
ಪ್ರಗತಿವಾಹಿನಿ ಸುದ್ದಿ: “ಕಲ್ಯಾಣ ಕರ್ನಾಟಕದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲಲಿದ್ದು, ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಲಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, “ಜನರಿಗೆ ಗ್ಯಾರಂಟಿ ಬಗ್ಗೆ ಭರವಸೆ ಮೂಡಿದೆ. ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ, ನಿರುದ್ಯೋಗಿ ಯುವಕರಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ ಹಾಗೂ ತರಬೇತಿ, 25 ಲಕ್ಷವರೆಗಿನ ಆರೋಗ್ಯ ವಿಮೆ, ರೈತರ ಸಾಲಮನ್ನಾ ಹಾಗೂ ಸ್ವಾಮಿನಾಥನ್ ಆಯೋಗದಂತೆ ಬೆಂಬಲ ಬೆಲೆ, ನರೇಗಾ ಯೋಜನೆಯಲ್ಲಿ ಕೇಂದ್ರದ ಕೂಲಿಯ ಪಾಲು 400ಕ್ಕೆ ಹೆಚ್ಚಳ, ನಗರದಲ್ಲಿ ಉದ್ಯೋಗ ಖಾತ್ರಿ ಯೋಜನೆಗಳು ಜನರನ್ನು ಆಕರ್ಷಿಸಿವೆ. ಇಂತಹ ಒಂದೇ ಒಂದು ಗ್ಯಾರಂಟಿ ಬಿಜೆಪಿ ನೀಡಿಲ್ಲ ಎಂದರು.
ಮೋದಿ ಗ್ಯಾರಂಟಿಯಲ್ಲಿ ಜನರಿಗೆ ಹೊಟ್ಟೆ ತುಂಬಿಸುವ, ಜನರ ಬದುಕಿನಲ್ಲಿ ಬದಲಾವಣೆ ತರುವ ಯೋಜನೆಗಳಲ್ಲ. ನಾವು ಜನರ ಬದುಕಿನ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದು ದೇಶದೆಲ್ಲೆಡೆ ಇಂಡಿಯಾ ಮೈತ್ರಿ ಕೂಟದ ಬಗ್ಗೆ ಒಲವು ಮೂಡುತ್ತಿದೆ. ಹೀಗಾಗಿ ನಮಗೆ ಉತ್ತಮ ಫಲಿತಾಂಶ ಸಿಗಲಿದೆ ಎಂದರು.
ಪೆನ್ ಡ್ರೈವ್ ಪ್ರಕರಣ ತನಿಖೆಗೆ ಸಂಪೂರ್ಣ ಸ್ವಾತಂತ್ರ್ಯ:
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಪತ್ರಿಕೆಗಳಲ್ಲಿ ಓದಿದೆ. ನನಗೆ ಹೆಚ್ಚಿನ ಮಾಹಿತಿ ಇಲ್ಲ. ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ನಾವು ಅವರಿಗೆ ತನಿಖೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ಹೇಳುವ ಮೂಲಕ ಕುಮಾರಣ್ಣ ಹಾಗೂ ಬಿಜೆಪಿ ತನಿಖೆಗೆ ಸ್ವಾತಂತ್ರ್ಯ ನೀಡಿದ್ದಾರೆ. ತನಿಖೆ ಅದರ ಪಾಡಿಗೆ ನಡೆಯಲಿದೆ” ಎಂದರು.
ರಾಜುಗೌಡ ಹುಚ್ಚ:
ಡಿ.ಕೆ. ಶಿವಕುಮಾರ್ ಸಿ.ಡಿ ಯೂನಿವರ್ಸಿಟಿ ಇಟ್ಟುಕೊಂಡಿದ್ದಾರೆ ಎಂಬ ಬಿಜೆಪಿ ಮಾಜಿ ಶಾಸಕ ರಾಜುಗೌಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ರಾಜುಗೌಡ ಹುಚ್ಚ, ಬಿಜೆಪಿ ಹಾಗೂ ದಳದವರು ಆಗಾಗ್ಗೆ ನನ್ನನ್ನು ಸ್ಮರಿಸುತ್ತಿದ್ದಾರೆ ಬಹಳ ಸಂತೋಷ. ಅವರ ವಿಕೆಟ್ ಬೀಳುವಾಗ ತಂಡದ ನಾಯಕನನ್ನು ನೆನೆಸಿಕೊಳ್ಳದೇ ಬೇರೆಯವರನ್ನು ನೆನೆಸಿಕೊಳ್ಳಲು ಸಾಧ್ಯವೇ? ಬಿಜೆಪಿ ಯಾವುದೇ ನಾಯಕರು ಏನೇ ಮಾಡಿದರೂ ನಾವು ಮೋದಿ ಅವರನ್ನು ಪ್ರಶ್ನೆ ಮಾಡುವುದಿಲ್ಲವೇ ಅದೇ ರೀತಿ ನನ್ನನ್ನು ನೆನೆಸಿಕೊಳ್ಳುತ್ತಿದ್ದಾರೆ. ಎಲ್ಲಾ ವಿಚಾರದಲ್ಲೂ ಬೀದಿಗಿಳಿದು ಮಾತನಾಡುವ ಬಿಜೆಪಿ ನಾಯಕರು ಪ್ರಜ್ವಲ್ ವಿಚಾರದಲ್ಲಿ ಏಕೆ ಮಾತನಾಡುತ್ತಿಲ್ಲ? ಅವರ ಪಕ್ಷದ ನಾಯಕರು ಸಂತ್ರಸ್ತೆಯರಿಗೆ ಸಾಂತ್ವನ ಹೇಳಲು ಏಕೆ ಹೋಗುತ್ತಿಲ್ಲ.
ಸಿ.ಟಿ ರವಿ, ಶೋಭಕ್ಕ, ಬೊಮ್ಮಾಯಿ, ಪ್ರಹ್ಲಾದ್ ಜೋಷಿ ಯಾಕೆ ಮಾತಾಡುತ್ತಿಲ್ಲ. ಹುಬ್ಬಳ್ಳಿ ಹುಡುಗಿ ಹತ್ಯೆ ಪ್ರಕರಣದಲ್ಲಿ ನಾವು ಆರೋಪಿ ಬಂಧಿಸಿ ತನಿಖೆ ನಡೆಸುತ್ತಿದ್ದರೂ ಅವರು ಎಷ್ಟೆಲ್ಲಾ ಮಾತನಾಡಿದರು. ಈ ಪ್ರಕರಣದಲ್ಲಿ ಯಾಕೆ ಮಾತಾಡುತ್ತಿಲ್ಲ?” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ