National

*ಗ್ಯಾರಂಟಿ ಬಗ್ಗೆ ಸುಳ್ಳು ಜಾಹೀರಾತು ನೀಡುತ್ತಿರುವ ಮಹಾಯುತಿ ನಾಯಕರ ಕರ್ನಾಟಕ ಪ್ರವಾಸಕ್ಕೆ ವಿಶೇಷ ಬಸ್, ವಿಮಾನ ವ್ಯವಸ್ಥೆ ಮಾಡುವೆ: ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ*

ಪ್ರಗತಿವಾಹಿನಿ ಸುದ್ದಿ: “ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಖುದ್ದು ಜನರಿಂದ ಮಾಹಿತಿ ಪಡೆಯಲು ಮಹಾರಾಷ್ಟ್ರದ ಮಹಾಯುತಿ (ಬಿಜೆಪಿ ಮಿತ್ರ ಪಕ್ಷಗಳು) ನಾಯಕರು ಭೇಟಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಶೇಷ ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಹಿರಂಗ ಸವಾಲು ಹಾಕಿದರು.

ಮುಂಬೈನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.

“ಬಿಜೆಪಿಯು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಚಾರವಾಗಿ ಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿತ್ತು. ಈ ಸುಳ್ಳನ್ನು ಬಯಲು ಮಾಡಲು ನಾವು ಮಹಾರಾಷ್ಟ್ರಕ್ಕೆ ಬಂದಿದ್ದೇವೆ. ಯಾವುದೇ ಸಮಯದಲ್ಲಿ ಮಹಾಯುತಿ ನಾಯಕರು ರಾಜ್ಯಕ್ಕೆ ಭೇಟಿ ನೀಡಬಹುದು. ನೇರವಾಗಿ ಜನರ ಬಳಿಗೆ ಬಂದು ಚರ್ಚೆ ಮಾಡಬಹುದು. ನಾನೇ ಖುದ್ದಾಗಿ ನಿಂತು ಈ ವ್ಯವಸ್ಥೆ ಮಾಡಿಕೊಡುತ್ತೇನೆ.” ಎಂದು ಸವಾಲು ಹಾಕಿದರು.

Home add -Advt

ರಾಜ್ಯದ ಜಿಡಿಪಿ ಏರಿಕೆ

“ಗ್ಯಾರಂಟಿ ಯೋಜನೆಗಳು ಜಾರಿಗೂ ಮುನ್ನ ಕರ್ನಾಟಕದ ಜಿಡಿಪಿ ಶೇ 8.2 ರಷ್ಟಿತ್ತು. ಈಗ ಶೇ 10.2 ರಷ್ಟಿದೆ. ಇದು ನನ್ನ ಲೆಕ್ಕಾಚಾರವಲ್ಲ, ಭಾರತ ಸರ್ಕಾರದ ವಿವಿಧ ಸಂಸ್ಥೆಗಳ ಲೆಕ್ಕಾಚಾರ” ಎಂದು ಹೇಳಿದರು.

ಸುಳ್ಳಿನ ವಿರುದ್ಧ ಕಾನೂನಾತ್ಮಕ ಹೋರಾಟ

“ಗ್ಯಾರಂಟಿ ವಿಚಾರವಾಗಿ ಸುಳ್ಳು ಹಬ್ಬಿಸಿದ ಪಕ್ಷಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವ ಕುರಿತು ನಾವು ಯೋಚನೆ ಮಾಡುತ್ತಿದ್ದೇವೆ. ನುಡಿದಂತೆ ನಡಿದ ನಮ್ಮ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಇವರೆಲ್ಲ ದೇಶದ ಮಹಾನ್ ಸುಳ್ಳುಗಾರರು” ಎಂದು ಕಿಡಿಕಾರಿದರು.

“ನಮ್ಮ ಯೋಜನೆಗಳ ಬಗ್ಗೆ ಆರೋಪ ಮಾಡಿ, ಮಹಾರಾಷ್ಟ್ರದ ಜನತೆಗೆ ಕಾಂಗ್ರೆಸ್ ಪಕ್ಷದ ಬದ್ಧತೆ ಹಾಗೂ ಕೆಲಸಗಳ ಬಗ್ಗೆ ಸತ್ಯವನ್ನು ತಿಳಿಸಲು ಅವಕಾಶ ಮಾಡಿಕೊಟ್ಟ ಮಹಾರಾಷ್ಟ್ರದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಧನ್ಯವಾದಗಳು” ಎಂದರು.

ಬಿಜೆಪಿಯಿಂದ ಗ್ಯಾರಂಟಿ ಯೋಜನೆಗಳ ನಕಲು

“ಪ್ರಧಾನಿ ಮೋದಿ ಅವರಿಂದ ಹಿಡಿದು ಬಿಜೆಪಿಯ ಎಲ್ಲಾ ನಾಯಕರು ಹಾಗೂ ಅನೇಕ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡುತ್ತಿದ್ದರು. ಆದರೆ ಈಗ ಅವರೇ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಭರವಸೆ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಹೆಮ್ಮೆ. ಬಿಜೆಪಿ ನಮ್ಮಿಂದ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿದೆ” ಎಂದು ತಿರುಗೇಟು ನೀಡಿದರು.

ಲಕ್ಷಾಂತರ ಜನರ ಬಳಿ ಚರ್ಚೆ ನಡೆಸಿ ತೀರ್ಮಾನ

“ಗ್ಯಾರಂಟಿ ಯೋಜನೆಗಳನ್ನು ಕುರುಡು, ಕುರುಡಾಗಿ ಜಾರಿಗೆ ತಂದಿಲ್ಲ. ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಮೂಲಕ ಈ ದೇಶದ ಲಕ್ಷಾಂತರ ಜನರನ್ನು ಭೇಟಿ ಮಾಡಿ ಅವರ ಬಳಿ ಚರ್ಚೆ ನಡೆಸಿ ಜಾರಿಗೆ ತರಲಾಗಿದೆ” ಎಂದರು.

ಭಾರತ್ ಜೋಡೋ ಯಾತ್ರೆಯ ಫಲ

“ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ ಜೋಡೋ ಯಾತ್ರೆ ಕೇರಳ ನಂತರ ಕರ್ನಾಟಕದಲ್ಲಿ 22 ದಿನಗಳ ಸುದೀರ್ಘ ಕಾಲ್ನಡಿಗೆ ಮೂಲಕ ಹಾದು ಹೋಯಿತು. ನಡಿಗೆ ವೇಳೆ ಸಮಾಜದ ವಿವಿಧ ವರ್ಗಗಳ ಜನರ ಜೊತೆ ರಾಹುಲ್ ಗಾಂಧಿ ಚರ್ಚೆ ನಡೆಸಿದರು. ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಜನರು ಗಮನ ಸೆಳೆಯುತ್ತಾ ಇದ್ದರು. ಈ ಕಾರಣಕ್ಕೆ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಯಿತು” ಎಂದು ಹೇಳಿದರು.

“ನಾವು ಮೊದಲು ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಲಾಯಿತು, ಯುಪಿಎ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ 7 ಕೆ.ಜಿ. ಅಕ್ಕಿ ಕೊಡುತ್ತಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಅದನ್ನು 5 ಕೆ.ಜಿಗೆ ಇಳಿಸಿತ್ತು. ಅದಕ್ಕಾಗಿ ಎರಡನೇ ಗ್ಯಾರಂಟಿಯಾಗಿ 10 ಕೆ.ಜಿ ಅಕ್ಕಿ ನೀಡುವ ‘ಅನ್ನಭಾಗ್ಯ’ ಯೋಜನೆ ಘೋಷಣೆ ಮಾಡಿದೆವು. ನಂತರ ಪ್ರಿಯಾಂಕಾ ಗಾಂಧಿ ಅವರ ಸಮ್ಮುಖದಲ್ಲಿ ಒಂದು ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದೆವು. ಅವರ ಮುಂದೆಯೇ ಗ್ಯಾರಂಟಿ ಚೆಕ್ ಗೆ ಸಹಿ ಹಾಕಿದೆವು. ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ‘ಶಕ್ತಿ’ ಯೋಜನೆ ಹಾಗೂ ನಿರುದ್ಯೋಗದಿಂದ ತತ್ತರಿಸುತ್ತಿದ್ದ ಯುವಕರಿಗೆ ನೇರವಾಗಲು ಡಿಪ್ಲೋಮ ಪದವೀದರರಿಗೆ ₹ 1,500 ಹಾಗೂ ಪದವಿ ಪಡೆದವರಿಗೆ ₹ 3,000 ಸಹಾಯಧನ ನೀಡುವ ಯುವನಿಧಿ ಘೋಷಣೆ ಮಾಡಿ, ಈಗ ಅವುಗಳನ್ನು ಜಾರಿಗೆ ತಂದಿದ್ದೇವೆ” ಎಂದರು.

₹52 ಸಾವಿರ ಕೋಟಿಯಿಂದ ₹56 ಸಾವಿರ ಕೋಟಿಗೆ ಏರಿಕೆ

“136 ಸ್ಥಾನಗಳನ್ನು ಗೆದ್ದು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಗ್ಯಾರಂಟಿಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಲಾಯಿತು. ಇದುವರೆಗೂ ಶಕ್ತಿ ಯೋಜನೆಯಡಿ 336 ಕೋಟಿ ಟ್ರಿಪ್ ಗಳನ್ನು ಮಹಿಳೆಯರು ಸಂಚರಿಸಿದ್ದಾರೆ. 7,892 ಕೋಟಿ ಹಣವನ್ನು ಇದಕ್ಕೆ ಖರ್ಚು ಮಾಡಲಾಗಿದೆ. 1.22 ಕೋಟಿ ಮಹಿಳೆಯರಿಗೆ ಗೃಹಲಕ್ಷೀ ಹಣ ನೀಡಲಾಗುತ್ತಿದೆ. 1.65 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಸೌಲಭ್ಯ ನೀಡುತ್ತಿದ್ದು ₹10,259 ಕೋಟಿ ಹಣ ವಿನಿಯೋಗಿಸಲಾಗಿದೆ. 1.78 ಲಕ್ಷ ಯುವಕರಿಗೆ ಯುವನಿಧಿಯನ್ನು ನೀಡುತ್ತಿದ್ದೇವೆ. ಇದಕ್ಕಾಗಿ 147 ಕೋಟಿ ಹಣ ಹಾಗೂ ಅನ್ನಭಾಗ್ಯ ಯೋಜನೆಯಿಂದ 4.25 ಕೋಟಿ ಜನರಿಗೆ ಅನುಕೂಲವಾಗಿದೆ. ಇದಕ್ಕಾಗಿ ಸುಮಾರು 9,104 ಕೋಟಿ ವಿನಿಯೋಗಿಸಲಾಗಿದೆ. ಒಟ್ಟು ಗ್ಯಾರಂಟಿ ಯೋಜನೆಗಳಿಗೆ ಎಂದು 52 ಸಾವಿರ ಕೋಟಿ ಅನುದಾನವನ್ನು ಮೀಸಲಿದ್ದೇವೆ ಮತ್ತು ಖರ್ಚು ಮಾಡಿದ್ದೇವೆ. ಇದನ್ನು 56 ಸಾವಿರ ಕೋಟಿಗೆ ಏರಿಸುವ ಆಲೋಚನೆಯೂ ಇದೆ” ಎಂದು ವಿವರಿಸಿದರು.

“ಕಳೆದ ವರ್ಷದ ಬಜೆಟ್ ಅಲ್ಲಿ 31 ಸಾವಿರ ಕೋಟಿ ಹಣವನ್ನು ವಿನಿಯೋಗಿಸಲಾಗಿತ್ತು. ನಮ್ಮ ಕರ್ನಾಟಕ ಬಸವಣ್ಣನ ನಾಡು. ನಾವು ನುಡಿದಂತೆ ನಡೆಯುತ್ತೇವೆ. ಅಲ್ಲದೇ ನಮ್ಮ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಲಾಗಿತ್ತು” ಎಂದು ಹೇಳಿದರು.

“ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ಜವಹರ್ ಲಾಲ್ ನೆಹರು ಅವರ ಕಾಲದಿಂದ ಮನಮೋಹನ್ ಸಿಂಗ್ ಅವರ ಕಾಲದವರೆಗೂ ಕಾಂಗ್ರೆಸ್ ನೀಡಿದಂತಹ ಯಾವುದೇ ಯೋಜನೆಗಳನ್ನು ಹಿಂದಕ್ಕೆ ಪಡೆದಿಲ್ಲ. ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳನ್ನು ಹಿಂದಕ್ಕೆ ಪಡೆದಿಲ್ಲ” ಎಂದರು.

“ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೋ ಯಾತ್ರೆಯ ವೇಳೆ ಇನ್ನು ಅನೇಕ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿವೆ. ಅವುಗಳನ್ನು ಹಂತ ಹಂತವಾಗಿ ನಿವಾರಣೆ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಇವುಗಳಿಗೆ ಅಡಿಪಾಯ” ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button