. ಅಲ್ಲಿಗೆ ಕ್ಯಾಮರಾ ಹಾಕಿ. ಬೇಕಾಬಿಟ್ಟಿ ತ್ಯಾಜ್ಯ ನಿರ್ವಹಣೆಗೆ ಕಡಿವಾಣ ಹಾಕಿ. ಮುಖ್ಯವಾಗಿ ಬೆಂಗಳೂರಿನಿಂದ ಪ್ರವೆಶ ಪಡೆಯುವ ರಾಮನಗರ, ಕನಕಪುರ, ಮಾಗಡಿ ರಸ್ತೆಗಳಿಗೆ ಕ್ಯಾಮರಾ ಹಾಕಿ. ಇದರಿಂದ ಅಪರಾಧ ಚಟುವಟಿಕೆ ತಡೆಗೂ ಸಹಕಾರಿಯಾಗುತ್ತದೆ ಎಂದು ಸೂಚಿಸಿದರು.
ನಮ್ಮ ಸರಕಾರದ 5 ಗ್ಯಾರಂಟಿ ಯೋಜನೆಗಳ ಭ್ರಷ್ಟಾಚಾರ ರಹಿತ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕು. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜಿರೋ ಟಿಕೇಟ್ ಲೆಕ್ಕ ಇಡಿ. ಗೃಹ ಜ್ಯೋತಿ ರಿಜಿಸ್ಟ್ರೇಷನ್ ಗೆ ಕರೆಪ್ಷನ್ ಆಗದಂತೆ ನೋಡಿಕೊಳ್ಳಿ. ಗೃಹಲಕ್ಷ್ಮಿ ಆಪ್ ಸಿದ್ಧ ಮಾಡಿದ್ದೇವೆ. ಯೋಜನೆ ಜಾರಿ ದಿನಾಂಕ ನಾಳೆ ನಿರ್ಧಾರ ಆಗಲಿದೆ. ಪ್ರಜಾಪ್ರತಿನಿಧಿ ವಾಲೆಂಟರೀಸ್ ಜನರಿಗೆ ಸಹಾಯ ಮಾಡಬೇಕು. ಎಲ್ಲವೂ ಉಚಿತ. ಗ್ರಾಮ್ ಒನ್ ನಲ್ಲಿ ಯಾರಾದರೂ ಲಂಚ ಕೇಳಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.
ಯಾವುದೇ ಕಾಮಗಾರಿ ಪ್ರಾರಂಭಕ್ಕೂ ಮುನ್ನಾ ಹಾಗೂ ಮುಗಿದ ನಂತರ ವಿಡಿಯೋ, ಪೋಟೋ ತೆಗೆಯಬೇಕು. ಕೆಲಸ ಪ್ರಗತಿ ಪ್ರತಿ ಹಂತದ ವಿಡಿಯೋ, ಫೋಟೋ ಇರಬೇಕು. ಕಳ್ಳಬಿಲ್ಲು, ಡಬಲ್ ಎಂಟ್ರಿಗೆ ಆಸ್ಪದ ಇಲ್ಲದಂತೆ ಎಚ್ಚರ ವಹಿಸಿ. ಎರಡು ಇಲಾಖೆ, ಎರಡು ಬಿಲ್ ಸೃಷ್ಟಿ ಮಾಡಿದರೆ ಆಕ್ಷನ್ ತಗೋತೀವಿ. ರಸ್ತೆ ಮ್ಯಾಪಿಂಗ್ ಮಾಡಿ. ಯಾವ ಇಲಾಖೆ ಅನುದಾನ, ಎಂಎಲ್‌ಎ, ಎಂಪಿ ಗ್ರಾಂಟ್ ಬಗ್ಗೆ ವಿವರ ಇಡಿ.
ರಾಮನಗರ ಮಳೆ ನೀರು ಪ್ರವಾಹದಿಂದ ನಾಚಿಕೆ ಆಯ್ತು. ಮಳೆ ಪ್ರವಾಹ ಪರಿಶೀಲಿಸಿದ ದಿನ ನನಗೆ ಜ್ವರ ಬಂತು. ಇನ್ನು ಅದರ ನಡುವೆ ಜನ ಹೇಗಿದ್ದರೋ ಗೊತ್ತಿಲ್ಲ. ಉತ್ತಮ
ರಸ್ತೆ, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿ. ಪರಿಸರ ಯೋಜನೆಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ಸ್ಕೂಲ್ ಗಳ ಜತೆ ಒಪ್ಪಂದ ಮಾಡಿಕೊಳ್ಳಿ. ಸುಳ್ಳು ಲೆಕ್ಕದಲ್ಲಿ ಗಿಡ ನೆಡಬೇಡಿ.
ಪುಟ್ ಪಾತ್ ಅಂಗಡಿ ಇರಬಾರದು ಎಂದಲ್ಲ. ಆದರೆ ಜನರಿಗೆ ತಿರುಗಾಡಲು ಅವಕಾಶ ಕಲ್ಪಿಸಿ. ರಸ್ತೆಯಲ್ಲಿ ಬೆಳೆಗಳ ಕಣ ಮಾಡಲು ಅವಕಾಶ ಕೊಡಬೇಡಿ. ಟ್ರಾಕ್ಟರ್ ಗಳಿಗೆ ಡ್ರೈವಿಂಗ್ ಲೈಸೆನ್ಸ್, ಇನ್ಸೂರೆನ್ಸ್ ಕಡ್ಡಾಯ ಇರಬೇಕು. ಇದಕ್ಕೆ 100 ದಿನಗಳ ಗಡುವು. ಹೋಬಳಿವಾರು ಅಭಿಯಾನ ಮಾಡಿ. ಈ ಬಗ್ಗೆ ಕರಪತ್ರ ಹಂಚಿ ಪ್ರಚಾರ ಮಾಡಿ.
ವಿದ್ಯುತ್ ಬಿಲ್ಲು ಹೆಚ್ಚಳ ಬಿಜೆಪಿ ಕಾಲದ್ದು. ಅವರು ತಿಂದು ನಮ್ಮ ಮೂತಿಗ ಒರೆಸಲು ಬಂದಿದ್ದಾರೆ. ಗೃಹ ಜ್ಯೋತಿ ಯೋಜನೆ ಬಗ್ಗೆ ಅರಿವು ಮೂಡಿಸಿ. ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಯೋಜನೆ ಪ್ರಾರಂಭಕ್ಕೆ ಮುಂಚೆ ಎಲ್ಲಾ ಮಾಹಿತಿ ಪಡೆದಿದ್ದೇನೆ.. ಜಿಲ್ಲೆಯಲ್ಲಿ 2000 ಮನೆಗಳು ಮಾತ್ರ ಬಿಲ್ ಕಟ್ಟುವ ವ್ಯಾಪ್ತಿಗೆ ಬರುತ್ತವೆ. ಉಳಿದವರಿಗೆ ಯೋಜನೆ ಸೌಲಭ್ಯ ಸಿಗಬೇಕು.
ಶಿಕ್ಷಣದ ಬಗ್ಗೆ ನನ್ನದೊಂದು ಕನಸಿನ ಯೋಜನೆ ಇದೆ. ಎರಡು-ಮೂರು ಪಂಚಾಯ್ತಿಗೆ ಒಂದು ನವೋದಯ, ಡೆಲ್ಲಿ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಸ್ಕೂಲ್ ಮಾಡಬೇಕು. ಇಡೀ ರಾಜ್ಯಕ್ಕೆ ಈ ಯೋಜನೆ ಅನ್ವಯ. ಇದರಿಂದ ಜನ ನಗರ ಪ್ರದೇಶಕ್ಕೆ ವಲಸೆ ಬರೋದು ತಪ್ಪಿಸಬೇಕು. ಇಡೀ ಜಿಲ್ಲೆಗೆ ಏನೋ ರೋಗ ಬಂದಿದೆ. ಅಧಿಕಾರಿಗಳು ಹಿಂದಿನ ಸರಕಾರದ ಮತ್ತಲ್ಲೇ ಇರುವಂತಿದೆ. ನಿಮ್ಮ ವರ್ತನೆ ಸರಿ ಮಾಡಿಕೊಳ್ಳಬೇಕು.
ಸರಕಾರಿ ಆಸ್ತಿ ಒತ್ತುವರಿ ಮಾಡಿರೋ ಬಗ್ಗೆ ಪಟ್ಟಿ ಮಾಡಬೇಕು. ಬಂದಿರೋ ಅನುದಾನ, ಆಗಿರೋ ಕೆಲಸದ ಬಗ್ಗೆ ವಿವರ ಕೊಡಬೇಕು. ಕುಡಿಯುವ ನೀರು ಪೂರೈಕೆ ಯೋಜನೆಗಳ ಬಗ್ಗೆ ವರದಿ ಕೊಡಬೇಕು. ನೀರಾವರಿ ಯೋಜನೆಗಳ ಪ್ರಗತಿ ಬಗ್ಗೆ ವಿವರ ಕೊಡಿ. ರಸ್ತೆ ಕೆಲಸ ಗುಣಮಟ್ಟ, ಪ್ರಗತಿ, ಅನುದಾನ ಬಿಡುಗಡೆ ಮತ್ತಿತರ ವಿವರ ಬೇಕು ಎಂದು ಸೂಚಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ